ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ
ಕ.ಪ್ರ. ವಾರ್ತೆ ರಾಮನಗರ ಮಾ.15
ತಾಲೂಕಿನ ಬಿಡದಿ ಬಳಿಯ ಕೋತಿ ಆಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್ಗೆ ಸೇರಿದ ಛತ್ರವನ್ನು ಕೆಡವಿ, ಜಾಗ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ಕೋತಿ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ವಾಹನಗಳ ಮೆರವಣಿಗೆ ಹೊರಟ ಪ್ರತಿಭಟನಾಕಾರರು ನಗರಕ್ಕೆ ಆಗಮಿಸಿದರು. ರೇಷ್ಮೆ ಮಾರುಕಟ್ಟೆಯಿಂದ ಪಾದಯಾತ್ರೆ ಮೂಲಕ ತೆರಳಿ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದರು. ಬಳಿಕ ಮನವಿ ಸಲ್ಲಿಸಲಾಯಿತು.
ಛತ್ರ ಉಳಿಸಲು ಒತ್ತಾಯ: ಟ್ರಸ್ಟ್ವತಿಯಿಂದ ದೇಗುಲ ಪಕ್ಕ ಛತ್ರ ನಿರ್ಮಿಸಿ, ನಿತ್ಯ ಅನ್ನದಾಸೋಹ ಮಾಡಲಾಗುತ್ತಿದೆ. ಬಡ ಕುಟುಂಬದವರ ಮದುವೆ ಸಮಾರಂಭಗಳಿಗೆ ಕಡಿಮೆ ದರದಲ್ಲಿ ಛತ್ರ ನೀಡಲಾಗುತ್ತಿದೆ. ಛತ್ರವನ್ನು ಯಾವ ಕಾರಣಕ್ಕೂ ನೆಲಸಮ ಮಾಡಕೂಟದು ಎಂದು ವೇದಿಕೆ ಅಧ್ಯಕ್ಷ ರಮೇಶಗೌಡ ಆಗ್ರಹಿಸಿದರು. ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ರೆಸಾರ್ಟ್ ನಿರ್ಮಿಸಿದ್ದಾರೆ. ಸಾಕಷ್ಟು ಮಂದಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಟ್ರಸ್ಟ್ ಜಾಗ ಸ್ವಾಧೀನಕ್ಕೆ ವಿಶೇಷ ಕಾಳಜಿ ತೋರುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಬ್ಯಾಟಪ್ಪ, ಕೆಪಿಸಿಸಿ ಸದಸ್ಯ ರಮೇಶ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಯೋಗೇಶ್, ರಂಜಿತ್ಗೌಡ, ಲಕ್ಷ್ಮಮ್ಮ, ಕಮಲಮ್ಮ ಹಾಗೂ ದೇಗುಲ ಟ್ರಸ್ಟ್ ಸದಸ್ಯರು, ಭಕ್ತರು ಭಾಗವಹಿಸಿದ್ದರು.