ಸೋಲಿಲ್ಲದ ಪ್ರಭುದೇವ 5ನೇ ವಿಜಯೋತ್ಸವ
ದೊಡ್ಡಬಳ್ಳಾಪುರ, ಮಾ.11
ದೊಡ್ಡಬಳ್ಳಾಪುರ ನಗರಸಭೆ ಮಟ್ಟಿಗೆ ಇವರು ಸೋಲಿಲ್ಲದ ಸರದಾರ. ಈ ಬಾರಿ ಕೂಡ ತನ್ನ ಗೆಲವಿನ ಯಾತ್ರೆ ಮುಂದುವರೆಸಿರುವ ತ.ನ.ಪ್ರಭುದೇವ್ ಸತತ 5 ನಗರಸಭಾ ಚುನಾವಣೆಗಳಲ್ಲಿ ಗೆಲವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಮೂಲತಃ ಕನ್ನಡಪಕ್ಷದ ಗಟ್ಟಿದನಿಯಾಗಿದ್ದ ಪ್ರಭುದೇವ್, ಕಳೆದ 6 ವರ್ಷಗಳ ಹಿಂದೆ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದರು. ಕನ್ನಡಪಕ್ಷದಿಂದ 3 ಬಾರಿ ಪ್ರಚಂಡ ಬಹುಮತಗಳಿಂದ ಚುನಾಯಿತರಾಗಿದ್ದ ಅವರು ಜೆಡಿಎಸ್‌ಗೆ ಬಂದ ಮೇಲೆಯೂ ತೀವ್ರ ಸ್ಪರ್ಧೆ ನೀಡಿ ಗೆದ್ದಿದ್ದಾರೆ. ಸದ್ಯ ಆಯ್ಕೆಯಾಗಿರುವ 31 ಮಂದಿಯಲ್ಲಿ ಅತ್ಯಂತ ಹಿರಿಯರೆನಿಸಿರುವ ಪ್ರಭುದೇವ್ ನಗರಸಭೆ ಸದಸ್ಯನಾಗಿಯೂ ಅತಿಹೆಚ್ಚು ಬಾರಿ ಚುನಾಯಿತನಾದ ಏಕೈಕ ಸದಸ್ಯರಾಗಿದ್ದಾರೆ. ಕನ್ನಡಪರ ಹೋರಾಟಗಳ ಮೂಲಕವೇ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಂಡ ಅವರು ತದನಂತರದಲ್ಲಿ ಅನೇಕ ಸಂಘಟನೆಗಳ ಮೂಲಕ ಕೂಡ ತಮ್ಮ ಛಾಪು ಮೂಡಿಸಿದ್ದರು. ಇತ್ತೀಚೆಗೆ ತೀವ್ರ ಅನಾರೋಗ್ಯದ ನಡುವೆಯೂ ಜನಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿರುವುದು ಅವರ ಜನಪರ ನಿಲುವು-ಧೋರಣೆಗೆ ಹಿಡಿದ ಕನ್ನಡಿ ಎನ್ನಬಹುದು. 80-90ರ ದಶಕದಲ್ಲಿ ಪ್ರಾರಂಭವಾಗಿ 5 ಬಾರಿ ಸತತವಾಗಿ ನಗರಸಭೆಗೆ ಆಯ್ಕೆಯಾದ ಹೆಗ್ಗಳಿಕೆ ಅವರದ್ದು. ಪ್ರಸ್ತುತ ಜೆಡಿಎಸ್ ನಗರ ಘಟಕದ ಅಧ್ಯಕ್ಷರಾಗಿರುವ ಅವರಿಗೆ ಅವರದೇ ಪಕ್ಷ ಅತಿಹೆಚ್ಚಿನ ಸ್ಥಾನಗಳನ್ನು ಪಡೆದಿರುವುದು ವರದಾನವಾಗಿದೆ. ನಗರಸಭೆ ಅಧ್ಯಕ್ಷರಾಗಲು ಎಲ್ಲ ಬಗೆಯ ಅರ್ಹತೆಗಳನ್ನೂ ಹೊಂದಿರುವ ಅವರಿಗೆ ಅವಕಾಶ ಮಾತ್ರ ಇನ್ನೂ ಸಿಕ್ಕಿಲ್ಲ. ಈ ಬಾರಿಯಾದರೂ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬುದಕ್ಕೆ ಕಾಲವಷ್ಟೇ ಉತ್ತರ ಹೇಳಬೇಕಿದೆ. ಇದೇ ವೇಳೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿರುವ ಪ್ರಭುದೇವ್, ಇದು ಜನರ ಪ್ರೀತಿ-ವಿಶ್ವಾಸದ ಸಂಕೇತ. ನನ್ನನ್ನು ಸತತ 20 ವರ್ಷಗಳಿಂದ ಚುನಾಯಿಸುತ್ತಾ ಬರುತ್ತಿರುವ ಜನರಿಗೆ ನಾನು ಚಿರಋಣಿ. ಈ ವಿಶ್ವಾಸವನ್ನು ಉಳಿಸಿಕೊಂಡು ಉತ್ತಮ ಕೆಲಸಗಳನ್ನು ಮಾಡುವುದು ನನ್ನ ಮೇಲಿರುವ ಹೊಣೆಗಾರಿಕೆ ಎಂದಿದ್ದಾರೆ.