ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಹಸೀಲ್ದಾರ್ ಅರುಣಪ್ರಭ ಎತ್ತಂಗಡಿ

Rashmi Kasaragodu
Updated On : 9 Mar 2013, 12:40 pm

ಮತ್ತೀಕೆರೆ ಜಯರಾಮ್
ರಾಮನಗರ: ಪೌರ ಸಂಸ್ಥೆಗಳ ಚುನಾವಣೆಯ ಕಿರು ಕದನದಲ್ಲಿ ಕೈಚಳಕ ತೋರಿ ಫಜೀತಿ ತಂದಿಟ್ಟು, ಪೇಚಿಗೆ ಸಿಲುಕಿದ ಚನ್ನಪಟ್ಟಣ ತಹಸೀಲ್ದಾರ್ ಅರುಣಪ್ರಭ ತಲೆದಂಡವಾಗಿದೆ. ನಾನಾ ಆರೋಪಗಳಿಗೆ ಗುರಿಯಾದ ಈ ಅಧಿಕಾರಿ ಎತ್ತಂಗಡಿ ಬೊಂಬೆಯ ನಾಡಿನ ಪಕ್ಷಪಾತಿ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಆಯಕಟ್ಟಿನ ಹುದ್ದೆಗಳಿಗೆ ನಂಬಿಕಸ್ಥ ಅಧಿಕಾರಿಗಳನ್ನೇ ಪ್ರತಿಷ್ಠಾಪಿಸಿದ್ದರು. ಬಹುಪಾಲು ಅಧಿಕಾರಿಗಳು ಹುದ್ದೆಯ ಪಾವಿತ್ರ್ಯತೆ ಮರೆತು, ಸ್ವಾಮಿನಿಷ್ಠೆ ಮೆರೆದಿದ್ದರು. ಅರುಣಪ್ರಭ ಸಹಿತ ಅಧಿಕಾರಿಗಳ ಮೇಲೆ ಪ್ರತಿಪಕ್ಷಗಳ ಕೆಂಗಣು ಬಿದ್ದಿತ್ತು.
ಖೆಡ್ಡಾಕ್ಕೆ ಬಿದ್ದ ಆನೆ:  ಚುನಾವಣಾ ಅಧಿಸೂಚನೆ ಹೊರಬಿದ್ದಾಗ ಇದ್ದ ಮತದಾರರ ಪಟ್ಟಿಯನ್ನು ಚುನಾವಣೆ ವೇಳೆ ನಿಯಮ ಬಾಹಿರವಾಗಿ ಪರಿಷ್ಕರಿಸಿದ ಅರುಣಪ್ರಭ ತಾವೇ ತೋಡಿಕೊಂಡ ಖೆಡ್ಡಾಕ್ಕೆ ಬಿದ್ದಿದ್ದಾರೆ. ಮತದಾರರ ಪಟ್ಟಿಯಲ್ಲಿ ಅವರು ಸ್ವತಃ ಪೆನ್ನಿನಲ್ಲಿ ಡಿಲಿಟ್ ಎಂದು ಗುರುತು ಮಾಡಿ, ಹಲವರ ಮತದಾನದ ಹಕ್ಕು ಕಸಿದುಕೊಂಡಿದ್ದಾರೆ.
ಸಾಕಷ್ಟು ಕುಟುಂಬಗಳಲ್ಲಿ ಮಗನ ಹೆಸರು ಉಳಿಸಿ ಅಪ್ಪನನ್ನು, ಪತ್ನಿ ಹೆಸರು ಉಳಿಸಿ ಪತಿಯ ಹೆಸರನ್ನು ಕೈ ಬಿಟ್ಟಿರುವ ನಿದರ್ಶನಗಳಿವೆ. ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡುವಾಗ ಸಂಬಂಧಿಸಿದವರಿಗೆ ನೊಟೀಸ್ ಜಾರಿಗೊಳಿಸಬೇಕು. ಬಳಿಕ ಮಹಜರು ನಡೆಸಬೇಕು. ಬಹುತೇಕ ಪ್ರಕರಣಗಳಲ್ಲಿ ಈ ನಿಯಮ ಪಾಲಿಸಿಲ್ಲವೆನ್ನುವ ದೂರಿದೆ.
ಈ ತಹಸೀಲ್ದಾರ್ ಮಾಡಿಟ್ಟ ಅವಾಂತರ ಚನ್ನಪಟ್ಟಣದ ಮಂಗಳವಾರಪೇಟೆಯ ವಾರ್ಡ್ ನಂ.2 ರಲ್ಲಿ ದೊಡ್ಡ ರಂಪಾಟಕ್ಕೆ ಕಾರಣವಾಗಿದೆ. ಸ್ಥಳೀಯ ಜೆಡಿಎಸ್ ಮುಖಂಡರು ತಹಸೀಲ್ದಾರ್ ಅವರನ್ನು ಯೋಗೇಶ್ವರ್ ಏಜೆಂಟ್ ಎಂದು ನೇರ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಭೇಟಿ ಬಳಿಕ ಅಲ್ಲಿ ಪರಿಸ್ಥಿತಿ ತಿಳಿಗೊಂಡಿತ್ತು.
ಮೊದಲೇ ಗುಮಾನಿ:  ಚನ್ನಪಟ್ಟಣ ಕ್ಷೇತ್ರದಿಂದ ಪತ್ನಿ ಅನಿತಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಿಗಳ ಧೋರಣೆ ಬಗ್ಗೆ ಬಹಿರಂಗ ಸಭೆಗಳಲ್ಲೇ ಅಸಮಾಧಾನ ವ್ಯಕ್ತಪಡಿಸಿ, ತಕ್ಕಶಾಸ್ತಿ ಮಾಡುವ ಎಚ್ಚರಿಕೆ ನೀಡಿದ್ದರು. ಈ ವಿಷಯದಲ್ಲಿ ಅರುಣಪ್ರಭ ಹೆಸರು ಹೆಚ್ಚು ಪ್ರಸ್ತಾಪವಾಗಿತ್ತು.
ಚನ್ನಪಟ್ಟಣದಲ್ಲಿ ಯೋಗೇಶ್ವರ್ ಬಗ್ಗು ಬಡಿಯಲು ಮೊದಲಿಗೆ ತಹಸೀಲ್ದಾರ್ ಬದಲಿಸಬೇಕೆನ್ನುವ ಚಿಂತನೆ ಜೆಡಿಎಸ್ ಮತ್ತು ಬಿಜೆಪಿ ಪಾಳಯದಲ್ಲಿ ಮೊದಲೇ ನಡೆದಿತ್ತು. ನಗರಸಭೆ ಚುನಾವಣೆಯಲ್ಲಾದ ಕಹಿ ಅನುಭವದ ಬೆನ್ನಲ್ಲೇ ವಿವಿಧ ಪ್ರಕರಣಗಳನ್ನು ಕೆದಕಿ, ವರ್ಗಗೊಳಿಸಲಾಗಿದೆ.
ಲೋಕಾಯುಕ್ತದಲ್ಲಿ ಪ್ರಕರಣ:  ಚನ್ನಪಟ್ಟಣ ತಾಲೂಕಿನ ಚೋಳಮಾರನಹಳ್ಳಿಯ ಸರ್ವೆ ನಂ.90ರ ಸರ್ಕಾರಿ ಜಾಗಕ್ಕೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ, ಖಾಸಗಿಯವರಿಗೆ ಪರಭಾರೆ ಮಾಡಿಕೊಟ್ಟಿರುವ ಆರೋಪಕ್ಕೆ ಅರುಣಪ್ರಭ ಗುರಿಯಾಗಿದ್ದಾರೆ. ಈ ಸಂಬಂಧ ರಾಮನಗರ ಸೆಷನ್ಸ್ ನ್ಯಾಯಾಲಯದಲ್ಲಿ ಕೇಸು ದಾಖಲಾಗಿದೆ. ಹಗರಣದಲ್ಲಿ ಅರುಣಪ್ರಭ ಸಹಿತ ವಿವಿಧ ಅಧಿಕಾರಿಗಳು ಕಳಂಕ ತಂದುಕೊಂಡಿದ್ದಾರೆ. ನ್ಯಾಯಾಲಯವು ಸದರಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದು, ತನಿಖೆ ಅಂತಿಮ ಹಂತಕ್ಕೆ ತಲುಪಿದೆ. ಈ ವಿಷಯದಲ್ಲಿ ಜೆಡಿಎಸ್ಮ್‌ತ್ತು ರೈತ ಸಂಘದ ಮುಖಂಡರು ತಹಸೀಲ್ದಾರರ್ವಿರುದ್ಧ ಕಾನೂನು ಸಮರ ನಡೆಸಿದ್ದಾರೆ.
