ಶೋಷಿತ ಮಹಿಳೆ ಕಾನೂನು ನೆರವು ಪಡೆಯಲಿ
ಕ.ಪ್ರ. ವಾರ್ತೆ ್ಣ ರಾಮನಗರ ್ಣ ಮಾ.9: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಕಾನೂನು ಸೇವಾ ಪ್ರಾಧಿಕಾರದಿಂದ ಅಗತ್ಯ ನೆರವು ಪಡೆದುಕೊಂಡು, ಸಮಸ್ಯೆ ಪರಿಹರಿಸಿಕೊಳ್ಳಲು ಮುಂದಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಕೆ.ಕೋಮಲ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಂಧ್ಯಾ ಸ್ವಯಂ ಸೇವಾ ಸಂಸ್ಥೆಯಿಂದ ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1909ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗಿತ್ತು. ಅಲ್ಲಿಂದೀಚೆಗೆ ಜಗತ್ತಿನಾದ್ಯಂತ ದಿನಾಚರಣೆ ಆಚರಿಸುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ಸೂಕ್ತ ಚರ್ಚೆ ನಡೆಸಲಾಗುತ್ತಿದೆ ಎಂದರು.
ನಿರ್ಭಯವಾಗಿ ಓಡಾಡಲಿ: ನಮ್ಮ ದೇಶ ರಾಮ ರಾಜ್ಯವಾಗಬೇಕಾದರೆ ಒಬ್ಬಂಟಿ ಮಹಿಳೆಯು ಮಧ್ಯರಾತ್ರಿ ನಿರ್ಭಯವಾಗಿ ಓಡಾಡುವ ಸ್ಥಿತಿ ನಿರ್ಮಾಣವಾಗಬೇಕು. ಮಹಿಳೆಯರು ತಮ್ಮ ಹಕ್ಕುಗಳ ಜತೆಗೆ ಕಾನೂನಿನ ಅರಿವನ್ನು ಹೊಂದಿದಾಗ ದೌರ್ಜನ್ಯದಿಂದ ದೂರ ಉಳಿಯಬಹುದು ಎಂದು ತಿಳಿಸಿದರು.
ವಾರ್ಷಿಕ ಆದಾಯ ರು.1 ಲಕ್ಷಕ್ಕಿಂತ ಕಡಿಮೆ ಇರುವ ಮಹಿಳೆಯರು ಕಾನೂನು ಸೇವಾ ಪ್ರಾಧಿಕಾರದ ಸಲಹೆ ಹಾಗೂ ಉಚಿತ ಕಾನೂನು ನೆರವು ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಈ ಅವಕಾಶವನ್ನು ಎಷ್ಟೋ ಮಂದಿ ಬಳಸಿಕೊಳ್ಳದಿರುವುದು ವಿಪರ್ಯಾಸದ ಸಂಗತಿ ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್.ಎಂ. ಚಂದ್ರ ಮಾತನಾಡಿ, ಇಲಾಖೆಯಿಂದ ಮಹಿಳೆಯರಿಗೆ ನೆರವು ನೀಡಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ, ದೇವದಾಸಿ ಪದ್ಧತಿ ತಡೆ ಕಾಯ್ದೆ, ಮಹಿಳಾ ಹಕ್ಕು ಕಾಯ್ದೆಗಳು ಮಹಿಳಾ ಸಬಲೀಕರಣ ಉದ್ದೇಶದಿಂದ ಜಾರಿಗೆ ತಂದವಾಗಿವೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಬಿ.ಟಿ. ನೇತ್ರಾವತಿಗೌಡ, ಜಿಲ್ಲಾ ಆಸ್ಪತ್ರೆಯ ಮನೋವೈದ್ಯೆ ಡಾ.ರಜನಿ ಭಾರತ್ ವಿಕಾಸ್ ಪರಿಷತ್ತಿನ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಅಯೂಬ್ ಷರೀಪ್ ಮಾತನಾಡಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಯ್ಯ, ಕಾಲೇಜು ಪ್ರಾಂಶುಪಾಲರಾದ ಶಕುಂತಲ, ಮಹಿಳಾ ಸಂರಕ್ಷಣಾಧಿಕಾರಿ ನಾಗಲಾಂಬಿಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ರಾಧ ಭಾಗವಹಿಸಿದ್ದರು. ಪ್ರೇಮ ಸ್ವಾಗತಿಸಿದರು. ಸೌಜನ್ಯ ವಂದಿಸಿದರು.