ಬನ್ನಿ, ಹಕ್ಕು ಚಲಾಯಿಸೋಣ...
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಮಾ.6
ದೊಡ್ಡಬಳ್ಳಾಪುರ ನಗರಸಭೆಯ 31 ವಾರ್ಡುಗಳಿಗೆ ಗುರುವಾರ ನಡೆಯಲಿರುವ ಚುನಾವಣೆಗೆ ಸಕಲ ಸಿದ್ಧತೆಗಳು ಪೂರಗೊಂಡಿವೆ. ಬುಧವಾರ ಬೆಳಗ್ಗೆಯೇ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳಿಗೆ ಮತಗಟ್ಟೆ ಸಾಮಗ್ರಿಗಳನ್ನು ವಿತರಿಸಿ ವ್ಯವಸ್ಥಿತ ನಿರ್ದೇಶನ ನೀಡಿ ಮತಗಟ್ಟೆಗಳಿಗೆ ಕಳುಹಿಸಲಾಗಿದೆ.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ತಾಲೂಕು ಆಡಳಿತ ಮತ್ತು ಚುನಾವಣಾ ವೀಕ್ಷಕರ ಮೂಲಕ ನಿರ್ದೇಶನ ನೀಡಲಾಯಿತು. ಅಧಿಕಾರಿಗಳು ಚುನಾವಣಾ ಸಿಬ್ಬಂದಿಯಿಂದ ಮತದಾನ ಪ್ರಕ್ರಿಯೆಗೆ ಬೇಕಾದ ಎಲೆಕ್ಟ್ರಾನಿಕ್ ಮತಯಂತ್ರ, ಮತದಾರರ ವಿವರ, ಮತಪತ್ರ, ಅಭ್ಯರ್ಥಿಗಳ ವಿವರ, ಶಾಹಿ ಸೇರಿದಂತೆ ಎಲ್ಲಾ ಸಾಮಗ್ರಿಗಳನ್ನು ಪಡೆದು ಪರಿಶೀಲಿಸಿದರು. ನಂತರ ಅವರವರಿಗೆ ನಿಯೋಜಿಸಲಾಗಿದ್ದ ಮತಗಟ್ಟೆಗಳಿಗೆ ಸರ್ಕಾರಿ ವಾಹನದಲ್ಲಿ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ದೊಡ್ಡಬಳ್ಳಾಪುರದ ಚುನಾವಣಾ ಕಾರ್ಯಕ್ಕೆ ಬೆಂ.ಗ್ರಾ.ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ಹೊಸಕೋಟೆ ಸೇರಿದಂತೆ ಎಲ್ಲ 4 ತಾಲೂಕುಗಳ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ.
68 ಮತಗಟ್ಟೆಗಳು: ಪ್ರಸ್ತುತ ನಗರಸಭಾ ಚುನಾವಣೆಗೆ ನಗರದ 31 ವಾರ್ಡುಗಳಲ್ಲಿ ಒಟ್ಟು 68 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕಳೆದ ಬಾರಿಗಿಂತ 2 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ಮಾಡಲಾಗಿದ್ದು, ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧ್ಯಕ್ಷಾಧಿಕಾರಿ, 1ನೇ ಮತ್ತು 2ನೇ ಮತಗಟ್ಟೆ ಅಧಿಕಾರಿ, ಗ್ರೂಪ್ ಡಿ ಸಿಬ್ಬಂದಿ, ಪೊಲೀಸ್ ಪೇದೆ, ಹೋಂಗಾರ್ಡ್ ಸೇರಿದಂತೆ ಕನಿಷ್ಠ 8 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ತಾಲೂಕು ಆಡಳಿತ ಕೈಗೊಂಡಿದೆ. ಇದಲ್ಲದೆ ನಗರಸಭೆ ಹಂತದಲ್ಲಿ ಒಬ್ಬ ವೀಕ್ಷಕರು, ಒಬ್ಬ ಚುನಾವಣಾಧಿಕಾರಿಗಳು, 8 ಮಂದಿ ಉಪ ಚುನಾವಣಾಧಿಕಾರಿಗಳು, ಆರ್‌ಓಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
9 ಅತಿಸೂಕ್ಷ್ಮ ಮತಗಟ್ಟೆಗಳು: ಒಟ್ಟು 68 ಮತಗಟ್ಟೆಗಳಲ್ಲಿ 9 ಅತಿ ಸೂಕ್ಷ್ಮ, 11 ಸೂಕ್ಷ್ಮ, 48 ಸಾಮಾನ್ಯ ಮತಗಟ್ಟೆಗಳಾಗಿವೆ. 1ನೇ ವಾರ್ಡ್ ಸೋಮೇಶ್ವರ ಬಡಾವಣೆ ಸರ್ಕಾರಿ ಶಾಲೆ(ರಾಜೀವಗಾಂಧಿ ಬಡಾವಣೆ), 2ನೇ ವಾರ್ಡ್ ಗಂಗಾಧರಪುರ ಸರ್ಕಾರಿ ಶಾಲೆ, 6ನೇ ವಾರ್ಡ್ ಖಾಸ್‌ಬಾಗ್‌ನ ಮುತ್ತೂರು ಸರ್ಕಾರಿ ಶಾಲೆ ರೂಂ.1, 9ನೇ ವಾರ್ಡ್ ಸಂಜಯನಗರ ಅರವಿಂದ ಡಿಇಡಿ ಕಾಲೇಜು ರೂ.ನಂ.2, 10ನೇ ವಾರ್ಡ್ ವೀರಭದ್ರನಪಾಳ್ಯ ಅರಳುಮಲ್ಲಿಗೆಬಾಗಿಲು ಸರ್ಕಾರಿ ಶಾಲೆ ರೂ.ನಂ.2, 11ನೇ ವಾರ್ಡ್ ಕರೇನಹಳ್ಳಿ ಕೊಂಗಾಡಿಯಪ್ಪ ಕಾಲೇಜು ರೂ.ನಂ.2, 23ನೇ ವಾರ್ಡ್ ಚಿಕ್ಕಪೇಟೆ ಸರ್ಕಾರಿ ಉರ್ದುಶಾಲೆ ರೂ.ನಂ.1, 25ನೇ ವಾರ್ಡ್ ಎಲೆಪೇಟೆ ಸರ್ಕಾರಿ ಶಾಲೆ ರೂ.ನಂ.1 ಮತ್ತು 30ನೇ ವಾರ್ಡ್ ಶಾಂತಿನಗರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ರೂ.ನಂ.1ರ ಮತಗಟ್ಟೆಗಳು ಅತಿ ಸೂಕ್ಷ್ಮ ಮತಗಟ್ಟೆಗಳಾಗಿವೆ.ಒಟ್ಟು 31 ವಾರ್ಡುಗಳಿಂದ 55691 ಮತದಾರರು ಇದ್ದು, 28579 ಪುರುಷರು ಮತ್ತು 27112 ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ. ಮತದಾನ ಮಾಡಲು ಚುನಾವಣಾ ಆಯೋಗ ನಿಗಧಿ ಮಾಡಿರುವ ಯಾವುದಾದರೊಂದು ಅಧಿಕೃತ ಭಾವಚಿತ್ರವಿರುವ ಗುರುತಿನ ಪತ್ರವನ್ನು ಹಾಜರುಪಡಿಸಬೇಕಾಗಿರುತ್ತದೆ ಎಂದು ತಾಲೂಕು ಆಡಳಿತ ತಿಳಿಸಿದೆ.
ಬಿಗಿ ಭದ್ರತೆ: ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಬಿಗಿ ಭದ್ರತೆ ಮಾಡಲಾಗಿದೆ. ಮತಯಂತ್ರಗಳನ್ನು ಸಂಗ್ರಹಿಸಿಡಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ಸಿದ್ಧಗೊಂಡಿದೆ. ಮಾ.7ರಂದು ನಡೆಯುವ ಮತದಾನದ ಮತಯಂತ್ರಗಳನ್ನು ಮಾ.11ರಂದು ನಡೆಯುವ ಎಣಿಕೆ ಪ್ರಕ್ರಿಯೆಯವರೆಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸಂಗ್ರಹಿಸಿಡುವ ವ್ಯವಸ್ಥೆಯನ್ನು ಚುನಾವಣಾ ವೀಕ್ಷಕರು ಬುಧವಾರ ಪರಿಶೀಲನೆ ನಡೆಸಿದರು.