ಜೆಡಿಎಸ್ ಭದ್ರಕೋಟೆಗೆ 'ಕೈ' ಲಗ್ಗೆ
ಮತ್ತೀಕೆರೆ ಜಯರಾಮ್
ಕನ್ನಡಪ್ರಭ ವಾರ್ತೆ ್ಣ ರಾಮನಗರ ್ಣ ಮಾ.11
ಸ್ವಂತ ಬಲದ ಮೇಲೆ ಸರ್ಕಾರ ರಚನೆ ಕನಸು ಕಾಣುತ್ತಿರುವ ದಳಪತಿ ಎಚ್.ಡಿ. ಕುಮಾರಸ್ವಾಮಿ ತವರಿನಲ್ಲೇ ತೀವ್ರ ಮುಖಭಂಗ ಅನುಭವಿಸಿದ್ದಾರೆ. ರೇಷ್ಮೆ ನಾಡಿನ ಜೆಡಿಎಸ್ ಭದ್ರಕೋಟೆಗೆ ದೀರ್ಘಾವಧಿ ಬಳಿಕ ಕಾಂಗ್ರೆಸ್ ಲಗ್ಗೆಯಿಟ್ಟಿದೆ. ಕಳೆದ ಬಾರಿ ಪಾರುಪತ್ಯ ಸ್ಥಾಪಿಸಿದ್ದ ಜೆಡಿಎಸ್ ಪ್ರಸಕ್ತ ಚುನಾವಣೆಯಲ್ಲಿ ಮಕ್ಕಾಡೆ ಮಲಗಿದೆ.
ಕುಮಾರಸ್ವಾಮಿ ಸ್ವಕ್ಷೇತ್ರ ರಾಮನಗರ, ಜೆಡಿಎಸ್ ಪ್ರಭಾವಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿನಿಧಿಸುತ್ತಿರುವ ಮಾಗಡಿ ಪುರಸಭೆ, ಕಾಂಗ್ರೆಸ್ ದಂಡ ನಾಯಕ ಡಿ.ಕೆ.ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ಪುರಸಭೆಯಲ್ಲಿ ಕಾಂಗ್ರೆಸ್ ಕೈ ಮೇಲಾಗಿದೆ. ಬೊಂಬೆನಾಡು ಚನ್ನಪಟ್ಟಣದಲ್ಲಿ ಪಕ್ಷಾಂತರಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆಟ ನಡೆದಿಲ್ಲ. ಅಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದ್ದು, ಕ್ಷೇತ್ರಾಂತರಿ ಅನಿತಾ ಕುಮಾರಸ್ವಾಮಿ ಪಕ್ಷದ ಗೆಲವಿನಿಂದ ಹಿರಿ ಹಿಗ್ಗಿದ್ದಾರೆ.
ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿ ಕಾಂಗ್ರೆಸ್ ಗಣನೀಯ ಸ್ಥಾನಗಳನ್ನು ಅಧಿಕವಾಗಿ ಗಳಿಸಿದ್ದು, ಜೆಡಿಎಸ್ ನಷ್ಟ ಅನುಭವಿಸಿದೆ. ಜಿಲ್ಲೆಯ 112 ಸ್ಥಾನಗಳ ಪೈಕಿ ಕಾಂಗ್ರೆಸ್ 65(33ಹೆಚ್ಚು), ಜೆಡಿಎಸ್ 40(-34)ರಲ್ಲಿ ಗೆಲವು ಸಾಧಿಸಿವೆ. ಬಿಜೆಪಿ 2, ಬಿಎಸ್ಆರ್ ಕಾಂಗ್ರೆಸ್ 1 ಮತ್ತು ಪಕ್ಷೇತರರು 4 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ಹಲವೆಡೆ ಸ್ಪರ್ಧೆ ಒಡ್ಡಿದ್ದ ಕೆಜೆಪಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ.
ಮುಳುವಾಯ್ತು ಆತ್ಮವಿಶ್ವಾಸ: ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಪ್ರವಾಸ ಕೈಗೊಂಡು ಕುಮಾರಸ್ವಾಮಿ ಸ್ವಕ್ಷೇತ್ರ ರಾಮನಗರವೂ ಸೇರಿದಂತೆ ತವರು ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅತಿಯಾದ ಆತ್ಮವಿಶ್ವಾಸ, ಸ್ಥಳೀಯ ನಾಯಕರ ವೈಫಲ್ಯ ಮತ್ತು ಮರು ಆಯ್ಕೆ ಬಯಸಿದವರಿಗೆ ಮಣೆ ಹಾಕಿದ್ದೇ ಜೆಡಿಎಸ್ಗೆ ಮುಳುವಾಗಿದೆ. ಈ ಪಕ್ಷದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಬಯಸಲು ನಿರ್ಧರಿಸಿರುವ ಚನ್ನಪಟ್ಟಣ ಹೊರತಾಗಿ ಉಳಿದೆಡೆ ಸಾಂಘಿಕ ಹೋರಾಟ ನಡೆಯಲಿಲ್ಲ.
ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿರುವ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಬ್ಬರ ಹೆಚ್ಚಿತ್ತು. ರಾಮನಗರದಲ್ಲಿ ಮರಿದೇವರು, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್, ಮಾಗಡಿಯಲ್ಲಿ ಎ.ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೇರಳ ಸಂಪನ್ಮೂಲ ಒದಗಿಸಿದ್ದಲ್ಲದೆ ಎಲ್ಲ ಮುಖಂಡರೊಡನೆ ಸಂಘಟಿತ ಹೋರಾಟ ನಡೆಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರ ವಹಿಸಿದ್ದೇ ಯಶಸ್ಸಿಗೆ ಕಾರಣವಾಗಿದೆ.
ವಿಶೇಷವಾಗಿ ರಾಮನಗರ ನಗರಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ನಡೆ ಆಮೆ, ಮೊಲದ ಓಟ ಸ್ಪರ್ಧೆ ನೆನಪಿಸುವಂತಿದೆ. ಕುಮಾರಸ್ವಾಮಿ ಅವರಿಲ್ಲಿ ಸ್ವಯಂ ನಿವೃತ್ತ ಸರ್ಕಾರಿ ನೌಕರ ಮರಿದೇವರು ಬಗ್ಗೆ ಕೀಳರಿಮೆ ಇರಿಸಿಕೊಂಡಿದ್ದಾರೆ. ಅವರು ಎಷ್ಟರ ಮಟ್ಟಿಗೆ ಸಮರ್ಥರು ಎನ್ನುವುದಕ್ಕಿಂತಲೂ ಒಬ್ಬ ಎದುರಾಳಿ ಎಂದು ಪರಿಗಣಿಸಲೇ ಇಲ್ಲ. ನೆಚ್ಚಿಕೊಂಡ ಸ್ಥಳೀಯ ನಾಯಕರಿಂದ ಯಾವ ಹಂತದಲ್ಲೂ ನಿರೀಕ್ಷಿತ ಸಹಕಾರ ಸಿಕ್ಕಿಲ್ಲ.
ಪ್ರಾಬಲ್ಯ ಮೆರೆದ ಡಿಕೆಶಿ: ಕನಕಪುರ ಪುರಸಭೆಯಲ್ಲಿ ಕಳೆದ ಬಾರಿ ಜೆಡಿಎಸ್ ಬಹುಮತ ಹೊಂದಿದ್ದರೂ ಆಡಳಿತ ಚುಕ್ಕಾಣಿ ಕೈ ವಶವಾಗಿತ್ತು. ಈ ಬಾರಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಲ್ಲಿ ಭರ್ಜರಿ ಬೇಟೆಯನ್ನೇ ನಡೆಸಿದ್ದಾರೆ. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ನಾಯಕತ್ವ ವಹಿಸಿಕೊಂಡ ಬಳಿಕ ಕನಕಪುರದಲ್ಲಿ ಜೆಡಿಎಸ್ ಧೂಳೀಪಟವಾಗಿದೆ. ಹಿಂದೆಂದೂ ಕಾಣದಂತಹ ದಯನೀಯ ಸೋಲು ಅನುಭವಿರುವ ಪಕ್ಷಕ್ಕೆ ಮೇಜರ್ ಸರ್ಜರಿಯೇ ಆಗಬೇಕಾದ ಸ್ಥಿತಿ ಎದುರಾಗಿದೆ.
ಚನ್ನಪಟ್ಟಣ, ರಾಮನಗರ, ಮಾಗಡಿಯಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದ್ದರೆ, ಕನಕಪುರದಲ್ಲಿ ಮಾತ್ರ ವಾತಾವರಣ ಭಿನ್ನವಾಗಿದೆ. ಪಟ್ಟಣದಲ್ಲಿ 5 ಸಾವಿರ ನಿವೇಶನಗಳ ಹಂಚಿಕೆ, ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿಯ ಗೆರೆ ಮೂಡಿಸಿರುವುದು ಶಿವಕುಮಾರ್ ಪ್ರಾಬಲ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ಹಣ, ಬಳುವಳಿಗಳ ಹಂಚಿಕೆಯಲ್ಲೂ ಕಾಂಗ್ರೆಸ್ದೇ ಅಬ್ಬರ ಕಂಡು ಬಂದಿತ್ತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಕೊಳವೆ ಬಾವಿ ಪ್ರಯೋಗ: ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ವಾರಕ್ಕೊಮ್ಮೆಯೂ ನೀರು ಪೂರೈಕೆಯಾಗದ ಸ್ಥಿತಿ ನಿರ್ಮಾಣವಾಗಿದೆ. ಇದರ ಲಾಭ ನಿಜಕ್ಕೂ ಕಾಂಗ್ರೆಸ್ಗೆ ಆಗಿದೆ. ಪ್ರಮುಖವಾಗಿ ಅಲ್ಪ ಸಂಖ್ಯಾತರ ವಾರ್ಡ್ಗಳು ಸಹಿತ ನಾನಾ ಕಡೆ ಕಾಂಗ್ರೆಸ್ ಮುಖಂಡ ಮರಿದೇವರು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಕೊಳವೆ ಬಾವಿ ಕೊರೆಸಿ ಟ್ಯಾಂಕರ್ ಮೂಲಕ ನೀರೊದಗಿಸಿದರು. ಅದೇ ಈಗ ಕಾಂಗ್ರೆಸ್ ಗೆಲವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ವಸತಿ ರಹಿತರಿಗೆ ಸೂರು ಕಲ್ಪಿಸುವ ಯೋಜನೆ ಘೋಷಿಸಲಾಗಿತ್ತು. ತಲಾ 5 ಸಾವಿರ ಪಾವತಿಸಿ, ಸೂರಿನ ಕನಸು ಹೊತ್ತವರಿಗೆ 5 ವರ್ಷ ಕಳೆದರೂ ಹಕ್ಕು ಪತ್ರ ಸಿಗಲಿಲ್ಲ. ಕಳೆದ ಬಾರಿ ಕುಮಾರಸ್ವಾಮಿ ನಾಮಬಲದಿಂದ ಗದ್ದುಗೆ ಹಿಡಿದವರು ತಮ್ಮ ದುರಾಡಳಿತದ ಮೂಲಕ ನಗರಸಭೆಯನ್ನು ಅರಾಜಕತೆಗೆ ದೂಡಿದರು. ಅದರಿಂದ ಜೆಡಿಎಸ್ಗೆ ಪ್ರತಿಕೂಲ ಪರಿಸ್ಥಿತಿ ಎದುರಾಗಿದೆ.
ಮಾಗಡಿಯಲ್ಲಿ ಎರವಾದ ಹಗರಣ: ಮಾಗಡಿ ಪುರಸಭೆಯಲ್ಲಿ ಜೆಡಿಎಸ್ಗೆ ಆಘಾತಕಾರಿ ಸೋಲುಂಟಾಗಿದೆ. ಶಾಸಕ ಎಚ್.ಸಿ.ಬಾಲಕೃಷ್ಣ ನೆರಳಿನಂತೆ ಅಡ್ಡಾಡಿಕೊಂಡಿದ್ದವರು ಲೋಕೋಪಯೋಗಿ ಇಲಾಖೆಯ ಗುತ್ತಿಗೆ ವ್ಯವಹಾರದಲ್ಲಿ ನಡೆಸಿದ ಬಹುಕೋಟಿ ಹಗರಣದ ಫಲವೇ ಈಗ ಜೆಡಿಎಸ್ಗೆ ಎದುರಾಗಿರುವ ಫಲಿತಾಂಶಕ್ಕೆ ಕಾರಣ. ಇಲ್ಲಿ ಮತದಾರರು ಶಾಸಕರ ಬೆಂಬಲಿಗರ ಮೇಲಿನ ಸಿಟ್ಟನ್ನು ಪಕ್ಷದ ಮೇಲೆ ಪ್ರದರ್ಶಿಸಿದ್ದು, ಫಲಿತಾಂಶ ಎಚ್ಚರಿಕೆಯ ಗಂಟೆಯಾಗಿದೆ.
ಕೆಪಿಸಿಸಿ ಸದಸ್ಯ ಎ.ಮಂಜುನಾಥ್ ಅವರು ಜೆಡಿಎಸ್ ವೈಫಲ್ಯವನ್ನು ಜನತೆಯ ಮುಂದಿಟ್ಟು, ಕಾಂಗ್ರೆಸ್ಗೆ ಮತದಾರರನ್ನು ಒಲಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಈ ಪೌರ ಸಂಸ್ಥೆಯಲ್ಲಿ ಹಣ, ಬಳುವಳಿಗಳ ಹಂಚಿಕೆಯಲ್ಲಿ ಜೆಡಿಎಸ್ ಭರಾಟೆಯೇ ಜೋರಾಗಿತ್ತು. ಬಾಲಕೃಷ್ಣ ಜಪಿಸಿದ ಅಭಿವೃದ್ಧಿಯ ಮಂತ್ರ ಕೆಲಸ ಮಾಡಿಲ್ಲ. ಬಿಜೆಪಿ, ಕೆಜೆಪಿ, ಬಿಎಸ್ಸಾರ್ಗಳಿಗೆ ಠೇವಣಿ ಇಲ್ಲದಾಗಿದೆ.
ನಗೆ ಬೀರಿದ ಅನಿತಾ: ಹೊಸ ರಾಜಕೀಯ ಸಮೀಕರಣದ ಕಾರಣಕ್ಕೆ ಚನ್ನಪಟ್ಟಣ ಫಲಿತಾಂಶ ಎಲ್ಲರ ಗಮನ ಸೆಳೆದಿತ್ತು. ಅಧಿಕಾರಕ್ಕಾಗಿ ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾಗಿದ್ದ ಸಿ.ಪಿ.ಯೋಗೇಶ್ವರ್ ಈ ಚುನಾವಣೆ ಹೊಸ್ತಿಲಲ್ಲಿ ಭವಿಷ್ಯ ಹುಡುಕಿಕೊಂಡು ಕಾಂಗ್ರೆಸ್ ಸೇರಿದ್ದರು. ಇನ್ನೊಂದೆಡೆ ಅನಿತಾ ಕುಮಾರಸ್ವಾಮಿ ಮಧುಗಿರಿ ತೊರೆದು, ಚನ್ನಪಟ್ಟಣದಲ್ಲಿ ನೆಲೆ ಹುಡುಕಿ ಬಂದಿದ್ದಾರೆ. ಸಮಬಲದ ಸೆಣಸಾಟವಿದ್ದ ಇಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದಿದೆ.
ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಸಹಿತ ಪ್ರತಿ ಹಂತದಲ್ಲೂ ಜೆಡಿಎಸ್ ಪಾಳಯದಲ್ಲಿ ಅಪಸ್ವರಕ್ಕೆ ಆಸ್ಪದವಿರಲಿಲ್ಲ. ಇಲ್ಲಿ ಪಕ್ಷಕ್ಕೆ ಕಾಡುತ್ತಿದ್ದ ನಾಯಕತ್ವದ ಕೊರತೆ ನೀಗಿಸುವಲ್ಲಿ ಅನಿತಾ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಜೆಡಿಎಸ್ನಂತೆ ಕಾಂಗ್ರೆಸ್ನಲ್ಲಿ ಗಂಭೀರತೆ ಕಂಡು ಬರಲಿಲ್ಲ. ಪಟ್ಟಣದ ಅಭಿವೃದ್ಧಿ ಹಿನ್ನಡೆಗೆ ಯೋಗೇಶ್ವರ್ ಕೂಡ ಕಾರಣರೆನ್ನುವ ಆರೋಪ ವ್ಯಕ್ತವಾಯಿತು. ಹೀಗಾಗಿ ಜೆಡಿಎಸ್ ಪರ ವಾತಾವರಣ ನಿರ್ಮಾಣವಾಗಿದೆ.