ಮಾರಣಾಂತಿಕ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ
ಕ.ಪ್ರ. ವಾರ್ತೆ ್ಣ ರಾಮನಗರ ್ಣ ಮಾ.13
ದಲಿತ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವವರವನ್ನು ಬಂಧಿಸದೆ, ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಹಾರೋಹಳ್ಳಿ ಪೊಲೀಸ್ ಠಾಣಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ದಲಿತಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಯಲಚವಾಡಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ರಾಜು ಎಂಬ ವ್ಯಕ್ತಿಯ ಮೇಲೆ ಮಾ.4ರಂದು ಇದೇ ಗ್ರಾಮದ ಸವರ್ಣೀಯರಾದ ಸುರೇಶ್, ಪರಮೇಶ್, ಜಯಮ್ಮ, ಗೋವಿಂದ, ಭದ್ರಗಿರಿ, ನಾಗ ಎಂಬುವರು ಕಬ್ಬಿಣದ ರಾಡು, ದೊಣ್ಣೆ ಹಾಗೂ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಹಲ್ಲೆಗೊಳಗಾಗಿ ರಸ್ತೆಯಲ್ಲಿ ಬಿದ್ದಿದ್ದ ರಾಜುನನ್ನು ಸಹೋದರ ಕನಕಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಆಸ್ಪತ್ರೆ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡಿರುವ ವೈದ್ಯರು ಈತ ಶಾಶ್ವತ ಅಂಗವಿಕಲನಾಗುವ ಸಂಭವವಿದೆ ಎಂದು ತಿಳಿಸಿದ್ದಾರೆ ಎಂದರು.
ಹಲ್ಲೆ ನಡೆಸಿರುವವರ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಇದನ್ನು ಕೇಳಲು ಹೋದ ಹಲ್ಲೆಗೊಳಗಾದ ರಾಜುವಿನ ಸಂಬಂಧಿಕರಿಗೆ ಕಳ್ಳತನದ ದೂರು ದಾಖಲಿಸುವುದಾಗಿ ಪೊಲೀಸರು ಬೆದರಿಸಿದ್ದಾರೆ. ಇಂತಹ ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತುಪಡಿಸಬೇಕು ಎಂದರು. ದಲಿತ ಸಮುದಾಯದ ಮೇಲೆ ದೌರ್ಜನ್ಯ ನಡೆದಿರುವ ಸ್ಥಳಕ್ಕೆ ಕೂಡಲೇ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಲ್ಲೆಗೊಳಗಾದ ವ್ಯಕ್ತಿಯ ಕುಟುಂಬಕ್ಕೆ ಧೈರ್ಯ ಹೇಳಿ, ಪರಿಹಾರ ನೀಡಬೇಕು. ಆ ಮೂಲಕ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಗೋವಿಂದಯ್ಯ, ಗೋವಿಂದರಾಜು, ಸುಂದರೇಶ್, ಅಂಕಪ್ಪ, ಬೋರಯ್ಯ, ಶ್ರೀನಿವಾಸ, ನವೀನ್, ಜಗದೀಶ್, ಹರೀಶ್, ಪ್ರಕಾಶ್, ಕಾಂತರಾಜ್ ಮತ್ತಿತರರು ಪಾಲ್ಗೊಂಡಿದ್ದರು.