ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಚಕಮಕಿ
ಕನಕಪುರ: ಪುರಸಭಾ ಚುನಾವಣೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಪೂರಗೊಂಡಿತು. ವಾರ್ಡ್ ನಂ.2, 17, 18, 21, 24 ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸ್ ಬಿಗಿ ಬಂದೋಬಸ್ತ್‌ಕಾರಣದಿಂದ ಪಟ್ಟಣದ ಎಲ್ಲಿಯೂ ಘರ್ಷಣೆಗಳು ನಡೆಯಲಿಲ್ಲ. ಕನಕಪುರ ಪಟ್ಟಣದ 27 ವಾರ್ಡ್‌ಗಳಲ್ಲಿ 42 ಮತಗಟ್ಟೆಗಳನ್ನು ಸ್ಥಾಪಲಿಸಲಾಗಿತ್ತು. ಒಟ್ಟಾರೆ 41,451 ಮತದಾರರಿದ್ದು, ಅವರಲ್ಲಿ 15,358 ಪುರುಷರು ಹಾಗೂ 15,513 ಮಂದಿ ಮಹಿಳೆಯರು ಸೇರಿದಂತೆ ಒಟ್ಟಾರೆ 30,814 ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಶೇ.74.40 ಮತದಾನ ದಾಖಲಾಗಿದೆ. ಅತಿಹೆಚ್ಚು ಮತದಾನ ಕುರೂಪೇಟೆ ವಾರ್ಡ್ ನಂ.23ರಲ್ಲಿ ಶೇ.89.96 ಮತದಾನವಾಗಿದ್ದರೆ, ಅತಿಕಡಿಮೆ ಮತದಾನ ಕೆಳಗಿನ ಕೋಟೆ ವಾರ್ಡ್ ನಂ.26 ರಲ್ಲಿ ಶೇ.55.99 ನಡೆದಿದೆ. ಪುರಸಭಾ ಚುನಾವಣೆಯಲ್ಲಿ ಹಣ ಹಂಚಲು ಹೋಗುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರಿಂದ ತಾಲೂಕು ಆಡಳಿತ ಒಟ್ಟಾರೆ 68,500 ರು.ವಶಪಡಿಸಿಕೊಂಡಿದೆ. ಚುನಾವಣಾ ಮತಗಟ್ಟೆಗೆ ಅನಧಿಕೃತವಾಗಿ ಭೇಟಿ ನೀಡುತ್ತಿದ್ದ ಆರೋಪದ ಮೇಲೆ ಜೆಡಿಎಸ್ ಕಾರ್ಯಕರ್ತ ಎಲ್‌ಐಸಿ ಗಬ್ಬಾಡಿದೇವರಾಜು ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿದ್ದಾರೆ. ಮಹಾರಾಜರ ಕಟ್ಟೆ ಪ್ರದೇಶದಲ್ಲಿ ಮತದಾರರಿಗೆ ಮಾದಕ ಪಾನೀಯಗಳನ್ನು ಸರಬರಾಜು ಮಾಡುತ್ತಿದ್ದ ಎರಡೂ ಪಕ್ಷಗಳ ಕಾರ್ಯಕರ್ತರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಚುನಾವಣಾಧಿಕಾರಿ ತಹಸೀಲ್ದಾರ್ ಡಾ. ದಾಕ್ಷಾಯಣಿ ಹಾಗೂ ಸಿಬ್ಬಂದಿವರ್ಗದವರು, ಚುನಾವಣಾ ನೀತಿಸಂಹಿತೆ ಅಧಿಕಾರಿಗಳಾದ ಮಾಯಣ ಗೌಡ, ಆರಕ್ಷಕ ಸಿಬ್ಬಂದಿ ಶಾಂತಿಯುತ ಮತದಾನ ನಡೆಯಲು ಶ್ರಮಿಸಿದ್ದಾರೆ.