ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರಾತ್ರಿಯಿಡೀ ನಿಲ್ಲದ ಮತಬೇಟೆ ಕಾರ್ಯಾಚರಣೆ... ನಿದ್ರಾಭಂಗ ತಂದ ಕೋಳಿ ಕೂಗು

Rashmi Kasaragodu
Updated On : 8 Mar 2013, 12:33 pm

ಮತ್ತೀಕೆರೆ ಜಯರಾಮ್
ರಾಮನಗರ: ರಾತ್ರಿಯಿಡೀ ನಿಲ್ಲದ ಮತಬೇಟೆ ಕಾರ್ಯಾಚರಣೆ... ನಿದ್ರಾಭಂಗ ತಂದ ಕೋಳಿ ಕೂಗು... ಬಳುವಳಿಗೆ ಕಾದು ಕುಳಿತ ಮಂದಿ... ಬೆಳ್ಳಂಬೆಳಗ್ಗೆಯೇ ಮೂಗಿಗೆ ಬಡಿದ ಬಾಡೂಟದ ಘಮಲು... ನಿಶಾಬಾಜಿಯಲ್ಲಿ ತೇಲಿದ ಪ್ರಭುಗಳು... ಮತಗಟ್ಟೆಗಳ ಬಳಿಯೂ ಹಣ ಬಟಾವಡೆ... ಭಿಕ್ಷೆಗೆ ನಿಂತ ಅಭ್ಯರ್ಥಿಗಳು... ಕ್ಯಾರೇ ಎನ್ನದೆ ಕಣ್ಮುಚ್ಚಿದ ಅಧಿಕಾರಿಗಳು... ಪೇಚಿಗೆ ಸಿಲುಕಿದ ಜಿಲ್ಲಾಡಳಿತ...
ಇವಿಷ್ಟು, ರಾಮನಗರ ಜಿಲ್ಲೆಯ ಭ್ರಷ್ಟಾತಿಭ್ರಷ್ಟ ಚುನಾವಣಾ ವ್ಯವಸ್ಥೆಯಲ್ಲಿ ಕಂಡು-ಕೇಳಿದ ಸತ್ಯ ಸಂಗತಿಗಳು. ಇಲ್ಲಿನ ತಲಾ 2 ನಗರಸಭೆ ಮತ್ತು ಪುರಸಭೆಗಳ ಚುನಾವಣೆ ಹಿಂದೆಂದೂ ಕಂಡರಿಯದ ಮಟ್ಟಿಗೆ ಹದಗೆಟ್ಟಿದೆ. ಈ ಬಾರಿ ರಾಜಕೀಯ ಮುಖಂಡರು, ಅಭ್ಯರ್ಥಿಗಳು ಮತ್ತು ಬೆಂಬಲಿಗರಿಂದ ನೀತಿ ಸಂಹಿತೆ ಉಲ್ಲಂಘನೆ ಲೆಕ್ಕವಿಲ್ಲದಷ್ಟು ನಡೆದಿದೆ. ಬುಡಮೇಲಾದ ವ್ಯವಸ್ಥೆಗೆ ಮತದಾರರೂ ಒಗ್ಗಿಕೊಂಡಿರುವುದಕ್ಕೆ ಮೇಲಿನ ಸಂಗತಿಗಳು ಸಾಕ್ಷಿಯಾಗಿವೆ.
ನಿಲ್ಲದ ಕಾರ್ಯಾಚರಣೆ: ಮತದಾನಕ್ಕೆ ಮುನ್ನಾ ರಾತ್ರಿಯಿಡೀ ಮತಬೇಟೆಯ ಕಾರ್ಯಾಚರಣೆ ಬಲು ಜೋರಾಗಿಯೇ ನಡೆದಿದೆ. ನಿಜಕ್ಕೂ ಚುನಾವಣಾ ರಣಾಂಗಣದಲ್ಲಿ ಅಭ್ಯರ್ಥಿಗಳ ಕಸರತ್ತು ತೀವ್ರಗೊಂಡಿದ್ದೇ ಬಹಿರಂಗ ಪ್ರಚಾರ ಅಂತ್ಯದ ಬಳಿಕ. ಹಾದಿ, ಬೀದಿಗಳಲ್ಲಿ ದಂಡು ಸಮೇತ ಪ್ರಚಾರ ನಡೆಸಿದವರಿಗೆ ಬೆಂಗಾವಲು ಒದಗಿಸಿ ಅಧಿಕಾರಿಗಳು ಕುಮ್ಮಕ್ಕು ನೀಡುವ ಮೂಲಕ ಸಂಶಯಕ್ಕೆಡೆ ಮಾಡಿದ ಪ್ರಕರಣಗಳಿಗೆ ಇಲ್ಲಿ ಕೊರತೆಯಿಲ್ಲ.