ಮಾಸಾಶನ ರದ್ದತಿ:  ಚನ್ನಪಟ್ಟಣ ತಾಲೂಕಿನಾದ್ಯಂತ ಸಾಮಾಜಿಕ ಭದ್ರತಾ ಯೋಜನೆಗಳಡಿ ವೃದ್ಧಾಪ್ಯ, ವಿಧವಾ, ವಿಕಲಚೇತನರ ಮಾಸಾಶನ ಪಡೆಯುತ್ತಿದ್ದ 15 ಸಾವಿರ ಫಲಾನುಭವಿಗಳನ್ನು ರದ್ದುಪಡಿಸಿದ್ದರು. ಇಲ್ಲೂ ಪಕ್ಷಪಾತದ ಆರೋಪ ಹೊರಿಸಿ, ರಾಜಕೀಯ ಪಕ್ಷಗಳಿಂದ ಪ್ರತಿಭಟನೆ ನಡೆದಿತ್ತು.
ರದ್ದುಗೊಂಡಿದ್ದವರ ಪೈಕಿ 3 ಸಾವಿರದಷ್ಟು ಮಂದಿಗೆ ಮರಳಿ ಸೌಲಭ್ಯ ಕಲ್ಪಿಸಲಾಗಿದೆ. ಉಳಿದವರು ಈಗಲೂ ಹಿಡಿಶಾಪ ಹಾಕುತ್ತಿದ್ದಾರೆ. ತಾಲೂಕು ಕಚೇರಿಯಲ್ಲಿ ಸಾರ್ವಜನಿಕರೊಟ್ಟಿಗೆ ಸೌಜನ್ಯದ ವರ್ತನೆ ಇಲ್ಲದಾಗಿತ್ತು. ದಕ್ಷ, ಪ್ರಾಮಾಣಿಕ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದ ಅರುಣಪ್ರಭ ಚನ್ನಪಟ್ಟಣದಾದ್ಯಂತ ಭೂ ಮಾಫಿಯಾ ಉಪಟಳ, ಅಕ್ರಮ ಮರಳು ಗಣಿಗಾರಿಕೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಮಾತ್ರ ಅಂತ್ಯವಾಡಿರಲಿಲ್ಲ. ಚುನಾವಣೆ ಅಕ್ರಮಗಳ ವಿಷಯದಲ್ಲೂ ಕಣ್ಮುಚ್ಚಿ ಕುಳಿತಿದ್ದರು.



ವರ್ಗಾವಣೆ ಆದೇಶ ಬಂದಿದೆ
ಚನ್ನಪಟ್ಟಣ ತಹಸೀಲ್ದಾರ್ ಅರುಣಪ್ರಭ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪ್ರತಿ ತಮ್ಮ ಕಚೇರಿಗೆ ತಲುಪಿದೆ. ಅವರಿನ್ನೂ ಹುದ್ದೆಯಿಂದ ಮುಕ್ತಿಗೊಂಡಿಲ್ಲ. ಈ ಕುರಿತು ಮತ ಎಣಿಕೆ ಪ್ರಕ್ರಿಯೆ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ಚನ್ನಪಟ್ಟಣದಲ್ಲಿ ಮತದಾರರ ಪಟ್ಟಿ ಲೋಪ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ.
-ವಿ.ಶ್ರೀರಾಮರೆಡ್ಡಿ, ಜಿಲ್ಲಾಧಿಕಾರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement