ಏ.1ರಂದು 101 ಜೋಡಿ ಸಾಮೂಹಿಕ ವಿವಾಹ
ಚನ್ನಪಟ್ಟಣ: ಜನಸೇವೆಯ ಉದ್ದೇಶದಿಂದ ಸ್ಥಾಪಿಸಿರುವ ತಾಲೂಕಿನ ಹಾರೋಹಳ್ಳಿ ಗ್ರಾಮದ ಚನ್ನಮ್ಮ ಚಾರಿಟಬಲ್ ಟ್ರಸ್ಟ್‌ನಿಂದ 101 ಜೋಡಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಗ್ರಾಮದ ಗಣಪತಿ ದೇವಾಲಯದ ಆವರಣದಲ್ಲಿ ಏ.1 ರಂದು ಹಮ್ಮಿ ಕೊಂಡಿರುವುದಾಗಿ ಟ್ರಸ್ಟ್‌ನ ಸಂಸ್ಥಾಪಕ ಜಯಮುತ್ತು ತಿಳಿಸಿದರು.
ಗ್ರಾಮದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ದರ ಹೆಚ್ಚಳ, ವರದಕ್ಷಿಣೆ ಮೊದಲಾದ ಸಮಸ್ಯೆಯಿಂದಾಗಿ ಕಡುಬಡ ಕುಟುಂಬಗಳು ವಿವಾಹ ಕಾರ್ಯ ನೆರವೇರಿಸಲು ಪರದಾಡುತ್ತಿದ್ದಾರೆ. ಇಂತಹ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಸಾಮೂಹಿಕ ವಿವಾಹ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳು ವಧು-ವರರಿಗೆ ತಾಳಿ, ಬಟ್ಟೆ ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗುವುದು. ವಿವಾಹ ಮಾಡಿಕೊಳ್ಳಲು ಇಚ್ಚಿಸುವವರು ಚನ್ನಪಟ್ಟಣದ ಪಾರ್ವತಿ ಟಾಕೀಸ್ ರಸ್ತೆಯ ಟ್ರಸ್ಟ್‌ನ ಕಚೇರಿಯಲ್ಲಿ ಹೆಸರು ನೋಂದಾಯಿಸಿ ಕೊಳ್ಳುವಂತೆ ಅವರು ತಿಳಿಸಿದರು.
ಸಮಾಜಸೇವೆಯಲ್ಲಿ ನಿರತ: ತಾಲೂಕಿನ ಕುಗ್ರಾಮ ಎನಿಸಿರುವ ಹಾರೋಹಳ್ಳಿ ಗ್ರಾಮವನ್ನು ಎಲ್ಲರೂ ಗುರುತಿಸುವಂತೆ ಮಾಡಬೇಕೆಂಬುದು ನನ್ನ ಗುರಿ. ನಮ್ಮ ಟ್ರಸ್ಟ್ ಮೂಲಕ ಕಡುಬಡವರಿಗೆ ಸೇವೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಸಮಾಜ ಸೇವೆ, ಕಡುಬಡವರಿಗೆ ಸಹಾಯ ನೀಡುವುದು ನನ್ನ ಗುರಿಯಾಗಿದೆ. ರಾಜಕಾರಣಕ್ಕೆ ಬರುವ ಉದ್ದೇಶ ನನಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಹೆಚ್ಚು ಜೋಡಿಗಳನ್ನು ನೋಂದಾಯಿಸುವಂತೆ ಅವರು ಮನವಿ ಮಾಡಿದರು.
ದೇವಾಲಯ ಉದ್ಘಾಟನೆ: ಕುಗ್ರಾಮವಾಗಿರುವ ನಮ್ಮ ಊರಿನಲ್ಲಿ ಇದುವರೆಗೆ ದೇವಾಲಯವೇ ಇರಲಿಲ್ಲ. ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳು ಜರುಗಲಿ ಎಂಬ ಉದ್ದೇಶದಿಂದ ಟ್ರಸ್ಟ್ ವತಿಯಿಂದ ಗಣಪತಿ ದೇವಾಯವನ್ನು ನಿರ್ಮಿಸಿದ್ದು, ಎ.1 ರಂದು ಮಠಾಧೀಶರು, ಗಣ್ಯರಿಂದ ದೇವಾಲಯ ಉದ್ಘಾಟನೆ ಮಾಡಿಸುವುದಾಗಿ ಅವರು ತಿಳಿಸಿದರು.
ಮಳೂರುಪಟ್ಟಣ ರವಿ, ಸೋಗಾಲ ತಮ್ಮಯ್ಯ, ಗ್ರಾ.ಪಂ ಸದಸ್ಯ ಶಿವರಾಮು (ಕೆಂಪ), ಹಾರೋಹಳ್ಳಿ ಪುಟ್ಟಯ್ಯ, ಪುಟ್ಟಸ್ವಾಮಿ ಹಾರೋಹಳ್ಳಿ ಮುಂತಾದವರು ಉಪಸ್ಥಿತರಿದ್ದರು.