ಮತದಾರರ ಮನೆಗಳಿಗೆ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆ ನಮೂದಿಸಿದ ಚೀಟಿಯೊಟ್ಟಿಗೆ ಗರಿ ಗರಿ ನೋಟುಗಳನ್ನು ಅಭ್ಯರ್ಥಿ, ಬೆಂಬಲಿಗರು ಹಂಚಿದ್ದಾರೆ. ಕೆಲ ಮಹಾಶಯರು ಎಲೆ, ಅಡಿಕೆ ಮೇಲೆ ಹಣವಿಟ್ಟು ಮತದಾರರಿಂದ ಆಣೆ ಮಾಡಿಸಿಕೊಂಡ ನಿದರ್ಶನಗಳೂ ಇಲ್ಲಿ ಸಾಕಷ್ಟಿವೆ. ಬಹುತೇಕ ಕಡೆ ರಾತ್ರಿಯೆಲ್ಲಾ ತರಾವರಿ ಬಳುವಳಿಗಳ ಹಂಚಿಕೆಯಾಗಿದೆ.
ಕೋಳಿ ಕೂಗಿನ ಸದ್ದು: ಹೊತ್ತು ಮೂಡುವಾಗ ಕೋಳಿ ಕೂಗು ಕೇಳೋದು ಹಳ್ಳಿಗಾಡಿನಲ್ಲಿ ವಾಡಿಕೆ. ಆದರೆ, ನಗರ ಮತ್ತು ಪಟ್ಟಣಗಳಲ್ಲಿ ರಾತ್ರಿಯೆಲ್ಲಾ ಕೋಳಿ ಕೂಗಿನದ್ದೇ ಸದ್ದು. ಅದರಿಂದ ಅನೇಕರಿಗೆ ನಿದ್ರಾಭಂಗ ಆಗಿದ್ದೂ ಇದೆ. ಕೊಯ್ದು, ಶುಚಿಗೊಳಿಸಿದ ಕೋಳಿ ಮಾಂಸದ ಪ್ಯಾಕ್ ಹಂಚಿಕೆ ಕೆಲವೆಡೆ ನಡೆದಿದ್ದರೆ, ಹಲವೆಡೆ ಮನೆ ಮನೆಗೆ ಕೋಳಿಗಳನ್ನೇ ಹಂಚಿಕೆ ಮಾಡಲಾಗಿದೆ. ಅಭ್ಯರ್ಥಿಗಳು ಆಮಿಷಗಳನ್ನು ಒಡ್ಡುವ ಮೂಲಕ ಮತದಾರರನ್ನಷ್ಟೇ ಅಲ್ಲದೆ ಇಡೀ ಚುನಾವಣೆ ವ್ಯವಸ್ಥೆಯನ್ನು ಭ್ರಷ್ಟವಾಗಿಸಿದ್ದಾರೆ. ಒಂದೇ ಅಭ್ಯರ್ಥಿ ನಗದು ಸಮೇತ 2-3 ಬಳುವಳಿಗಳನ್ನು ನೀಡಿದ್ದಿದೆ. ಕೋಳಿ ಜತೆಗೆ ಇರಲೆಂದು ಆಯ್ದ ಮನೆಗಳನ್ನು ಹೊರತುಪಡಿಸಿ ಬಹುತೇಕರಿಗೆ ಮದ್ಯದ ಬಾಟಲಿಗಳ ಬಳುವಳಿಯನ್ನೂ ನೀಡಲಾಗಿದೆ.
ಕಾದು ಕುಳಿತರು: ಚುನಾವಣೆಯ ಮುನ್ನಾ ರಾತ್ರಿ ಅಭ್ಯರ್ಥಿ ಮತ್ತು ಬೆಂಬಲಿಗರು ಕದ ತಟ್ಟುವುದು ವಾಡಿಕೆಯಾಗಿದೆ. ಅವರಿಗೆ ಆ ತಾಪತ್ರಯವೇ ಬೇಡವೆಂದು ಕೆಲವರು ಬಾಗಿಲು ಹಾಕದೆ ಕಾದು ಕುಳಿತಿದ್ದಿದೆ. ಈ ಮಂದಿ ತಾವಾಗಿಯೇ ಬಳುವಳಿಗಳನ್ನು ಸ್ವೀಕರಿಸಿ, ಮತ ನೀಡುವ ಅಭಯದೊಂದಿಗೆ ಬಂದವರನ್ನು ಸಾಗ ಹಾಕಿದ್ದಾರೆ.
ಎಲ್ಲ ಅಭ್ಯರ್ಥಿಗಳೂ ವಾಮ ಮಾರ್ಗದಲ್ಲೇ ಚುನಾವಣೆ ಎದುರಿಸುವವರಾಗಿದ್ದಾರೆ. ಹೀಗಾಗಿ ಅವರೆಲ್ಲ ಪರಸ್ಪರ ದೂರು ನೀಡುವುದಾಗಲೀ ಅಥವಾ ಒಬ್ಬರು ಇನ್ನೊಬ್ಬರ ಬಳುವಳಿ ಹಂಚಿಕೆ ತಡೆಯುವುದನ್ನಾಗಲೀ ಮಾಡುವ ಗೋಜಿಗೆ ಹೋಗಿಲ್ಲ. ಒಂದೊಮ್ಮೆ ತಡೆದಲ್ಲಿ ಮತದಾರರು ತಮ್ಮ ವಿರುದ್ಧ ತಿರುಗಿ ಬಿದ್ದಾರು ಎನ್ನುವ ಭೀತಿಯೂ ಅವರನ್ನು ಕಾಡಿದೆ.
ಬಾಡೂಟ, ನಿಶಾಬಾಜಿ: ಅಭ್ಯರ್ಥಿಗಳ ಕಡೆಯಿಂದ ಹಂಚಿಕೆಯಾಗಿದ್ದ ಕೋಳಿ ಮತ್ತು ಮಾಂಸದ ಅಡುಗೆ ಮನೆ ಮನೆಗಳಲ್ಲಿ ಬೆಳಗ್ಗೆಯ ತಿಂಡಿಗೆ ಸಿದ್ಧವಾಗಿತ್ತು. ಕೋಳಿ ಹಂಚದವರು ಮತಗಟ್ಟೆಗೆ ಬಂದವರನ್ನು ಸಂಪ್ರೀತರನ್ನಾಗಿಸಲು ಅಲ್ಲಲ್ಲಿ ಚಿಕನ್ ಬಿರಿಯಾನಿ ಮಾಡಿಸಿದ್ದರು. ಹೀಗಾಗಿ ಬೆಳ್ಳಂಬೆಳಗ್ಗೆಯೇ ಸಾಕಷ್ಟು ಕಡೆ ಬಾಡೂಟದ ಘಮಲು ಮೂಗಿಗೆ ಬಡಿಯುತ್ತಿತ್ತು. ಬಾಡೂಟದ ಗಮ್ಮತ್ತು, ಮದ್ಯದ ನಿಶಾಬಾಜಿ, ಬಳುವಳಿಗಳ ಹಂಚಿಕೆ ಇಲ್ಲವೆಂದ ಮೇಲೆ ಅದ್ಯಾವ ಚುನಾವಣೆ ಎನ್ನುವಂತಾಗಿದೆ ಇಲ್ಲಿನ ಪರಿಸ್ಥಿತಿ. ಹೇಳಿ ಕೇಳಿ ಹಂಚುತ್ತಿರುವುದು ಚುನಾವಣಾ ಮದ್ಯ. ಇದರಲ್ಲಿ ಅಸಲಿಗಿಂತ ನಕಲಿಯೇ ಹೆಚ್ಚು. ಅದನ್ನು ಸೇವಿಸಿದ್ದ ಸಾಕಷ್ಟು ಮತದಾರರು ನಿಶಾಬಾಜಿಯಲ್ಲಿ ತೇಲಾಡುತ್ತಿದ್ದರು. ಮತಗಟ್ಟೆ ಬಳಿಯೂ ಎಣೆ ಮಜ್ಜನದ ಜನರಿಂದ ಸಜ್ಜನರು ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಎದುರಾಗಿತ್ತು.
ನಿಲ್ಲದ ಹಣ ಹಂಚಿಕೆ: ಮೊಂಡು ಬಿದ್ದ ಅಭ್ಯರ್ಥಿ ಮತ್ತು ಬೆಂಬಲಿಗರು ಮತಗಟ್ಟೆ ಹೊರಗೂ ಹಣ ಹಂಚಿಕೆಯಲ್ಲಿ ತೊಡಗಿದ್ದರು. ಬೆವರು ಸುರಿಸಿ ಸಂಪಾದಿಸಿದ ದುಡ್‌ಡಾಗಿದ್ದರೆ ಹೀಗೆಲ್ಲಾ ಕೊಡ್ತಿದ್ನೆ ಅನ್ನುವ ಉದ್ಗಾರದೊಂದಿಗೆ ಮತದಾರರು ಕೊಟ್ಟಿದ್ದನ್ನು ಕಿಸೆಗೆ ಇಳಿಸಿಕೊಳ್ಳುತ್ತಿದ್ದರು. ಕಾಸು, ಕೋಳಿ, ಬಳುವಳಿಗಳನ್ನೆಲ್ಲಾ ಹಂಚಿದ ಅಭ್ಯರ್ಥಿಗಳು ಭಿಕ್ಷುಕರನ್ನೂ ನಾಚಿಸುವಂತೆ ಮತಭಿಕ್ಷೆ ಬೇಡುತ್ತಿದ್ದರು.
ಚುನಾವಣಾ ಅಕ್ರಮಗಳ ಬಗ್ಗೆ ಅಧಿಕಾರಿಗಳು ಕ್ಯಾರೇ ಎನ್ನದೆ ಸಾಕ್ಷಾತ್  ಶ್ರೀರಂಗನಂತೆ ಅಡ್ಡಡ್ಡ ಮಲುಗಿದ್ದರು. ಪ್ರಶ್ನಿಸಿದರೆ, ತಮಗೆ ದೂರು ಬಂದಿಲ್ಲವೆನ್ನುವ ಸಿದ್ಧ ಉತ್ತರ ಕೊಡುತ್ತಲೇ ಬಂದರು. ಚನ್ನಪಟ್ಟಣದಲ್ಲಿ ತಹಸೀಲ್ದಾರ್ ಪ್ರಮಾದವೆಸಗಿ ಪೇಚಿಗೆ ಸಿಲುಕಿದರು. ಅದು ಪ್ರಮಾದವೇ ಅಲ್ಲವೇ ಎನ್ನುವುದು ತನಿಖೆಯಿಂದ ತಿಳಿಯಬಹುದು.
ಸಿಲ್ವರ್  ವರ್ಸಸ್ ಗೋಲ್ಡ್
ರಾಮನಗರದಲ್ಲೊಬ್ಬ ಅಭ್ಯರ್ಥಿ ಬುಧವಾರ ರಾತ್ರಿಯಷ್ಟೇ ವಾರ್ಡ್‌ನ ಪ್ರತಿ ಮನೆಗೆ ಬೆಳ್ಳಿ ನಾಣ್ಯ ಹಂಚಿದ್ದರು. ಈ ಸುದ್ದಿ ತಿಳಿದು ದಿಗಿಲುಗೊಂಡ ಪ್ರತಿಸ್ಪರ್ಧಿ ಮುಂಜಾನೆಯೇ ಚಿನ್ನದ ನಾಣ್ಯ ತರಿಸಿ, ಹಂಚಿಕೆ ಮಾಡಿದ್ದಾರೆ. ಹೀಗೆ ಸೇರಿಗೆ ಸವ್ವಾ ಸೇರು ಎನ್ನುವಂತೆ ಮಾಡಿದವರು ಒಬ್ಬ ಅಕ್ಕಸಾಲಿಗ ಎನ್ನುವುದು ವಿಶೇಷ.
ನಾಲ್ವರಿಂದಲೂ ಅಕ್ಕಿ ಮೂಟೆ ಹಂಚಿಕೆ
ರಾಮನಗರ ನಗರಸಭೆಯ ವಾರ್ಡ್ ಒಂದರಲ್ಲಿ ಚತುಷ್ಕೋನ ಸ್ಪರ್ಧೆ ನಡೆದಿದೆ. ಫಲಿತಾಂಶದ ಬಗ್ಗೆ ತೀವ್ರ ಕುತೂಹಲ ಕೆರಳಿಸಿರುವ ಪ್ರತಿಷ್ಠಿತ ವಾರ್ಡ್‌ನಲ್ಲಿ ನಿರ್ಗಮನ ಸದಸ್ಯರೊಬ್ಬರು ಸಹಿತ ನಾಲ್ವರು ಸೆಣೆಸಾಡುತ್ತಿದ್ದಾರೆ. ನಾಲ್ಕೂ ಮಂದಿ ಮನೆಗೊಂದು 25 ಕೆಜಿಯ ತಲಾ 1 ಅಕ್ಕಿ ಮೂಟೆ, ಪ್ರತಿ ಓಟಿಗೆ ರು.500 ಹಂಚಿದ್ದಾರೆ. ನಿರಾಕರಿಸಿದವರು ಕೆಲವೇ ಮಂದಿ. ಹೀಗಾಗಿ ಬಹುತೇಕ ಮನೆಗಳಿಗೆ ತಲಾ 4 ಅಕ್ಕಿ ಬ್ಯಾಗ್ ಸಿಕ್ಕಿದೆ. ಇಲ್ಲಿನ 1 ಮತಕ್ಕೆ ಆಗಿರುವ ನಗದು ಸಂಪಾದನೆ ರು.2 ಸಾವಿರ.
ಗೊಂದಲ ತಂದ ಮರು ವಿಂಗಡಣೆ
ಚುನಾವಣಾ ಆಯೋಗವು ಕ್ಷೇತ್ರ ಮರು ವಿಂಗಡಣೆ ಬಗ್ಗೆ ಅಧಿಕೃತ ಆದೇಶ ಹೊರಡಿಸಿ, ಈ ವಿಷಯದಲ್ಲಿ ಕೆಲವೊಂದು ಮಾನದಂಡಗಳನ್ನು ಅನುಸರಿಸಬೇಕಿತ್ತು. ಆದರೆ, ಅಧಿಕಾರಿಗಳು ರಾಜಕಾರಣಿಗಳ ಆಜ್ಞಾಪಾಲಕರಾಗಿ ವಾರ್ಡ್ ಮರುವಿಂಗಡಿಸಿ, ಗೊಂದಲ ತಂದಿಟ್ಟಿದ್ದಾರೆ. ಗಂಡನ ಮತ ಒಂದೆಡೆಯಿದ್ದರೆ, ಆತನೊಂದಿಗೇ ಇರುವ ಹೆಂಡತಿ ಮತ ಮತ್ತೊಂದು ವಾರ್ಡ್‌ಗೆ ಸೇರಿಕೊಂಡಿದೆ. ಪ್ರತಿಶತ 25ರಷ್ಟು ಮತದಾರರ ವಾರ್ಡ್ ಬದಲಾಗಿದೆ.
ನಿಲ್ಲದ ನಕಲಿ ಮತದಾನದ ಹಾವಳಿ
ಬೆಂಗಳೂರು ಸಹಿತ ಹೊರಗಿನ ಮಂದಿಯನ್ನು ಕರೆತಂದು, ನಕಲಿ ಮತದಾನ ನಡೆಸುವುದು ರಾಮನಗರಕ್ಕೇನೂ ಹೊಸದಲ್ಲ. ಈ ಚುನಾವಣೆಯಲ್ಲೂ ಬೋಗಸ್ ಮತದಾರರ ಹಾವಳಿ ಮಿತಿ ಮೀರಿತ್ತು. ನಕಲಿ ಮತದಾರರು ಪ್ರಾರಂಭದಲ್ಲೇ ಮತ ಚಲಾಯಿಸಿ ಹೋಗಿದ್ದರು. ಅಸಲಿ ಮತದಾರರು ಮತಗಟ್ಟೆಗೆ ತೆರಳಿ, ಪೆಚ್ಚು ಮೋರೆ ಹಾಕಿಕೊಂಡು ವಾಪಸ್ಸಾದರು.
