ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾವಿನ ಮರಗಳಿಗೆ ಹೆಚ್ಚಿದ ಕೀಟಬಾಧೆಯ ಹಾವಳಿ

Rashmi Kasaragodu
Updated On : 14 Mar 2013, 12:31 pm

ಕ.ಪ್ರ. ವಾರ್ತೆ ್ಣ ರಾಮನಗರ ್ಣ ಮಾ.13
ಮಳೆ ಕೊರತೆ ಪರಿಣಾಮ ಮಾವು ಫಲಸಲು ಕುಸಿದಿದೆ. ಈ ಮಧ್ಯೆ, ಮಾವಿನ ಮರಗಳಿಗೆ ಕೀಟಬಾಧೆಯ ಹಾವಳಿ ಹೆಚ್ಚಿದ್ದು, ರೈತರು ಎಚ್ಚರ ವಹಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಬಿ. ಕೃಷ್ಣ ಕರೆ ನೀಡಿದ್ದಾರೆ.
ತೋಟಗಾರಿಕೆ ಇಲಾಖೆ ಮತ್ತು ಭಾರತೀಯ ಸಂಶೋಧನಾ  ಸಂಸ್ಥೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆದ ಮಾವಿನ ಬೆಳೆಯಲ್ಲಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾವು ಉತ್ಪಾದನೆಯಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನ ಪಡೆದಿದೆ. ಲಾಭದಾಯಕವಾದ ಮಾವು ಬೆಳೆ ಈ ವರ್ಷ ಮಳೆ ಅಭಾವದಿಂದ ಕೈಕೊಟ್ಟಿದೆ. ಇದು ಸಾಲದೆನ್ನುವಂತೆ ಮರಗಳಿಗೆ ಕೀಟಬಾಧೆ ತಲೆದೋರಿರುವುದು ಆತಂಕಕಾರಿ ಸಂಗತಿ ಎಂದರು.  
ಹತೋಟಿ ಕ್ರಮ: ಮಾವಿನ ಮರಗಳನ್ನು ಕೀಟ ಬಾಧೆಗಳಿಂದ ತಡೆಯಲು ಫೆರಮನ್ ಟ್ರಾಪ್ಸ್‌ಗಳನ್ನು ಬಳಸುವುದು ಸೂಕ್ತವಾಗಿದೆ.  ಅಂತೆಯೇ ಅಪಾಯಕಾರಿ ಆಗಿರುವ ಕಾಂಡ ಕೊರೆಯುವ ಹುಳುವಿನಿಂದ ರಕ್ಷಣೆಗಾಗಿ ಹೀಲರ್ ಮತ್ತು ಸೀಲರ್ ಪುಡಿಯ ಬಳಕೆಯನ್ನು ಬಳಸಬೇಕು ಎಂದು ಕೃಷ್ಣ ಸಲಹೆ ನೀಡಿದರು.   
ಇದೇ ವೇಳೆ ಮಾವು ಬೆಳೆಗಾರರಿಗೆ ಹಣ್ಣಿನ ನೊಣದ ನಿಯಂತ್ರಣಕ್ಕೆ ಮೋಹಕ ಬಲೆಗಳನ್ನು ಮತ್ತು ಕಾಂಡ ಕೊರೆಯುವ ಹುಳುವಿನ ನಿಯಂತ್ರಣಕ್ಕೆ ಸೀಲರ್ ಅನ್ನು ಉಚಿತವಾಗಿ ನೀಡಲಾಯಿತು. ಇವುಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಲಾಯಿತು.
ಇಸ್ರೇಲ್ ಮಾದರಿ ಸೂಕ್ತ: ಪ್ರಕೃತಿ ವೈಪರೀತ್ಯದಿಂದ ರೈತರಿಗೆ ಕೃಷಿ ನಷ್ಟದಾಯಕವಾಗಿದೆ. ಈ ಹಂತದಲ್ಲಿ ತೋಟಗಾರಿಕೆ ಲಾಭದಾಯಕವಾಗಿದ್ದು, ರೈತನ ಕೈ ಹಿಡಿದಿದೆ. ಇಸ್ರೇಲ್ ಮಾದರಿಯಂತೆ ಪ್ರತಿ ಎಕರೆಗೆ 300 ಮಾವಿನ ಗಿಡಗಳನ್ನು ನೆಟ್ಟು, ರೈತರು ಅಧಿಕ ಲಾಭ ಪಡೆಯಬೇಕು ಎಂದು ಕೃಷ್ಣ ಕರೆ ನೀಡಿದರು.
ಮಾವು, ಸೀಬೆ, ಬಾಳೆ ಸಹಿತ ತೋಟಗಾರಿಕೆ ಬೆಳೆಗಳನ್ನು ಇಲಾಖೆ ಉತ್ತೇಜಿಸುತ್ತಿದೆ.
ಹನಿ ನೀರಾವರಿ ಅಳವಡಿಕೆಗೆ ಅಧಿಕ ಮೊತ್ತದ ಸಹಾಯಧನ ನೀಡಲಾಗುತ್ತಿದೆ. ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.  
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಲತಾ ವೆಂಕಟಪತಿ, ಸಹಾಯಕ ತೋಟಗಾರಿಕೆ ಅಧಿಕಾರಿ ಎಚ್.ಆರ್.ರಾಮಚಂದ್ರಯ್ಯ, ರಾಮಚಂದ್ರ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement