ಬಿಸಿಯೂಟದ ಅಕ್ಕಿ ಕಳವು: ಶಿಕ್ಷಕಿಗೆ ತರಾಟೆ
ದೊಡ್ಡಬಳ್ಳಾಪುರ: ಮಕ್ಕಳ ಬಿಸಿಯೂಟದ ಅಕ್ಕಿಯನ್ನು ಮನೆಗೆ ಕದ್ದೊಯ್ಯುತ್ತಿದ್ದ ಶಾಲಾ ಮುಖ್ಯಶಿಕ್ಷಕಿಯನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ನೇರಳಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಗಿರಿಜಮ್ಮ ಗೂಸಾ ತಿಂದವರು. ಹಲವು ದಿನಗಳಿಂದ ಸರ್ಕಾರ ಮಕ್ಕಳಿಗೆ ಬಿಸಿಯೂಟ ನೀಡಲು ನೀಡುವ ಅಕ್ಕಿಯಲ್ಲಿ ಇಂತಿಷ್ಟನ್ನು ತನ್ನ ಪಾಲನ್ನಾಗಿ ವಿಭಾಗಿಸಿಕೊಳ್ಳುತ್ತಿದ್ದರು. ಅಲ್ಲದೆ, ಅಕ್ಕಿಯನ್ನು ಬೀರುವಿನಲ್ಲಿಟ್ಟುಕೊಂಡಿದ್ದರು. ಇದನ್ನು ಗುಮಾಸ್ತನೊಬ್ಬ ಗಮನಿಸಿದ್ದಾನೆ. ತದನಂತರ ಅವರು ಅಕ್ಕಿಯನ್ನು ಮನೆಗೆ ಒಯ್ಯುವಾಗ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಗ್ರಾಮಸ್ಥರು ಶಿಕ್ಷಕಿಯ ಈ ಕೃತ್ಯ ನಿರಂತರವಾಗಿ ನಡೆಯುತ್ತಿತ್ತು. ಈ ಹಿಂದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯಲ್ಲೂ ಅನೇಕ ಬಾರಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಶಿಕ್ಷಕಿ ತನ್ನ ಛಾಳಿ ಮುಂದುವರಿಸಿದ್ದಾರೆ.