ಹೆಸರನ್ನು ಹೊಡೆದು ಹಾಕಿದ್ದಕ್ಕೆ ತಹಸೀಲ್ದಾರ್ ವಿರುದ್ಧ ಆಕ್ರೋಶ
ಚನ್ನಪಟ್ಟಣ: ನಗರಸಭಾ ಚುನಾವಣೆ ಅಧಿಸೂಚನೆ ಹೊರಬಿದ್ದ ಬಳಿಕ ತಹಸೀಲ್ದಾರರು ಮತಪಟ್ಟಿ ಪರಿಷ್ಕರಣೆ
ಮಾಡಿ ಕೆಲ ಮತದಾರರ ಹೆಸರುಗಳನ್ನು ತಮ್ಮ ಕೈಯಿಂದ ಹೊಡೆದು ಹಾಕಿದ್ದರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದ 2ನೇ ವಾರ್ಡ್ನಲ್ಲಿ ನಡೆಯಿತು.
ಪಟ್ಟಣದ ಮಂಗಳವಾರ ಪೇಟೆಯ 2ನೇ ವಾರ್ಡ್ ನಲ್ಲಿ 50ಕ್ಕೂ ಹೆಚ್ಚು ಮತದಾರರ ಹೆಸರನ್ನು ಕೈಬಿಡಲಾಗಿದ್ದು, ಚುನಾವಣೆ ಘೋಷಣೆಯಾದ ಸಮಯದಲ್ಲಿ ಪಡೆದ ಮತದಾರರ ಪಟ್ಟಿಯಲ್ಲಿ ಹೆಸರು ನಮೂದಾಗಿದೆ ಆದರೆ ಮತಗಟ್ಟೆ ಅಧಿಕಾರಿಯ ಬಳಿ ಇರುವ ಪಟ್ಟಿಯಲ್ಲಿ ಹೆಸರುಗಳು ಮಾಯವಾಗಿರುವುದು ಯಾಕೆ ಎಂದು ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದು ಕೊಂಡರು.
ಯೋಗೇಶ್ವರ್ ಏಜೆಂಟ್: ತಹಸೀಲ್ದಾರರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ಯೋಗೇಶ್ವರ್ ಏಜೆಂಟ್ರಂತೆ ಕೆಲಸ ಮಾಡುತ್ತಿದ್ದು, ಜೆಡಿಎಸ್ ಬೆಂಬಲಿಗರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ, ರಾತ್ರೋರಾತ್ರಿ ಯೋಗೇಶ್ವರ್ ತಮ್ಮ ಅಭ್ಯರ್ಥಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅಧಿಕಾರಿಗಳನ್ನು ಬಳಸಿಕೊಂಡು ಈರೀತಿ ಮಾಡಿಸಿದ್ದಾರೆ ಎಂದು ನಗರ ಜೆಡಿಎಸ್ ಅಧ್ಯಕ್ಷ ಸತ್ಯನಾರಾಯಣ ಕಿಡಿಕಾರಿದರು. ಮತದಾನ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಸಂವಿಧಾನ ಬದ್ಧವಾಗಿ ದೊರೆತಿರುವ ಹಕ್ಕಾಗಿದ್ದು ಅದನ್ನು ಚಲಾಯಿಸಲು ಅವಕಾಶ ಮಾಡಿ ಕೊಡದೆ ಪಕ್ಷಪಾತ ಮಾಡಿರುವ ತಹಸೀಲ್ದಾರರ ವಿರುದ್ಧ ಕ್ರಮಜರುಗಿಸಬೇಕೆಂದರು.
ತಹಸೀಲ್ದಾರ್ ಸಮಜಾಯಿಷಿ: ಮಂಗಳವಾರ ಪೇಟೆ ಮತಗಟ್ಟೆಗೆ ಭೇಟಿನೀಡಿದ ತಹಸೀಲ್ದಾರ್ ಅರುಣ ಪ್ರಭ ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಪರಿಷ್ಕರಣೆ ಮಾಡಿದ್ದು, ಸ್ಥಳದಲ್ಲಿ ವಾಸವಿಲ್ಲದವರನ್ನು ನಾವು ತೆಗೆದು ಹಾಕಿರುವುದಾಗಿ ತಿಳಿಸಿದರು. ಬಿಎಲ್ಒಯಿಂದ ದೊರೆತ ಮಾಹಿತಿಯನ್ವಯ ನಾವು ಮತದಾರರ ಪಟ್ಟಿಯನ್ನು ಪರೀಷ್ಕರಣೆ ಮಾಡಿದ್ದು, ಅವರು ಸ್ಥಳದಲ್ಲಿ ವಾಸವಾಗಿಲ್ಲ ಎಂದು ವರದಿ ನೀಡಿರುವ ಮಂದಿಯ ಹೆಸರನ್ನು ಕೈಬಿಡಲಾಗಿದೆ. ಅಧಿಕೃತಪಟ್ಟಿಯನ್ನು ಮತಗಟ್ಟೆ ಅಧಿಕಾರಿಗಳಿಗೆ ನೀಡಲಾಗುವುದೇ ವಿನಾ ನಿಮಗೆ ನೀಡಲಾಗುವುದಿಲ್ಲ ಎಂದು ಸಮಜಾಯಿಷಿ ನೀಡಿದರು.
ಜಿಲ್ಲಾಧಿಕಾರಿ ಭೇಟಿ: ತಹಸೀಲ್ದಾರ್ ಮಾತಿಗೆ ಒಪ್ಪದ ಜೆಡಿಎಸ್ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ನಡೆದಿರುವ ಗೊಂದಲದ ಬಗ್ಗೆ ಮಾಹಿತಿ ಪಡೆದರು. ಅಧಿಕಾರಿಗಳಿಂದ ಪ್ರಮಾದವಾಗಿದ್ದ ಪಕ್ಷ ಈ ಬಗ್ಗೆ ತನಿಖೆಗೆ ಆದೇಶಿಸುವುದಾಗಿ ತಿಳಿಸಿದ ಅವರು ತಹಸೀಲ್ದಾರ್ ವಿರುದ್ಧ ಕ್ರಮಜರುಗಿಸುವುದಾಗಿ ತಿಳಿಸಿದರು.
ತಹಸೀಲ್ದಾರ್ಗೆ ತರಾಟೆ: ಮತದಾರರ ಹೆಸರನ್ನು ಕೈಬಿಟ್ಟಿರುವ ಬಗ್ಗೆ ವಿವರಣೆ ನೀಡಲು ಮುಂದಾದ ತಹಸೀಲ್ದಾರ್ ಅರುಣಪ್ರಭಾರನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು.
ಚುನಾವಣಾ ಆಯೋಗಕ್ಕೆ ದೂರು: ತಹಸೀಲ್ದಾರರು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಮತದಾರರ ಮತದಾರರಪಟ್ಟಿಯಲ್ಲಿರುವ ಹೆಸರನ್ನು ಹೊಡೆದುಹಾಕಿರುವುದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಜೆಡಿಎಸ್ ತಿಳಿಸಿದೆ.