ಶ್ರವಣಕುಮಾರರು ಅನಾಥರಾಗಿಸಿದರು
ತಮ್ಮ ಮನೆಗಳಲ್ಲಿರುವ ವೃದ್ಧರು, ವಿಕಲಚೇತರನ್ನು ಅದೆಷ್ಟೋ ಮಂದಿ ತಾತ್ಸಾರದಿಂದ ಕಾಣುತ್ತಾರೆ. ಆದರೆ, ಮತ ಹಾಕಿಸಿಕೊಳ್ಳುವಾಗ ಅವರ ಮೇಲೆ ಎಲ್ಲಿಲ್ಲದ ಪ್ರೀತಿ ತೋರುತ್ತಾರೆ. ಅಭ್ಯರ್ಥಿಯ ಬೆಂಬಲಿಗರು ವೃದ್ಧರು, ವಿಕಲಚೇತನರನೇಕರನ್ನು ತೋಳಿನ ತೆಕ್ಕೆಯಲ್ಲಿ ಹೊತ್ತು ತಂದು, ಅವರ ಹಕ್ಕನ್ನು ತಾವೇ ಚಲಾಯಿಸಿಕೊಂಡರು. ಹೀಗೆ ಹೊತ್ತು ತಂದವರ ಪೈಕಿ ವಣದ್ಧೆ ಒಬ್ಬರನ್ನು ರಾಮನಗರದ 2ನೇ ವಾರ್ಡ್‌ನಲ್ಲಿ ಅನಾಥವಾಗಿ ಬಿಟ್ಟು ಹೋಗಲಾಗಿತ್ತು. ಅರ್ಧ ತಾಸಿನ ಬಳಿಕ ಗಮನಿಸಿದ ಆ ವೃದ್ಧೆಯನ್ನು ಆಟೋದಲ್ಲಿ ಮನೆಗೆ ಕಳುಹಿಸಿಕೊಟ್ಟು, ಮಾನವೀಯತೆ ಮೆರೆದರು.
ಅತಿಥಿ ಮತದಾರರಿಗೆ ರಾಜಾತಿಥ್ಯ
ಊರು ತೊರೆದರೂ ಮತದಾನದ ಇಲ್ಲೇ ಹಕ್ಕು ಉಳಿಸಿಕೊಂಡು, ಕೋರಿಕೆ ಮೇರೆಗೆ ಆಗಮಿಸಿದ ಅತಿಥಿ ಮತದಾರ ಪ್ರಭುಗಳಿಗೆ ಅಭ್ಯರ್ಥಿಗಳು ರಾಜಾತಿಥ್ಯವನ್ನೇ ನೀಡಿದರು. ಅವರಿಗೆಂದೇ ಬೂರಿ ಭೋಜನ, ಬಳುವಳಿಯಲ್ಲದೆ ಬಂದು ಹೋಗುವ ಪ್ರಯಾಣ ವೆಚ್ಚ ಭರಿಸಿದ್ದೂ ಉಂಟು.
ನೂರರ ನೋಟುಗಳಿಗಿಲ್ಲದ ಬೆಲೆ
ಚನ್ನಪಟ್ಟಣ ಹೊರತುಪಡಿಸಿ ಜಿಲ್ಲೆಯ ಉಳಿದೆಡೆ ಹಿಂದಿನ ಚುನಾವಣೆಗಳಲ್ಲಿ ಪ್ರತಿ ಮತಕ್ಕೆ ರು.100 ರಿಂದ 200ರವರೆಗೆ ವಿತರಣೆಯಾಗುತ್ತಿತ್ತು. ಆದರೆ, ಈ ಚುನಾವಣೆಯಲ್ಲಿ ನೂರರ ನೋಟುಗಳು ಹರಿದಾಡಲೇ ಇಲ್ಲ. ರು.500 ಮತ್ತು ರು.1 ಸಾವಿರದ ನೋಟುಗಳದ್ದೇ ಭರಾಟೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement