ಎಲ್ಲೆಲ್ಲೂ ಸೋಲು-ಗೆಲವಿನದೇ ಲೆಕ್ಕಾಚಾರ
ಕ.ಪ್ರ.ವಾರ್ತೆ ರಾಮನಗರ ಮಾ.8
ಪೌರ ಸಂಸ್ಥೆಗಳ ಚುನಾವಣಾ ಸಮರ ಅಂತ್ಯಗೊಂಡಿದೆ. ಈಗ ಎಲ್ಲೆಲ್ಲೂ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಒಳೇಟು ನೀಡಿದವರ ಬಗ್ಗೆ ಇಲ್ಲಿವರೆಗೆ ಒಳಗೊಳಗೆ ಕುದಿಯುತ್ತಿದ್ದ ಅಭ್ಯರ್ಥಿಗಳು ಈಗ ಬಹಿರಂಗಕ್ಕೆ ಬಂದಿದ್ದಾರೆ. ಚುನಾವಣಾ ಅಖಾಡದಲ್ಲಿ ಯಾರ ಗೆಲುವಿಗೆ ಇನ್ಯಾರು ಅಡ್ಡಗಾಲು ಹಾಕಿದ್ದಾರೆನ್ನುವ ವಿಷಯವು ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯ ಉಳಿದ 3 ಕಡೆಗೆ ಹೋಲಿಸಿದರೆ ರಾಮನಗರದಲ್ಲಿ ಮತದಾರರು ಚುನಾವಣೆ ಬಗ್ಗೆ ಕೊಂಚ ನಿರಾಸಕ್ತಿ ತೋರಿದ್ದಾರೆ. ಮಾಗಡಿಯಲ್ಲಿ ಮತ ಬೇಟೆ ಭರ್ಜರಿಯಾಗಿಯೇ ಸಾಗಿದೆ. ಚನ್ನಪಟ್ಟಣ ಮತ್ತು ಕನಕಪುರದಲ್ಲಿ ಮತದಾನ ಪ್ರಮಾಣ ನಿರೀಕ್ಷೆಯಷ್ಟು ನಡೆದಿದೆ.
ಒಳೇಟಿನ ಹಾವಳಿ: ರಾಜಕೀಯ ಜಂಗೀಕುಸ್ತಿಯಲ್ಲಿ ಯಾರಿಗೆ ಯಾರಿಂದ ಒಳೇಟು ಬಿದ್ದಿದೆ ಎನ್ನುವುದು ಈಗಾಗಲೇ ಜಗಜ್ಜಾಹೀರವಾಗಿದೆ. ಜತೆಗಿದ್ದುಕೊಂಡೇ ಒಳೇಟು ಹಾಕಿದವರ ಬಗ್ಗೆ ಇಲ್ಲಿವರೆಗೆ ಒಳಗೊಳಗೆ ಕುದಿಯುತ್ತಿದ್ದ ಅಭ್ಯರ್ಥಿಗಳು ಮತಯಂತ್ರಕ್ಕೆ ಮುಚ್ಚಿಡುತ್ತಿದ್ದಂತೆಯೇ ಬಹಿರಂಗವಾಗಿ ಕಿಡಿ ಕಾರಲಾರಂಭಿಸಿದ್ದಾರೆ.
ಹೇಳಿ ಕೇಳಿ ಕಬ್ಬಡಿ ಆಟ ಹೆಚ್ಚು ಜನಪ್ರಿಯವಾದ ಈ ಭಾಗದಲ್ಲಿ ರಾಜಕಾರಣಿಗಳೂ ಕಬಡ್ಡಿ ಪಂದ್ಯದಂತೆ ಕಾಲೆಳೆದಾಟಕ್ಕೆ ಇಳಿಯುವುದು ಹೊಸದೇನಲ್ಲ. ಆಟದಲ್ಲಿ ಎದುರಾಳಿಯ ಕಾಲೆಳೆದರೆ, ರಾಜಕಾರಣದಲ್ಲಿ ಜತೆಗಿದ್ದವರ ಕಾಲನ್ನೇ ಎಳೆದು ಬೀಳಿಸಿದ ನಿದರ್ಶನ ಸಾಕಷ್ಟಿವೆ. ಇಂತಹ ಒಳೇಟಿನಿಂದ ಸಾಕಷ್ಟು ಮಂದಿ ಮಕ್ಕಾಡೆ ಮಲಗುವಂತಾಗಿದೆ.
ಅಡ್ಡಗಾಲು ಹಾಕಿದವರು: ಚುನಾವಣಾ ಕಣದಲ್ಲಿ ಪಕ್ಷೇತರರು ಇಲ್ಲವೇ ಹೊಸ ಪಕ್ಷಗಳ ಅಭ್ಯರ್ಥಿಗಳಾಗಿದ್ದ ಕೆಲವರು ಪ್ರಮುಖ ಪಕ್ಷಗಳಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟವರು. ಅಂತಹವರ ಸ್ಪರ್ಧೆಯು ಬೇರೆ ಯಾವ ಪ್ರಮುಖ ಅಭ್ಯರ್ಥಿಯ ಗೆಲುವಿಗೆ ಅಡ್ಡಗಾಲಾಗಿದೆ ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ.
ಕಣದಲ್ಲಿ ಕೆಲವರು ಸುಪಾರಿ ಕಿಲ್ಲರ್ಗಳ ಪಾತ್ರ ನಿರ್ವಹಿಸಿದ್ದಾರೆ. ಪ್ರಮುಖ ಅಭ್ಯರ್ಥಿಯ ಮತ ವಿಭಜಿಸಲೆಂದೇ ಆತನ ಎದುರಾಳಿಯ ಪ್ರೇರಣೆಗೆ ಒಳಗಾಗಿ ಕಣಕ್ಕೆ ಇಳಿದಿದ್ದು ಉಂಟು. ಅಂತಹ ಅಭ್ಯರ್ಥಿಯಿಂದ ಸಾಧಕ-ಬಾಧಕವೂ ಚರ್ಚೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಟಿ ರಾಮನಗರ ಜಿಲ್ಲೆಯ 4 ಪೌರ ಸಂಸ್ಥೆಗಳ 110 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಗಡಿ ಪುರಸಭೆಯ ವಾರ್ಡ್ 10ರಲ್ಲಿ ಶೇ.92.73 ರಷ್ಟು ಮತದಾನ ನಡೆದಿದ್ದು, ಇದು ಜಿಲ್ಲೆಯಮಟ್ಟಿಗೆ ಗರಿಷ್ಠ. ಶೇ.59 ರಷ್ಟು ಮತದಾನದೊಂದಿಗೆ ರಾಮನಗರದ ವಾರ್ಡ್ ಸಂಖ್ಯೆ 22 ಜಿಲ್ಲೆಯಲ್ಲೇ ಕನಿಷ್ಠ ಮತದಾನದ ವಾರ್ಡ್ ಎನಿಸಿದೆ.
ಟಿ ರಾಮನಗರ ನಗರಸಭೆ ಮಟ್ಟಿಗೆ ವಾರ್ಡ್ 1ರಲ್ಲಿ ಶೇ.85 ರಷ್ಟು ಮತದಾನವಾಗಿದ್ದು, ಈ ಪೌರ ಸಂಸ್ಥೆಯಲ್ಲಿ ಇದೇ ಅತಿ ಹೆಚ್ಚಿನ ಪ್ರಮಾಣ.
ಟಿ ಮಾಗಡಿ ಪುರಸಭೆ ವ್ಯಾಪ್ತಿ ಮಟ್ಟಿಗೆ ವಾರ್ಡ್ 17 ರಲ್ಲಾಗಿರುವ ಶೇ.80 ರಷ್ಟು ಮತದಾನವೇ ಕಡಿಮೆ ಪ್ರಮಾಣದ್ದು.
ಟಿ ಕನಕಪುರ ಪುರಸಭೆ ಮಟ್ಟಿಗೆ ವಾರ್ಡ್ 23 (ಶೇ.89.96) ಅತಿ ಹೆಚ್ಚು, ವಾರ್ಡ್ 15 (ಶೇ.62.44) ಅತಿ ಕಡಿಮೆ ಮತದಾನ ಕಂಡಿದೆ.
ಟಿ ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ್ 1ರಲ್ಲಿ ಅತಿ ಹೆಚ್ಚು ಅಂದರೆ ಶೇ. 87.24 ಹಾಗೂ ವಾರ್ಡ್ 16ರಲ್ಲಿ ಅತಿ ಕಡಿಮೆ ಅಂದರೆ ಶೇ.59.67 ರಷ್ಟು ಮತದಾನ ನಡೆದಿದೆ.
ಎಲ್ಲೆಲ್ಲೂ ಲೆಕ್ಕಾಚಾರ
ನಗರ, ಪಟ್ಟಣಗಳಲ್ಲದೆ ಚುನಾವಣಾ ವ್ಯಾಪ್ತಿಯಿಂದ ಆಚೆಗಿರುವ ಗ್ರಾಮಾಂತರದಲ್ಲೂ ಪಕ್ಷಗಳು, ಪ್ರಮುಖ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ರಾಜಕೀಯಾಸಕ್ತರು ಮುಳುಗಿದ್ದಾರೆ. ಈ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿ ಪಕ್ಷಗಳು. ಅವೆರಡರ ಸ್ಥಾನ ಗಳಿಕೆ ಸಾಕಷ್ಟು ಚರ್ಚೆಯಾಗುತ್ತಿದೆ.
ಮತದಾನ ಪ್ರಮಾಣ ಹೆಚ್ಚಾಗಿರುವ ಮತ್ತು ಕಡಿಮೆಯಾಗಿರುವ ಕಡೆ ಯಾವ ಪಕ್ಷಕ್ಕೆ ಲಾಭವಾದೀತು, ಸ್ಪರ್ಧಿಗಳ ಸಂಖ್ಯೆ ಹೆಚ್ಚು ಮತ್ತು ಕಡಿಮೆಯಿಂದ ಯಾರಿಗೆ ತಲೆನೋವಾಗಿದೆ. ಅಭ್ಯರ್ಥಿ ಹರಿಸಿದ ಹಣದ ಹೊಳೆ, ಅಭ್ಯರ್ಥಿ ಜುಗ್ಗತನ ಹೇಗೆ ಮುಳುವಾಗಿದೆ. ಜನಪ್ರತಿಯತೆ ಮತ್ತು ಅಭಿವೃದ್ಧಿ ಫಲಾಫಲಗಳೇನು ಎನ್ನುವ ಅಂಶಗಳು ಎಲ್ಲೆಡೆ ಹರಿದಾಡುತ್ತಿವೆ.
ಪ್ರವಾಸಕ್ಕೆ ಕಳುಹಿಸಲ್ಪಟ್ಟರು
ರಾಮನಗರ ನಗರಸಭೆಯ ವಾರ್ಡ್ ಒಂದರಲ್ಲಿ ಜೆಡಿಎಸ್ ಟಿಕೆಟ್ ವಂಚಿತರೊಬ್ಬರು ಕಾಂಗ್ರೆಸ್ ಪ್ರಾಜೋಜಿತ ಪ್ರವಾಸದ ಮೋಜು ಅನುಭವಿಸಿ ಬಂದಿದ್ದಾರೆ. ಜೆಡಿಎಸ್ ಟಿಕೆಟ್ ವಂಚಿತರು ಆ ವಾರ್ಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅತೃಪ್ತಿ ಶಮನಗೊಳಿಸಿ, ಪಕ್ಷದ ಪರ ಕೆಲಸಕ್ಕೆ ಅವರನ್ನು ಇಳಿಸುವಲ್ಲಿ ಜೆಡಿಎಸ್ ಮುಖಂಡರು ಕೊಂಚ ತಾತ್ಸಾರ ಮಾಡಿದರು.
ಈ ಬೆಳವಣಿಗೆಯ ಮೇಲೆ ನಿಗಾ ವಹಿಸಿದ್ದ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮದೇ ಖರ್ಚಿನಲ್ಲಿ ಜೆಡಿಎಸ್ ಟಿಕೆಟ್ ವಂಚಿತರನ್ನು ಪ್ರವಾಸಕ್ಕೆ ಕಳುಹಿಸಿಕೊಟ್ಟರು. ಜೆಡಿಎಸ್ ಟಿಕೆಟ್ ಸಿಗಲಿಲ್ಲವೆಂದು ಕಾಂಗ್ರೆಸ್ ಮ್ಮುಖಂಡರ ಮಾತು ಕೇಳಿ ಪ್ರವಾಸಕ್ಕೆ ಹೋದವರ ಬಗ್ಗೆ ದಳಪತಿಗಳು ಗರಂ ಆಗಿದ್ದಾರೆ.