ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಚನ್ನಪಟ್ಟಣದಲ್ಲಿ ಮತಬೇಟೆಗೆ ಜಲ ಫಿರಂಗಿ

Rashmi Kasaragodu
Updated On : 16 Mar 2013, 12:15 pm

ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ರಾಮನಗರ ಮಾ.15
ಜಲಕ್ಷಾಮಕ್ಕೆ ತುತ್ತಾದ ಚನ್ನಪಟ್ಟಣ ಕ್ಷೇತ್ರದಲ್ಲಿ ಮತಬೇಟೆಗೆ ನೀರಾವರಿಯೇ ಬ್ರಹ್ಮಾಸ್ತ್ರವಾಗಿದೆ. ಚುನಾವಣಾ ಸಮರಾಭ್ಯಾಸನಿರತ ರಾಜಕಾರಣಿಗಳು ನೀರಾವರಿ ಕೊಡುಗೆಗಳ ಕುರಿತಾದ ಪ್ರಚಾರಕ್ಕೆ ಒತ್ತು ನೀಡಿದ್ದಾರೆ. ಈ ಸಂಬಂಧ ಭಿತ್ತಿಪತ್ರ ಮತ್ತು ಕರಪತ್ರಗಳು ಜನತೆಯನ್ನೇ ಗೊಂದಲಕ್ಕೆ ದೂಡಿವೆ.
ಕ್ಷೇತ್ರದಲ್ಲಿ ಆಧುನಿಕ ಭಗೀರಥ ಪಟ್ಟಕ್ಕಾಗಿ ಸ್ಪರ್ಧಾಕಾಂಕ್ಷಿ ರಾಜಕಾರಣಿಗಳ ನಡುವೆ ಭಾರಿ ಪೈಪೋಟಿ ನಡೆದಿದೆ. ಚನ್ನಪಟ್ಟಣ ತಾಲೂಕಿನ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ರಾಜಕಾರಣಿಗಳು ಹಾಗೂ ಪಕ್ಷವಾರು ಕೊಡುಗೆಗಳ ಪ್ರಮಾಣದ ವಿಷಯ ಚರ್ಚೆಯ ವಸ್ತುವಾಗಿದೆ.  
ತಾರಕಕ್ಕೇರಿದ ಪ್ರಚಾರ: ಭವಿಷ್ಯ ಹುಡುಕಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮತ್ತು ಚನ್ನಪಟ್ಟಣ ಕ್ಷೇತ್ರ ಬಿಜೆಪಿ ಘಟಕದ ನಡುವೆ ನೀರಾವರಿ ವಿಷಯವಾಗಿ ನಡೆಯುತ್ತಿರುವ ಪ್ರಚಾರದ ಸಮರ ತಾರಕಕ್ಕೇರಿದೆ. ತಾಲೂಕಿನಾದ್ಯಂತ ಭಿತ್ತಿಪತ್ರಗಳ ಪ್ರಚಾರ ಅಬ್ಬರ ಜೋರಾಗಿದೆ.
ಕಾಂಗ್ರೆಸ್ ಚಿಹ್ನೆ, ಪಕ್ಷದ ಮುಖಂಡರೊಟ್ಟಿಗೆ ಯೋಗೇಶ್ವರ್ ಭಾವಚಿತ್ರವಿರುವ ಭಿತ್ತಿಪತ್ರದಲ್ಲಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಜಲಸಮೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ ಎನ್ನುವ ಮನವಿ ಇದ್ದರೆ, ಬಿಜೆಪಿ ತನ್ನ ಭಿತ್ತಿಪತ್ರದಲ್ಲಿ ನೀರಾವರಿ ಸಾಧನೆಯನ್ನು ಬಿಂಬಿಸಿಕೊಂಡಿದೆ.
ಹಠಕ್ಕೆ ಬಿದ್ದ ಬಿಜೆಪಿ: ಚನ್ನಪಟ್ಟಣ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಅಂದು ವಾಗ್ದಾನ, ನಿನ್ನೆ ಅನುಷ್ಠಾನ, ಇಂದು ಪ್ರಗತಿ ಎನ್ನುವ ಸ್ಲೋಗನ್ ಮೂಲಕ ಕ್ಷೇತ್ರದ ನೀರಾವರಿ ಕೊಡುಗೆ ಬಿಜೆಪಿ ಸರ್ಕಾರದ್ದೆಂದು ಜನತೆಗೆ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಪಕ್ಷದ ತಾಲೂಕು ಅಧ್ಯಕ್ಷ ಆನಂದಸ್ವಾಮಿ ಮಾಡಿದ್ದಾರೆ.
ವಿಚಿತ್ರವೆಂದರೆ, ಎಲ್ಲೆಲ್ಲಿ ಯೋಗೇಶ್ವರ್ ಅವರ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆಯೋ ಅದರ ಪಕ್ಕದಲ್ಲೇ ಬಿಜೆಪಿಯ ಭಿತ್ತಿಪತ್ರ ತೆರೆ ಕಂಡಿದೆ. ಇದನ್ನು ಗಮನಿಸಿದರೆ, ಅಧಿಕಾರ ಅನುಭವಿಸಿ ಹೋದ ಯೋಗೇಶ್ವರ್
ಹಣಿಯಲು ಬಿಜೆಪಿ ಹಠಕ್ಕೆ ಬಿದ್ದಂತೆ ವರ್ತಿಸುತ್ತಿರುವುದು ಸ್ಪಷ್ಟವಾಗಿದೆ.
ಸಿಪಿವೈ ತಂತ್ರಗಾರಿಕೆ: ಆಪರೇಷನ್ ಕಮಲ ಕಾರ್ಯಾಚರಣೆಗೆ ಒಳಗಾಗಲು ಕ್ಷೇತ್ರದ ನೀರಾವರಿ ಕಾರಣವೆಂದಿದ್ದ ಯೋಗೇಶ್ವರ್ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮರಳಿದಾಗಲೂ ಅದೇ ಮಂತ್ರ ಜಪಿಸುತ್ತಿದ್ದಾರೆ. ಯಾರೇ ಅಧಿಕಾರದಲ್ಲಿರಲಿ ಕಣ್ವ ಏತ ನೀರಾವರಿ ಇನ್ನೊಂದು ವರ್ಷದಲ್ಲಿ ಪೂರ್ಣವಾಗುತ್ತದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಹೀಗಿರುವಾಗ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಪಕ್ಷವನ್ನೇ ಏಕೆ ಬೆಂಬಲಿಸಬೇಕೆನ್ನುವುದು ಪ್ರತಿಪಕ್ಷಗಳ ಪ್ರಶ್ನೆಯಾಗಿದೆ. ರು.198 ಕೋಟಿ ವೆಚ್ಚದ ಇಡೀ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಚನ್ನಪಟ್ಟಣದಲ್ಲಿ ಅಡಿಗಲ್ಲು ಹಾಕಿದ್ದು, ಭೂ ಸ್ವಾಧೀನಕ್ಕಾಗಿ ಅಧಿನಿಯಮ 4(1) ಪ್ರಕಾರ ಪ್ರಕಟಣೆ ಹೊರಡಿಸಿದ್ದೂ ಆಗಿದೆ.
ತನ್ಮಧ್ಯೆ, ಯೋಗೇಶ್ವರ್ ಯೋಜನೆ ವ್ಯಾಪ್ತಿಗೆ ಸೇರಿರುವ ಕೆರೆಗಳಿಗೆ ಪ್ರತ್ಯೇಕವಾಗಿ ಪೂಜೆ ಸಲ್ಲಿಸಿ ಪುನಃ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಶಾಸಕ ಮತ್ತು ಸಚಿವ ಸ್ಥಾನ ತ್ಯಜಿಸಿ, ಮಾಜಿ ಆದ ಬಳಿಕವೂ ಮುಂದುವರೆದ ಕಾರ್ಯಕ್ರಮಗಳ ವಿರುದ್ಧ ಪ್ರತಿಪಕ್ಷಗಳಿಂದ ಬಹಿರಂಗ ಟೀಕೆ ವ್ಯಕ್ತವಾಗಿದೆ.
ಭಾಷಣದ ಪ್ರಚಾರ: ನೀರಾವರಿ ಕೊಡುಗೆಗಳ ವಿಷಯದಲ್ಲಿ ತಮ್ಮ ಪಕ್ಷ ಮತ್ತು ಕುಟುಂಬದ ಪಾಲು ಏನೆನ್ನುವುದನ್ನು ತಿಳಿಸುವಲ್ಲಿ ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ ಕೂಡ ಹಿಂದೆ ಬಿದ್ದಿಲ್ಲ. ಯೋಗೇಶ್ವರ್, ಬಿಜೆಪಿ ರೀತಿ ಅವರಿನ್ನೂ ಭಿತ್ತಿಪತ್ರ ಪ್ರಯೋಗಕ್ಕೆ ಮುಂದಾಗಿಲ್ಲವಾದರೂ ಭಾಷಣಗಳಲ್ಲಿ ಮೇಲಿಂದ ಮೇಲೆ ಪ್ರಸ್ತಾಪಿಸುತ್ತಲೇ ಇದ್ದಾರೆ.
ಚನ್ನಪಟ್ಟಣ ತಾಲೂಕಿನ ಗಡಿಯಂಚಿನಲ್ಲಿ ಹರಿದು ಹೋಗುವ ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಇಗ್ಗಲೂರು ಜಲಾಶಯದ ನಿರ್ಮಾಣಕ್ಕೆ ತಮ್ಮ ಮಾವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾರಣ. ಅದಕ್ಕಾಗಿಯೇ ಸರ್ಕಾರ ಜಲಾಶಯಕ್ಕೆ ದೇವೇಗೌಡರ ಹೆಸರನ್ನಿಟ್ಟಿದೆ ಎಂದು ಪ್ರತಿಪಾದಿಸುತ್ತಿದ್ದಾರೆ.
ಗರಕಹಳ್ಳಿ ಏತ ನೀರಾವರಿ ಯೋಜನೆ ಮಂಜೂರಾತಿ ಕೂಡ ಜನತಾ ಪರಿವಾರದ ಸರ್ಕಾರವಿದ್ದಾಗ ನಡೆದಿದೆ.
ಈ ಯೋಜನೆ ಅನುಷ್ಠಾನವೂ ಮಾಜಿ ಸಚಿವ ಎಂ.ವರದೇಗೌಡ, ದೇವೇಗೌಡ, ಕುಮಾರಸ್ವಾಮಿ  ಅವರ ಶ್ರಮದ ಫಲ. ಹೀಗಾಗಿ ನೀರಾವರಿ ವಿಷಯದಲ್ಲಿ ತಮ್ಮ ಪಕ್ಷ ಮತ್ತು ಕುಟುಂಬದ್ದೇ ಅಧಿಕ ಪಾಲು ಎಂಬುದು ಅವರ ವಾದ.
ರಾಜಕಾರಣಕ್ಕೆ ಬಂಡವಾಳ: ಒಂದೂವರೆ ದಶಕದಿಂದ ಕಾಡುತ್ತಿರುವ ಮಳೆ ಕೊರತೆಯಿಂದಾಗಿ ಈ ಭಾಗದ ಜೀವನಾಡಿ ಕಣ್ವ ಬತ್ತಿ ಹೋಗಿದೆ. ನದಿ, ತೊರೆ, ಕೆರೆ, ಕಟ್ಟೆಗಳೆಲ್ಲಾ ಬರಿದಾಗಿವೆ. ಜಲ ಮೂಲಗಳೆಲ್ಲಾ ಬತ್ತಿ ಹೋಗಿರುವ ಪರಿಣಾಮ ಸಾವಿರ ಅಡಿಯಷ್ಟು ಕೊರೆದರೂ ನೀರು ಸಿಗುತ್ತಿಲ್ಲ. ಈ ಭೀಕರ ಸ್ಥಿತಿ ರಾಜಕಾರಣಿಗಳಿಗೆ ಬಂಡವಾಳವಾಗಿದೆ.
ಜನತಾ ಪರಿವಾರ, ಕಾಂಗ್ರೆಸ್, ಬಿಜೆಪಿ ಈ ಮೂರು ಪಕ್ಷಗಳಿಂದಲೂ ಕ್ಷೇತ್ರದ ನೀರಾವರಿಗೆ ಕೊಡುಗೆ ಇದ್ದೇ ಇದೆ. ಯಾರ ಪಾಲು ಎಷ್ಟೆನ್ನುವುದಕ್ಕಿಂತಲೂ ಆಯಾ ಕಾಲದ ಅಗತ್ಯತೆಗೆ ಅನುಗುಣವಾಗಿ ಯೋಜನೆಗಳಿಗೆ ಮಂಜೂರಾತಿ ದೊರೆತಿದೆ. ಕೊಡುಗೆ ಯಾರದಾದರೇನು ಬೆಂಗಾಡಾಗಿರುವ ಚನ್ನಪಟ್ಟಣಕ್ಕೆ ನೀರು ಹರಿದರೆ ಸಾಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement