ರೈತರ ಮೇಲೆ ಸುಳ್ಳು ಕೇಸು ದಾಖಲಿಗೆ ವಿರೋಧ
ಮಾಗಡಿ: ರೈತರ ಮೇಲೆ ಸುಳ್ಳು ಕೇಸು ದಾಖಲು ಮಾಡಿರುವುದನ್ನು ಕೂಡಲೆ ವಾಪಸು ಪಡೆಯಬೇಕು ಎಂದು ಆಗ್ರಹಿಸಿ ಅರಣ್ಯ ಇಲಾಖೆ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗು ಜಿಲ್ಲಾ ಮತ್ತು ತಾಲೂಕು ಸಮಿತಿ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಧರಣೆ ನಡೆಸಿದರು.
ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ ಎಂದು ರೈತರ ಮೇಲೆ ದೌರ್ಜನ್ಯ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸುಳ್ಳು ಕೇಸು ದಾಖಲಿಸಿದ್ದಾರೆ. ಕೂಡಲೆ ಸುಳ್ಳು ಕೇಸು ವಾಪಸು ಪಡೆಯಬೇಕು. ದೌರ್ಜನ್ಯ ನಡೆಸಿರುವ ಅರಣ್ಯಾಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಶಿಸ್ತಿ ಕ್ರಮ ಜರುಗಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸದಂತೆ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು. ಅನ್ನದಾತ ರೈತರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಕಾಡಾನೆ ಹಾವಳಿಯಿಂದ ರೈತರ ಬೆಳೆಗಳು ನಾಶವಾಗಿದ್ದು, ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರು ರು. ಪರಿಹಾರ ಧನ ನೀಡಬೇಕು. ಕಾಡಾನೆ ಹಾಗು ಕಾಡು ಪ್ರಾಣಿಗಳನ್ನು ರೈತರ ತೋಟ, ಹೊಲ ಗದ್ದೆಗಳಿಗೆ ಬಾರದಂತೆ ತಡೆಗಟ್ಟಬೇಕು ಎಂದು ಪ್ರತಿಭಟನೆ ವೇಳೆ ಆಗ್ರಹಿಸಿದರು.
ರೈತ ವಿರೋಧಿ ನೀತಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಬಡ ರೈತರ ಭೂಮಿಯನ್ನು ಕಿತ್ತುಕೊಂಡು ವಿದೇಶಿ ಕಂಪನಿಗಳಿಗೆ ನೀಡಲು ಮುಂದಾಗಿರುವ ಸರ್ಕಾರ ಕ್ರಮ ವನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.