ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಯಾರಿಗೆ ನೀರು, ಹಾರ?

Rashmi Kasaragodu
Updated On : 9 Mar 2013, 12:40 pm

ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಮತಬೇಟೆ ಯಶಸ್ವಿಯಾಗಿ ಮುಗಿದಿದ್ದು, ಈಗ ಎಲ್ಲ ಅಭ್ಯರ್ಥಿಗಳ ಹಣೆಬರಹ ಮತಯಂತ್ರ ಸೇರಿದೆ. ಮತದಾರ ಕೊಟ್ಟಿರುವ ಮಹತ್ವದ ತೀರ್ಪು ಬಹಿರಂಗವಾಗಬೇಕಿದ್ದರೆ ಸೋಮವಾರದವರೆಗೆ ಕಾಯಬೇಕು. ಈ ಮಧ್ಯೆ ಸೋಲು-ಗೆಲವಿನ ಲೆಕ್ಕಾಚಾರ ಅಭ್ಯರ್ಥಿಗಳು ಕಾರ್ಯಕರ್ತರಲ್ಲಿ ಆರಂಭವಾಗಿದೆ.
ಕಳೆದ 10 ದಿನಗಳಿಂದ ಇಡೀ ನಗರದಲ್ಲಿ ಭರಾಟೆ- ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿದ್ದವು. ಪ್ರತಿ ವಾರ್ಡಿನ ರಸ್ತೆ, ಟೀ ಅಂಗಡಿ, ಎಲ್ಲಿ ನೋಡಿದರಲ್ಲಿ ರಾಜಕೀಯ ಚರ್ಚೆಯಾಗುತ್ತಿತ್ತು. ಪ್ರಚಾರದ ಅಬ್ಬರ ಒಂದೆಡೆಯಾದರೆ, ಶ್ರೀಸಾಮಾನ್ಯನ ಅದೇ ಆರೋಪ-ಆಡಳಿತ ಯಂತ್ರದ ಬಗೆಗಿನ ಅಸಮಾಧಾನ ಮತ್ತೊಂದೆಡೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಜತೆಗೆ ಸ್ಟಾರ್ ಪ್ರಚಾರಕರ ಭರಾಟೆಯಲ್ಲಿ ಇಡೀ ನಗರ ಮಿಂದೇಳುತ್ತಿತ್ತು. ಆದರೆ ಗುರುವಾರ ಮತದಾನ ಮುಕ್ತಾಯವಾದ ಮೇಲೆ ಇಡೀ ಊರಿನಲ್ಲಿ ನೀರವ ವಾತಾವರಣ ನಿರ್ಮಾಣವಾಗಿದೆ.
ಚುನಾವಣೆಯಲ್ಲಿ ನಾವು ಗೆಲ್ಲುವುದು ಕಷ್ಟ ಎಂದು ಕೆಲವರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದರೆ, ಹಲವರು ಗೆದ್ದೇ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಹಣ ಖರ್ಚು ಮಾಡಿ ಆರ್ಭಟಿಸಿರುವರಂತೂ ಈಗಾಗಲೇ ಗೆದ್ದೇಬಿಟ್ಟಿದ್ದೇವೆ ಎಂಬ ಠೀವಿ ಪ್ರದರ್ಶಿಸುತ್ತಿದ್ದಾರೆ. ಆದಾಗ್ಯೂ ವಿದ್ಯಾವಂತರ ಬಡಾವಣೆಗಳಲ್ಲಿ ಕಡಿಮೆ ಮತದಾನವಾಗಿರುವುದು ಬಹಳಷ್ಟು ಪ್ರಜ್ಞಾವಂತ ಮತದಾರರು ಚುನಾವಣಾ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದಾರೆ ಎಂಬುದಕ್ಕೆ ಸಾಕ್ಷಿಯಂತಿದೆ.
ಪ್ರತಿಷ್ಠೆ ಪ್ರಶ್ನೆ: ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಟಿಕೆಟ್ ವಂಚಿತರಾಗಿ ಸ್ವತಂತ್ರವಾಗಿ ಸ್ಪರ್ಧಿಸಿದವರು, ಟಿಕೆಟ್ ಕೈಯಲ್ಲಿದ್ದರೂ ಸ್ವತಂತ್ರವಾಗಿ ಸ್ಪರ್ಧಿಸಿ ಜಾಣತನ ಮೆರೆದವರು ಈಗ ಪ್ರತಿಷ್ಠೆ ಉಳಿಸಿಕೊಳ್ಳುವ ಆತಂಕದಲ್ಲಿದ್ದಾರೆ. ಗೆದ್ದೆ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದ ಜನರ ಏರುದನಿ ಮತದಾನದ ನಂತರ ಸ್ವಲ್ಪ ತಗ್ಗಿದೆ. ಹಣ-ಆಮಿಷ ಕೆಲಸ ಮಾಡುತ್ತದೆಯೇ ಎಂಬ ಪ್ರಶ್ನೆ ಕೆಲವರಲ್ಲಿದೆ.
