ಬೊಂಬೆನಗರಿಯಲ್ಲಿ ಚುರುಕಿನ ಮತದಾನ
ಕ.ಪ್ರ. ವಾರ್ತೆ ಚನ್ನಪಟ್ಟಣ ಮಾ.7
ನಗಸರಭೆ ಚುನಾವಣೆಗೆ ಬೊಂಬೆನಗರಿಯ ಮತದಾರ ಪ್ರಭು ಉತ್ತಮ ಪ್ರತಿಕ್ರಿಯೆ ತೋರಿದ್ದು, ಕೆಲವೆಡೆ ಸಣಪುಟ್ಟ ಘರ್ಷಣೆಯನ್ನು ಹೊರತು ಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು ಪಟ್ಟಣದಲ್ಲಿ ಶೇ.74.5 ರಷ್ಟು ಮತದಾನ ನಡೆದಿದೆ.
ಗುರುವಾರ ಮುಂಜಾನೆಯಿಂದಲೇ ಬಿರುಸಿನ ಮತದಾನ ನಡೆಯಿತಾದರೂ, ಅಪರಾಹ್ನದ ಬಳಿಕ ಮತದಾನ ಕುಂಟಿತಗೊಂಡಿದ್ದು ಸಂಜೆ ನಾಲ್ಕು ಗಂಟೆಯ ಬಳಿಕ ಮತ್ತೆ ಬಿರುಸು ಗೊಂಡಿತು. 5ಗಂಟೆಗೆ ಮತದಾನ ಮುಕ್ತಾಯ ವಾಗಬೇಕಿತ್ತಾದರೂ ಟಿಪ್ಪುನಗರ,ಇಂದಿರಾಕಾಟೇಜ್‌ನಲ್ಲಿ ಮತದಾರರು ಕಿಕ್ಕಿರಿದು ತುಂಬಿದ ಪರಿಣಾಮ ಮತದಾನಕ್ಕೆ ಅವಕಾಶ ನೀಡಲಾಯಿತು.
ಆಹಾರ ಮತ್ತು ನಾಗರೀಕ ಪೂರೈಕೆ ನಿಗಮ ಮಂಡಲಿ ಮಾಜಿ ಅಧ್ಯಕ್ಷ ಎಂ.ಸಿ.ಅಶ್ವತ್ಥ್, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಸೇರಿದಂತೆ ಗಣ್ಯರು ಮತಗಟ್ಟೆಗೆ ತೆರಳಿ ಮತಚಲಾಯಿಸಿದರು.
ಕೊನೆಕ್ಷಣದ ಕಸರತ್ತು: ಮತದಾರರ ಮನವೊಲಿಸಲು ಕೊನೆಯ ಕ್ಷಣದ ವರೆಗೂ ಕಸರತ್ತು ನಡೆಸುತ್ತಿದ್ದ ಅಭ್ಯರ್ಥಿಗಳು ಮತ್ತವರ ಬೆಂಬಲಿಗರು, ಮತಗಟ್ಟೆಯ ಬಳಿ ನಿಂತು ಮತದಾರರನ್ನು ನಮಗೇ ಮತನೀಡಿ ಎಂದು ಒಲೈಸುತ್ತಿದ್ದ ದೃಶ್ಯ ಕಂಡು ಬಂದಿತು.
ಕುತೂಹಲದ ಕಣಗಳು: ಪಟ್ಟಣದ 2,5,10,18,27,31 ನೇ ವಾರ್ಡ್‌ಗಳು ಬಾರೀಕುತೂಹಲದ ಕಣಗಳೆನಿಸಿದ್ದು, ಜೆಡಿಎಸ್,ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಈ ವಾರ್ಡುಗಳಲ್ಲಿ ಖುದ್ದು ತಾವೇ ನಿಂತು ಮತದಾರರನ್ನು ಒಲೈಸುತ್ತಿದ್ದರು.
ಈ ವಾರ್ಡ್‌ಗಳ ಸೂಕ್ಷ್ಮತೆಯನ್ನಿರಿತ ಜಿಲ್ಲಾಡಳಿತ ಹೆಚ್ಚಿನ ಪೊಲೀಸ್ ಬಂದೋಬಸ್ ಕಲ್ಪಿಸಿದ್ದರಲ್ಲದೆ, ಈ ವಾರ್ಡ್ ಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು, ಚುನಾವಣಾಧಿಕಾರಿಗಳು ಆಗಾಗ್ಗೆ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸುತ್ತಿದ್ದು ಕಂಡು ಬಂದಿತು.
ಅಲ್ಲಲ್ಲಿ ಮಾತಿನ ಚಕಮಕಿ
ನಗರಸಭಾ ಚುನಾವಣೆ ಶಾಂತಿಯುತವಾಗಿ ನಡೆಯಿತಾದರೂ ಅಲ್ಲಲ್ಲಿ ಸಣಪುಟ್ಟ ಗಲಬೆಗಳು ನಡೆದಿವೆ. ಪಟ್ಟಣದ 27 ನೇ ವಾರ್ಡ್ ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಕ್ಸಮರ ನಡೆದಿದ್ದರೆ, 25 ನೇ ವಾರ್ಡ್ ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತ ತಲುಪಿತಾದರೂ ಸಕಾಲದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಡೂಂಲೈಟ್ ಸರ್ಕಲ್‌ನಲ್ಲಿ ಪಕ್ಷೇತರ ಅಭ್ಯರ್ಥಿಯ ಮಗ ಮತ್ತು ಜೆಡಿಎಸ್ ಅಭ್ಯರ್ಥಿಯ ಬೆಂಬಲಿಗರ ನಡುವೆ ಗಲಾಟೆ ನಡೆದು ಜೆಡಿಎಸ್ ಕಾರ್ಯಕರ್ತನಿಗೆ ಪಟ್ಟು ಬಿದ್ದಿದೆ. ಮತಗಟ್ಟೆಯ ಬಳಿ ಇದ್ದ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿದ ಘಟನೆ ಸಹ ನಡೆಯಿತು.
ಕಿತ್ತಾಟ ತಂಡಿಟ್ಟ ಪಟಾಕಿ
ಪಟ್ಟಣದ 7 ನೇವಾರ್ಡ್ ನಲ್ಲಿ ಮತದಾನ ಮುಗಿಯುವ ಹಂತದಲ್ಲಿ ಗೆಲವು ನಮ್ಮದೇ ಎಂದು ಕಾಂಗ್ರೆಸ್‌ಮತ್ತು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿದ ಪರಿಣಾಮ ಕೆಲಕಾಲ ಗೊಂದಲ ಉಂಟಾಯಿತು. ಪಟಾಕಿ ಹೊಡೆದ ಸಂಬಂಧ ಎರಡೂ ಪಕ್ಷಗಳ ಕಾರ್ಯಕರ್ತರು ಕಿತ್ತಾಟಕ್ಕೆ ಇಳಿದು ಕೈಕೈ ಮಿಲಾಯಿಸಿದರಾದರೂ ಕೆಲ ಹಿರಿಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಬಂಧನದ ಭೀತಿಯಿಂದ ಜಾಗಖಾಲಿ
ಕೆಲದಿನಗಳ ಹಿಂದೆ ಮದೀನಾಚೌಕ್‌ನಲ್ಲಿ ಕರ್ತವ್ಯನಿರತ ಪಿಎಸ್‌ಐ ಮೇಲೆ ಹಲ್ಲೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಮಂದಿ ಯುವಕರನ್ನು ಪೊಲೀಸರು ಮತದಾನ ಮುಗಿದ ಕ್ಷಣದಲ್ಲೇ ಬಂಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದ ಪರಿಣಾಮ ಮತಗಟ್ಟೆಯ ಸಮೀಪ ಕೆಲ ಯುವಕರು ಸುಳಿದಾಡದೆ ತಲೆ ಮರೆಸಿಕೊಂಡಿದ್ದ ಘಟನೆ ಸಹ ನಡೆಯಿತು. ಪೊಲೀಸರ ಪಟ್ಟಿಯಲ್ಲಿ ಯಾರ ಹೆಸರಿದೆ ಎಂದು ಕೆಲ ಮುಖಂಡರು ತಲೆಕೆಡಿಸಿ ಕೊಂಡರೆ, ಮತ್ತೆ ಕೆಲ ಮಂದಿ ಈ ಗೋಜಲೇ ಬೇಡ ಎಂದು ಮತಹಾಕಿ ಮೆಲ್ಲಗೆ ಪಟ್ಟಣದಿಂದಲೇ ಜಾಗಖಾಲಿ ಮಾಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜೆಡಿಎಸ್ ನಗರಸಭಾ ಅಭ್ಯರ್ಥಿಯೊಬ್ಬರು ಸೇರಿದಂತೆ ಇತರ 50 ಮಂದಿಯ ಮೇಲೆ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.
31ನೇ ವಾರ್ಡ್‌ನಲ್ಲಿ ಕೋಳಿ ಜಗಳ
ಪಟ್ಟಣದ 31ನೇ ವಾರ್ಡ್ ನಲ್ಲಿ ಮತಗಟ್ಟೆಯ ಸಮೀಪವೇ ಇದ್ದ ಕೋಳಿ ಅಂಗಡಿಯೊಂದು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವಿನ ಕಾದಾಟಕ್ಕೆ ಅಖಾಡವಾಗಿ ಪರಿಣಮಿಸಿತು. ಈ ಕೋಳಿ ಅಂಗಡಿಯಿಂದ ಜೆಡಿಎಸ್‌ನವರು ಮತದಾರರಿಗೆ ಕೋಳಿ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೋಳಿಜಗಳ ತೆಗೆದು ತಹಸೀಲ್ದಾರರ ಮೂಲಕ ಅಂಗಡಿಗೆ ಬೀಗ ಹಾಕಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದು ನಾವು ಯಾವುದೇ ಕೋಳಿಯನ್ನು ನೀಡುತ್ತಿಲ್ಲ, ಮತದಾರರಿಗೆ ಆಮೀಷ ನೀಡುವುದು ಯೋಗೇಶ್ವರ್ ಸಂಸ್ಕೃತಿ ಅವರ ಶಿಷ್ಯ ಕುಮಾರ್ ಅದೇ ಪ್ರವೃತ್ತಿಯನ್ನು ಮುಂದುವರೆಸಿ ನಮ್ಮ ಮೇಲೆ ದೂರುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಕೋಳಿ ಜಗಳ ಕೆಲಕಾಲ ಜೆಡಿಎಸ್, ಕಾಂಗ್ರೆಸ್ ನಡುವಿನ ಕಾದಾಟಕ್ಕೆ ಎಡೆಮಾಡಿ ಕೊಟ್ಟಿತು.
ಮತಯಂತ್ರಕ್ಕೆ ಪೂಜೆ
ಪಟ್ಟಣದ ಕೆಲವಾರ್ಡ್ ಗಳಲ್ಲಿ ಮತಯಂತ್ರಕ್ಕೆ ಪೂಜೆ ಮಾಡಿ ಬಳಿಕ ಮತಚಲಾವಣೆ ಮಾಡಿದ ಪ್ರಸಂಗ ನಡೆಯಿತು. ಕೆಲ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಮತಯಂತ್ರ ನಮಗೇ ಗೆಲವು ತಂದು ಕೊಡಲಿ ಎಂದು ಪೂಜೆ ಮಾಡಿದ ಬಳಿಕ ಮತದಾನಕ್ಕೆ ಮುಂದಾದರು.