ಮಾತೃಪಕ್ಷ ಜೆಡಿಎಸ್ ಸೇರುವ ತವಕದಲ್ಲಿ ಕೆ. ಶೇಷಾದ್ರಿ
ಕ.ಪ್ರ. ವಾರ್ತೆ ರಾಮನಗರ ಮಾ.15
ವಲಸೆ ಹಕ್ಕಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮರಳಿ ಗೂಡಿಗೆ ಸೇರಿದ ಬೆನ್ನಲ್ಲೇ ಬಿಜೆಪಿಯಿಂದ ಹೊರ ಹಾರಲು ಮತ್ತೊಂದು ಹಕ್ಕಿ ರೆಕ್ಕೆ ಬಿಚ್ಚಿದೆ. ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ ಬಿಜೆಪಿ ತ್ಯಜಿಸಲು ಮುಂದಾಗಿದ್ದು, ಮಾತೃಪಕ್ಷ ಜೆಡಿಎಸ್ ಸೇರುವ ತವಕದಲ್ಲಿದ್ದಾರೆ.
ಕುಮಾರಸ್ವಾಮಿ ಪರಮಾಪ್ತರೊಬ್ಬರು ಶೇಷಾದ್ರಿ ಅವರನ್ನು ಜೆಡಿಎಸ್ಗೆ ಸೇಪಡೆಗೊಳಿಸುವ ಸಂಬಂಧ ಮಧ್ಯಸ್ಥಿಕೆ ವಹಿಸಿದ್ದಾರೆ. ಪಕ್ಷ ಸೇರ್ಪಡೆ ವಿಷಯವಾಗಿ ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ ಜತೆಗೆ ಶೇಷಾದ್ರಿ ಶುಕ್ರವಾರ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಹೊರ ಹೋಗಿದ್ದರು: ಶೇಷಾದ್ರಿ ಕಳೆದ ಬಾರಿ ರಾಮನಗರ ನಗರಸಭೆಗೆ ಜೆಡಿಎಸ್ನಿಂದ ಆಯ್ಕೆಗೊಂಡು, ಅಧ್ಯಕ್ಷ ಗಾದಿ ಏರಿದ್ದರು. 2008ರ ವಿಧಾನಸಭೆ ಚುನಾವಣೆ ಬಳಿಕ ಕುಮಾರಸ್ವಾಮಿ ಜತೆಗೆ ಮನಸ್ತಾಪ ಮೂಡಿತ್ತು.
ಪ್ರಸಕ್ತ ನಗರಸಭೆ ಚುನಾವಣೆಯಲ್ಲಿ ನಗರಸಭೆಯ 16 ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ, ಕಿಂಗ್ ಮೇಕರ್ ಆಗಬೇಕೆನ್ನುವ ಹಂಬಲ ತೊಟ್ಟಿದ್ದರು. ನಿರೀಕ್ಷಿಸಿದಷ್ಟು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲಿಲ್ಲ. ಆದರೆ, ಅಂದುಕೊಂಡಂತೆ ನಗರಸಭೆಯಲ್ಲಿ ನಿರ್ಣಾಯಕ ಎನಿಸಿದ್ದಾರೆ. ಜೆಡಿಎಸ್ ತ್ಯಜಿಸಿದ ಬಳಿಕ ಶೇಷಾದ್ರಿ ಅವರು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಾಕಷ್ಟು ಹರಿಹಾಯ್ದಿದ್ದರು.
ಆಪರೇಷನ್ ಕಾರ್ಯಾಚರಣೆ: ರಾಮನಗರ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ನೀರು ಕುಡಿಸಿದ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಆದರೆ, ಅಧಿಕಾರ ಚುಕ್ಕಾಣಿ ಕೈವಶ ಮಾಡಿಕೊಳ್ಳಲು ಈಗ ಸ್ವತಃ ಕಾಂಗ್ರೆಸ್ ನಾಯಕರು ಸಾಕಷ್ಟು ನೀರು ಕುಡಿಯುವಂತಾಗಿದೆ. ಪರಿಸ್ಥಿತಿ ಲಾಭಕ್ಕೆ ಶೇಷಾದ್ರಿ ಸಹಿತ ಬಾಹ್ಯ ಶಕ್ತಿಗಳ ಪ್ರಯತ್ನ ಮುಂದುವರೆದಿದೆ.
ವರಿಷ್ಠರ ಚುನಾವಣೆಯಲ್ಲಿ ಏಕೈಕ ಪಕ್ಷೇತರ, ಬಿಜೆಪಿಯ ಇಬ್ಬರು ಸದಸ್ಯರು ಜೆಡಿಎಸ್ ಬೆಂಬಲಿಸಿದಲ್ಲಿ ಫಲಿತಾಂಶ ನಿರ್ಧರಿಸಲು ಲಾಟರಿ ಮೊರೆ ಹೋಗುವ ಸ್ಥಿತಿ ಎದುರಾಗುತ್ತದೆ. 3 ಸದಸ್ಯರನ್ನು ತಮ್ಮೊಟ್ಟಿಗೆ ಕರೆತಂದು, ಜೆಡಿಎಸ್ಗೆ ಮರಳಿ ನಗರಸಭೆ ಆಡಳಿತ ಕೊಡಿಸುವುದಾಗಿ ಶೇಷಾದ್ರಿ ಭರವಸೆಯಿತ್ತಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಶೇಷಾದ್ರಿ 3-4ಮಂದಿ ಕಾಂಗ್ರೆಸ್ ಸದಸ್ಯರೊಟ್ಟಿಗೆ ಸತತ ಸಂಪರ್ಕ ಸಾಧಿಸಿದ್ದಾರೆ. ಇದರ ಸುಳಿವನ್ನರಿತ ಮರಿದೇವರು ಸಹಿತ ಕಾಂಗ್ರೆಸ್ ಮುಖಂಡರು ಎಚ್ಚೆತ್ತುಕೊಂಡಿದ್ದಾರೆ.
ಆಯ್ಕೆಯಾಗಿರುವ ಪುರಪಿತೃಗಳ ಸಭೆ ನಡೆಸಿರುವ ಕಾಂಗ್ರೆಸ್ ಮುಖಂಡರು ಶೀಘ್ರವೇ ಪ್ರವಾಸಕ್ಕೆ ಅಟ್ಟುವ ಚಿಂತನೆಯಲ್ಲಿದ್ದಾರೆ