ದೊಡ್ಡಬಳ್ಳಾಪುರ: ಸೂಕ್ತ ಬಂದೋಬಸ್ತ್
ದೊಡ್ಡಬಳ್ಳಾಪುರ: ದ್ವಿತೀಯ ಪಿಯುಸಿ ಪರೀಕ್ಷೆಗಳು ಬುಧವಾರದಿಂದ ಆರಂಭವಾಗಲಿದ್ದು, ತಾಲೂಕಿನಲ್ಲಿ ಈ ಬಾರಿ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು 3 ಪರೀಕ್ಷಾ ಕೇಂದ್ರ ತೆರೆಯಲಾಗಿದೆ.
ಇಲ್ಲಿನ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ದೇವರಾಜ ಅರಸ್ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿದ್ದು, ನಗರ ಪ್ರದೇಶದಲ್ಲಿರುವ ಕೊಂಗಾಡಿಯಪ್ಪ ಪ.ಪೂ.ಕಾಲೇಜು, ಸರ್ಕಾರಿ ಪ.ಪೂ.ಕಾಲೇಜುಗಳ ವಾಣಿಜ್ಯ, ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು, ದೇವರಾಜ ಅರಸ್ ಪ.ಪೂ.ಕಾಲೇಜಿನ ವಾಣಿಜ್ಯ ಮತ್ತು ವಿಜ್ಞಾನದ ವಿದ್ಯಾರ್ಥಿಗಳು, ಎಂಎಬಿಎಲ್ ಪ.ಪೂ.ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳು, ಲಾವಣ್ಯ ಪ.ಪೂ.ಕಾಲೇಜು, ಅರವಿಂದ ಸಂಜೆ ಪ.ಪೂ.ಕಾಲೇಜು, ತೂಬಗೆರೆಯ ಸರ್ಕಾರಿ ಪ.ಪೂ.ಕಾಲೇಜು, ಕನಸವಾಡಿ ಸರ್ಕಾರಿ ಪ.ಪೂ.ಕಾಲೇಜು, ದೊಡ್ಡಬೆಳವಂಗಲದ ಸರ್ಕಾರಿ ಪ.ಪೂ.ಕಾಲೇಜು, ಕೊನಘಟ್ಟದ ಸರ್ಕಾರಿ ಪ.ಪೂ.ಕಾಲೇಜುಗಳು ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ.ಬಂದೋಬಸ್ತ್: ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. ಸಂಚಾರಿ ಪರಿವೀಕ್ಷಣಾ ದಳ ಮತ್ತು ಪರೀಕ್ಷಾ ಅಕ್ರಮ ತಡೆ ದಳ ವಿಶೇಷವಾಗಿ ಕಾರ್ಯನಿರ್ವಹಿಸಲಿದೆ. ಪರೀಕ್ಷಾ ಅಕ್ರಮಗಳು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಂತಹ ಕೇಂದ್ರಗಳ ಬಗ್ಗೆ ಕೂಡ ಗಂಭೀರ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯ ಹಿನ್ನಲೆಯಲ್ಲಿ ಸಂಪೂರ್ಣ ವ್ಯವಸ್ಥಿತವಾಗಿ ಅಕ್ರಮಗಳನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಉಚಿತ ವಾಹನ ವ್ಯವಸ್ಥೆ: ಸುಮಾರು 20 ಕಿ.ಮೀ ದೂರದಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಬೇಕಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕನಸವಾಡಿಯ ಯುವ ಮುಖಂಡ ಕೆ.ಎಸ್.ಗಿರೀಶ್ ಉಚಿತ ವಾಹನ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಕನಸವಾಡಿಯಿಂದ ವಾಹನ ಹೊರಡಲಿದ್ದು, ವಿದ್ಯಾರ್ಥಿಗಳು ಸ್ಥಳದಲ್ಲಿ ಹಾಜರಿರುವಂತೆ ಕೋರಿದ್ದಾರೆ.