ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆರೈಕೆ ಸೇವೆ ಪ್ರಾರಂಭ
ಕ.ಪ್ರ. ವಾರ್ತೆ ್ಣ ರಾಮನಗರ ್ಣ ಮಾ.13
ರಾಮನಗರ: ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆರೈಕೆ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಮುಖ್ಯ ಕ್ಯಾನ್ಸರ್ ತಜ್ಞೆ ಡಾ.ಎಸ್. ನಿರ್ಮಲಾ ಹೇಳಿದರು.
ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬೆಂಗಳೂರು ನಗರಕ್ಕೆ ಹೋಗಬೇಕಾಗಿತ್ತು. ಇದನ್ನು ಮನಗಂಡ ಆಡಳಿತ ಮಂಡಳಿ ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ನಗರದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಆರಂಭಿಸಿದೆ ಎಂದರು.
ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯು ಕ್ಯಾನ್ಸರ್ ಗುಣಪಡಿಸುವ ಕೆಲವು ಆಸ್ಪತ್ರೆಗಳ ಪೈಕಿ ಮುಂಚೂಣಿಯಲ್ಲಿದೆ. ಈ ರೋಗಕ್ಕೆ ಅಗತ್ಯವಾಗಿರುವ ಸಮಗ್ರ ಚಿಕಿತ್ಸೆಯನ್ನು ನೀಡುತ್ತಿದೆ. ಚಿಕಿತ್ಸೆಯ ವಿಧಾನಗಳಾದ ವಿಕಿರಣ ಚಿಕಿತ್ಸೆ, ಕಿಮೋಥರಪಿ ಹಾಗೂ ಬೋನ್ ಮ್ಯಾರೊ ಟ್ರ್ಯಾನ್ಸ್ಪ್ಲಾಂಟೇಷನ್, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಹಸ್ತಕ್ಷೇಪ ಕ್ಯಾನ್ಸರ್ ಶಾಸ್ತ್ರ, ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆ, ಪ್ಯಾಲಿಯೇಟಿವ್ ಕೇರ್ ಮತ್ತು ಪುನರ್ ವಸತಿ ಸೇರಿದಂತೆ ಇತರ ಎಲ್ಲಾ ಚಿಕಿತ್ಸೆಗಳು ಒಂದೇ ಸೂರಿನಡಿ ಲಭ್ಯವಿರುತ್ತವೆ ಎಂದು ತಿಳಿಸಿದರು.
ಬಹುಪಾಲು ಮಹಿಳೆಯರು ಗರ್ಭಕೋಶ ಮತ್ತು ಸ್ತನದ ಕ್ಯಾನ್ಸರ್ಗೆ ಒಳಗಾದರೆ, ಪುರುಷರು ತಂಬಾಕು, ಹೊಗೆಸೊಪ್ಪು ಸೇವನೆಯಿಂದ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ.
40 ರಿಂದ 60 ವರ್ಷ ವಯೋವುತಿಯವರೇ ಹೆಚ್ಚಾಗಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇಕಡಾ 70ರಷ್ಟು ಮಂದಿ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಜನರು ತಂಬಾಕು ಉತ್ಪನ್ನಗಳಿಂದ ದೂರವಿದ್ದರೆ ಕ್ಯಾನ್ಸರ್ನಿಂದಲೂ ದೂರವಿರಬಹುದು ಎಂದರು.
ದೇಶದಲ್ಲಿ ಪ್ರತಿ ವರ್ಷ 10ರಿಂದ 12 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಕಾಯಿಲೆ ಜೀವನ ಶೈಲಿಗೆ ಸಂಬಂಧಿಸಿದ್ದಾಗಿದ್ದು, ಪಾಶ್ಚಿಮಾತ್ಯ ಜೀವನ ಶೈಲಿಯ ಅಳವಡಿಕೆಯಿಂದಾಗಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಡಾ.ಆರ್.ಎಲ್. ಮಂಜುನಾಥ್ ತಿಳಿಸಿದರು.
ತಪ್ಪು ಕಲ್ಪನೆ: ಕ್ಯಾನ್ಸರ್ ವಾಸಿಯಾಗದ ಕಾಯಿಲೆ ಎಂಬುದು ತಪ್ಪು ಕಲ್ಪನೆ. ಪ್ರಥಮ ಹಂತದಲ್ಲಿಯೇ ಅದನ್ನು ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಮನಗರ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ವೆಂಕಟರಾಮ್, ವ್ಯವಸ್ಥಾಪಕಿ ಸಂಧ್ಯಾ ಪ್ರಸಾದ್ ಉಪಸ್ಥಿತರಿದ್ದರು.