27 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಎಷ್ಟು ಸ್ಥಾನಗಳಲ್ಲಿ ಗೆಲ್ಲುತ್ತಾರೆ ಎಂಬುದರ ಮೇಲೆ ಶಾಸಕ ಜೆ.ನರಸಿಂಹಸ್ವಾಮಿ ಮತ್ತು ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಅವರಿಗೆ ಕ್ಷೇತ್ರದ ಮೇಲಿರುವ ಹಿಡಿತ ಸಾಬೀತಾಗಲಿದೆ. ಅದೇ ರೀತಿ ಆಂತರಿಕ ಕಚ್ಚಾಟದಿಂದ ನಲುಗಿರುವ ಜೆಡಿಎಸ್‌ನ ಬಣ ರಾಜಕಾರಣದ ನಡುವೆ ಸ್ಪರ್ಧಿಸಿರುವ 28 ಕ್ಷೇತ್ರಗಳಲ್ಲಿ ಎಷ್ಟು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಮುಂದಿನ ವಿಧಾನಸಭೆ ಚುನಾವಣೆ ಅಭ್ಯರ್ಥಿಯ ಸೆಮಿಫೈನಲ್ ಭವಿಷ್ಯ ನಿರ್ಧಾರಿತವಾಗಲಿದೆ. ಹೀಗಾಗಿ ಇದು ಮಾಜಿ ಸಚಿವ ಸಿ.ಚನ್ನಿಗಪ್ಪ ಅವರಿಗೂ ಪ್ರತಿಷ್ಠೆಯ ವಿಚಾರ.
ಕೆಲ ಪಕ್ಷೇತರರು ಮತ್ತು ಟಿಕೆಟ್ ವಂಚಿತರ ಪರ ಪ್ರಚಾರ ಮಾಡಿ ಬೆಂಬಲಿಸಿದ್ದ ಜಿಲ್ಲಾ ಜೆಡಿಎಸ್ ಖಜಾಂಚಿ ಬಿ.ಮುನೇಗೌಡ ಕೂಡ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದು ಫಲಿತಾಂಶ ಕಾದು ನೋಡಬೇಕಿದೆ. ಈ ಮಧ್ಯೆ ಕನ್ನಡ ಪಕ್ಷ ತನ್ನ ಘನತೆಯನ್ನು ಮತ್ತೆ ಪ್ರತಿಷ್ಠಾಪಿಸುವ ಹಂತದಲ್ಲಿ ಯಶಸ್ವಿ ಹೆಜ್ಜೆ ಇಟ್ಟಿದೆಯೇ ಎಂಬುದಕ್ಕೂ ಕುತೂಹಲದ ಉತ್ತರ ಎದುರು ನೋಡಲಾಗುತ್ತಿದೆ.
 ಸಿಪಿಐ(ಎಂ) ತನ್ನ ಸುಪರ್ದಿನಲ್ಲಿದ್ದ 1 ಕ್ಷೇತ್ರವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಿರುವುದು ಈಗ ಇತಿಹಾಸ. ಈಗ ಎಲ್ಲ ನಿರೀಕ್ಷೆಗಳಿಗೆ ಸೋಮವಾರ ಬರುವ ಫಲಿತಾಂಶ ಉತ್ತರವಾಗಲಿದೆ.
ಅತಂತ್ರ ನಗರಸಭೆ ಸಂಭವ: ಈ ನಡುವೆ ಈ ಬಾರಿ ಮತ್ತೊಮ್ಮೆ ಅತಂತ್ರ ನಗರಸಭೆ ಸೃಷ್ಟಿಯಾಗಲಿದೆ ಎಂಬ ಮತದಾನೋತ್ತರ ಅಭಿಪ್ರಾಯ ಎಲ್ಲೆಡೆ ಕೇಳಿ ಬರುತ್ತಿದೆ. ಬಹುಮತಕ್ಕೆ ಬೇಕಾದ 16 ಸ್ಥಾನಗಳು ಒಂದೇ ಪಕ್ಷಕ್ಕೆ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವವರು ಅನಿವಾರ್ಯವಾಗಿ ಇತರೆ ಪಕ್ಷದ ಕೈ ಹಿಡಿಯಬೇಕಾಗುತ್ತದೆ. ಒಂದು ವೇಳೆ ಪಕ್ಷೇತರ ಅಭ್ಯರ್ಥಿಗಳೂ ನಗರಸಭೆಯ ಗಾದಿ ವಿಚಾರದಲ್ಲಿ ನಿರಾಯಕರಾಗುತ್ತಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement