ನೆಲಮಂಗಲದಲ್ಲೊಂದು 'ತಬರನ ಕತೆ'
ರವಿಕಾಂತ ಕುಂದಾಪುರ
ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡಿಕೊಡದೆ ವಿನಾಕಾರಣ ಸತಾಯಿಸುತ್ತಿರುವ ಪ್ರಕರಣಗಳು ಕೊನೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ..!
ಏಕೆಂದರೆ, ಸರ್ಕಾರಿ ಅಧಿಕಾರಿಗಳ ಈ ವಿಳಂಬ ಧೋರಣೆಗೆ ಕನ್ನಡಿ ಹಿಡಿದಂತೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನೆಲಮಂಗಲದ ಕೆರೆಕತ್ತಿಗನೂರಿನ ಚನ್ನರಂಗಯ್ಯ ಎಂಬುವರು ಸರ್ಕಾರದಿಂದ ಮಂಜೂರಾದ ಹಣ ಪಡೆಯಲು ಕಳೆದ ಮೂರ್ನಾಲ್ಕು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿರುವುದೇ ಅಧಿಕಾರಿಗಳ ಈ ವಿಳಂಬ ಧೋರಣೆಗೆ ಇತ್ತೀಚಿನ ತಾಜಾ ಉದಾಹರಣೆ.ರಾಮನಗರ ಜಾಲಮಂಗಲದ ಗಂಗಯ್ಯ ಎಂಬ ವೃದ್ಧರುತಮ್ಮ ಜಮೀನಿನ ಸರ್ವೆಗೆ ಅರ್ಜಿ ಸಲ್ಲಿಸಿ ಸತತ 6 ವರ್ಷಗಳ ಕಾಲ ಸರ್ಕಾರಿ ಕಚೇರಿಗೆ ಅಲೆದು ಬೇಸತ್ತು ಹತ್ತು ದಿನಗಳ ಹಿಂದಷ್ಟೇ ಅಲ್ಲಿನ ಮಿನಿ ವಿಧಾನಸೌಧದಿಂದ ಹಾರಿ ಜೀವ ಕಳೆದುಕೊಂಡಿದ್ದಾರೆ. ಆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸಂಘ-ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ನಡೆಸಿದ್ದ ತೀವ್ರ ಪ್ರತಿಭಟನೆಯ ಕಾವು ಮರೆಯಾಗುವ ಮುನ್ನವೇ ಅಧಿಕಾರಿಗಳ ವಿಳಂಬ ಧೋರಣೆ ಕುರಿತ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿರುವುದು ಅಂತಹ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮದ ಅಗತ್ಯವನ್ನು ಎತ್ತಿ ತೋರಿಸುತ್ತಿದೆ.
ಹೀಗಿದೆ ಹಿನ್ನೆಲೆ: ಮೈಸೂರು ಸಾಬೂನು ಕಾರ್ಖಾನೆಯಲ್ಲಿ ಸೋಪ್ ಬಾಯ್ಲರ್ ಹುದ್ದೆ ನಿರ್ವಹಿಸುತ್ತಿದ್ದ ಚನ್ನರಂಗಯ್ಯ ಅವರು ತಮ್ಮ ನಿವೃತ್ತಿ ಬಳಿಕ ಪುಣ್ಯಕೋಟಿ ಗೋಶಾಲೆ ನ್ಯಾಸ (ಟ್ರಸ್ಟ್) ಸ್ಥಾಪಿಸಿದ್ದರು. ಜತೆಗೆ, ತಮ್ಮ ನಿವೃತ್ತಿ ಬಳಿಕ ಸಿಕ್ಕ ಹಣದಲ್ಲಿ 3.4 ಲಕ್ಷ ವಿನಿಯೋಗಿಸಿ ಕೆರೆಕತ್ತಿಗನೂರಿನ ಸರ್ವೆ ನಂ. 19ರಲ್ಲಿರುವ ಪಿತ್ರಾರ್ಜಿತ ಆಸ್ತಿಯ 1 ಎಕರೆ ಪ್ರದೇಶದಲ್ಲಿದ್ದ ಕೆರೆಗೆ 2002ರಲ್ಲಿ ಸಿಮೆಂಟ್ ಕಟ್ಟೆ ನಿರ್ಮಿಸಿರುತ್ತಾರೆ.
ಸುಮಾರು 200ಕ್ಕೂ ಅಧಿಕ ಗೋವುಗಳಿಗೆ ಮತ್ತು ಇತರ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಲಿ ಎಂದು ಅವರು ಕೈಗೊಂಡ ಕಾರ್ಯಕ್ಕೆ ವಿಧಾನಪರಿಷತ್ ಸದಸ್ಯ ರಾಮಚಂದ್ರಗೌಡರು 2 ಲಕ್ಷ ಅನುದಾನ ಒದಗಿಸಿದ್ದರಿಂದ 2008ರಲ್ಲಿ ಕಟ್ಟೆಯನ್ನು ಮತ್ತೆ ನಾಲ್ಕಡಿ ಎತ್ತರಿಸಿದ್ದರು.ಬಳಿಕ ಆ ಸ್ಥಳದಲ್ಲಿ ಗೋವುಗಳಿಗಾಗಿ ಶೆಡ್ ನಿರ್ಮಿಸಲು ನೆರವು ಕೋರಿದ್ದರಿಂದ ರಾಜ್ಯಸಭೆ ಸದಸ್ಯ ವೆಂಕಯ್ಯನಾಯ್ಡು ಅವರು 2008ರ ಆ. 27ರಂದು ಹಾಗೂ ಆಗ ವಿಧಾನಪರಿಷತ್ ಸದಸ್ಯೆಯಾಗಿದ್ದ ಶೋಭಾ ಕರಂದ್ಲಾಜೆ ಅವರು 2008ರ ಜ. 2ರಂದು ತಲಾ 2 ಲಕ್ಷ ಅನುದಾನ ಘೋಷಿಸಿದ್ದರು.ಅದರಲ್ಲಿ ವೆಂಕಯ್ಯ ನಾಯ್ಡು ಅವರು ನೀಡಿದ್ದ ಅನುದಾನದ ಮೊತ್ತ 2009ರ ಡಿ. 8ರಂದು ಬೆಂ.ಗ್ರಾ. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಮಂಜೂರಾಗಿದೆ. ಮತ್ತೊಂದೆಡೆ, ಶೋಭಾ ಕರಂದ್ಲಾಜೆ ಅವರು ತಮ್ಮ ಕ್ಷೇತ್ರಾಭಿವೃದ್ಧಿಯಿಂದ ನೀಡಿದ್ದ ಅನುದಾನ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಿಂದ 2 ಲಕ್ಷ ಮೊತ್ತದ ಡಿಡಿ 2008ರ ಫೆ.15ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾಯಿಸಲ್ಪಟ್ಟಿದೆ.ಆದರೆ, ಸರ್ಕಾರದಿಂದ ನೀಡಲಾದ ಒಟ್ಟು 4 ಲಕ್ಷದ ಈ ಮೊತ್ತಕ್ಕಾಗಿ ತಾವು ಕಳೆದ 4 ವರ್ಷಗಳಿಂದ ಅಧಿಕಾರಿಗಳ ಬಳಿಗೆ ಅಲೆದಾಡುತ್ತಿದ್ದರೂ ಅವರು ಸತಾಯಿಸುತ್ತಿರುವುದಾಗಿ ಚನ್ನರಂಗಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಬೆಂ.ಗ್ರಾ. ಜಿಲ್ಲಾಧಿಕಾರಿ, ನೆಲಮಂಗಲ ತಹಶೀಲ್ದಾರ್ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ನೆಲಮಂಗಲ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಅವರಿಗೆ ಪತ್ರ ಬರೆದಿದ್ದರೂ ಅದಕ್ಕೆ ಪ್ರತಿಕ್ರಿಯೆಯೂ ಬಂದಿಲ್ಲ.
ಜತೆಗೆ, ವಿವಿಧ ವಿಭಾಗದ ಅಧಿಕಾರಿಗಳು ಹಣ ಬಿಡುಗಡೆಗಾಗಿ ಒಟ್ಟು 50 ಸಾವಿರಕ್ಕೂ ಅಧಿಕ ಲಂಚಕ್ಕೂ ಬೇಡಿಕೆ ಇರಿಸಿದ್ದಾರೆ. ಲಂಚ ನೀಡದಿದ್ದಲ್ಲಿ ನೀವು ಎಷ್ಟು ಅಲೆದರೂ ಅಷ್ಟೇ ಎಂಬ ರೀತಿಯಲ್ಲೂ ಅಧಿಕಾರಿಗಳು ವರ್ತಿಸಿದ್ದಾರೆ ಎಂಬುದು ಚನ್ನರಂಗಯ್ಯ ಆರೋಪ.
ಪ್ರಕರಣ ಬೆಳಕಿಗೆ ಬರುವುದರಿಂದಲಾದರೂ ತಮಗೆ ನ್ಯಾಯ ಸಿಗಬಹುದೇ ಎಂಬುದು ಚನ್ನರಂಗಯ್ಯ ಪ್ರಶ್ನೆ.