ಮತದಾರರಿಗೆ ಭರ್ಜರಿ ಆಮಿಷ
ಕ.ಪ್ರ. ವಾರ್ತೆ ಟಿ ದೊಡ್ಡಬಳ್ಳಾಪುರ ಟಿ ಮಾ.6
ನಗರಸಭೆ ಚುನಾವಣೆಯಲ್ಲಿ ಈ ಬಾರಿ ಹಣದ ಹೊಳೆ ಹರಿಯುತ್ತಿದೆ. ಎಲ್ಲ 31 ವಾರ್ಡುಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಕೆಲವೆಡೆ ಪಕ್ಷೇತರ ಅಭ್ಯರ್ಥಿಗಳು ಮತದಾರರಿಗೆ ಭರ್ಜರಿ ಆಮಿಷ ಒಡ್ಡುತ್ತಿದ್ದಾರೆ. ಮತಬೇಟೆಗೆ ಶತಾಯಗತಾಯ ಪ್ರಯತ್ನ ನಡೆಸಿರುವ ಮತ್ತು ಪ್ರತಿಷ್ಠೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕೆಲವರು ಭರಪೂರ ಕೊಡುಗೆಗಳನ್ನು ಮತದಾರರಿಗೆ ನೀಡುತ್ತಿದ್ದಾರೆ. ಸ್ಥಳೀಯ ಮತದಾರರು ಹೇಳುವಂತೆ ಇಲ್ಲಿನ ಕೆಲ ವಾರ್ಡುಗಳಲ್ಲಿ ಈಗಾಗಲೇ ಅಭ್ಯರ್ಥಿಗಳಿಂದ ಮತದಾರರಿಗೆ ಸೀರೆ, ಮೂಗಿನ ಬೊಟ್ಟು, ಬಾಗೀನ ಜೊತೆಗೆ ಒಂದಿಷ್ಟು ದಕ್ಷಿಣೆ ಕೈಸೇರಿದೆ. ಕೆಲವೆಡೆ ಅಭ್ಯರ್ಥಿಗಳು ಹಂಚುತ್ತಿರುವ ತಿರುಪತಿ ಲಾಡು ಮೋಡಿ ಮಾಡುತ್ತಿದೆ. ಅಭ್ಯರ್ಥಿಗಳು ಮತದಾರರನ್ನು ಓಲೈಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತವೊಂದಕ್ಕೆ ಜೊತೆಗೆ 500 ರಿಂದ 1000 ರು ಕೊಡಲೂ ಸಿದ್ಧರಿದ್ದಾರೆ. ಕೆಲವರು ಈಗಾಗಲೇ ಮತದಾನದ ಚೀಟಿಯ ಜೊತೆಗೇ ನೋಟುಗಳನ್ನೂ ಸೇರಿಸಿ ಕೊಟ್ಟಿದ್ದಾಗಿದೆ ಎಂದು ಹೇಳಿದ್ದಾರೆ. ಇನ್ನು ಅಭ್ಯರ್ಥಿಗಳ ಹಿಂದೆ-ಮುಂದೆ ಸುಳಿದಾಡುತ್ತ ಮತಪ್ರಚಾರದಲ್ಲಿ ತೊಡಗಿರುವ ಕಾರ್ಯಕರ್ತರಂತೂ ಈ ಬಾರಿ ಫುಲ್ ಖುಷ್ ಆಗಿದ್ದಾರೆ. ದಿನಮೊಂದಕ್ಕೆ ಕನಿಷ್ಠ 300ರಿಂದ 500ರುಗಳವರೆಗೆ ಸಂಪಾದಿಸಿದ್ದೆವು ಎನ್ನುವ ಸಾರ್ಥಕ ಭಾವ ಕೆಲ ಕಾರ್ಯಕರ್ತರದ್ದು. ಇಂತಹ ಚುನಾವಣಾ ಅಕ್ರಮಗಳು ನಡೆಯುತ್ತಿದ್ದರೂ, ರಾಜಾರೋಷವಾಗಿ ಹಣ ಹಂಚಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.