ವಿವಾಹಿತನ ಕಾಟಕ್ಕೆ ವಿದ್ಯಾರ್ಥಿನಿ ಬಲಿ
ಕ.ಪ್ರ. ವಾರ್ತೆ ಚಿಕ್ಕಬಳ್ಳಾಪುರ ಮಾ.15-
ಪ್ರೀತಿ ಮಾಡು ಎಂದು ಪದೇ ಪದೇ ಪೀಡಿಸುತ್ತಿದ್ದ ವಿವಾಹಿತನೊಬ್ಬನ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದ ಪರಿಣಾಮ, ಶೇ.70 ರಷ್ಟು ದೇಹ ಸುಟ್ಟು ತೀವ್ರವಾಗಿ ಗಾಯಗೊಂಡಿದ್ದು, ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿ ನೋವನ್ನು ಅನುಭವಿಸಿ ಸಾವನ್ನಪ್ಪಿದ್ದಾಳೆ. ಇತ್ತ ಚೆನ್ನಾಗಿ ಓದಿ ಮುಂದೆ ಉನ್ನತ ಹುದ್ದೆಯನ್ನು ಪಡೆಯಲಿ ಎಂಬ ಕನಸನ್ನು ಕಟ್ಟಿಕೊಂಡಿದ್ದ ವಿದ್ಯಾರ್ಥಿನಿಯ ಪೋಷಕರು ತಮ್ಮ ಮಗಳ ಸಾವಿನಿಂದ ಕಂಗಲಾಗಿದ್ದಾರೆ.
ತಾಲೂಕಿನ ಹೊನ್ನೇಹಳ್ಳಿ ಗ್ರಾಮದ ರಾಮಚಂದ್ರಪ್ಪನ ಪುತ್ರಿ ನಂದಿನಿ (17) ವಿವಾಹಿತನೊಬ್ಬನ ಕಿರುಕುಳಕ್ಕೆ ಮೃತಪಟ್ಟ ದುರ್ದೈವಿ.
ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ನಂದಿನಿಗೆ ಅದೇ ಗ್ರಾಮದ ಆನಂದ್ ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಮನೆಯಿಂದ ಕಾಲೇಜಿಗೆ ಹೋಗುವ ಮತ್ತು ಕಾಲೇಜಿನಿಂದ ಮನೆಗೆ ಬರುವ ಸಮಯದಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದ ಆನಂದ್ ಚುಡಾಯಿಸುತ್ತಿದ್ದ. ತಮ್ಮ ಮನೆಯ ಪಕ್ಕದಲ್ಲೇ ನಂದಿನಿ ಮನೆ ಇರುವುದರಿಂದ ಮತ್ತಷ್ಟು ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಆಕೆಯ ಪೋಷಕರು ಬುದ್ಧಿವಾದ ಹೇಳಿದ್ದರು. ಅಲ್ಲದೇ ಊರಿನ ಮುಖಂಡರು ವಿವಾಹಿತನಿಗೆ ಎಚ್ಚರಿಕೆ ನೀಡಿದ್ದರು. ಆದರೂ ಆತ ಕುಚೇಷ್ಟೆ ಬಿಟ್ಟಿರಲಿಲ್ಲ. ಬದಲಿಗೆ ನಂದಿನಿಯನ್ನು ಮತ್ತಷ್ಟು ಬೆದರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆನಂದ್ ವಿರುದ್ಧ ಕಳೆದ ಮೂರು ತಿಂಗಳ ಹಿಂದೆ ಗ್ರಾಮಾಂತರ ಠಾಣೆಯ ಪೊಲೀಸರಿಗೆ ದೂರು ನಂದಿನಿ ಪೋಷಕರು ನೀಡಿದ್ದರು. ಈ ನಡುವೆ ಜಾಮೀನು ಪಡೆದುಕೊಂಡು ಬಂದ ಆನಂದ್, ಮತ್ತೆ ಹಳೆ ಚಾಳಿ ಮುಂದುವರೆಸಿದ.
ಇದರಿಂದ ಬೇಸತ್ತ ನಂದಿನಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು. ಆಗ ಶೇ.70 ರಷ್ಟು ದೇಹ ಸುಟ್ಟು ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು.
ಮೂರು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಕೊನೆಗೆ ಶುಕ್ರವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಗ್ರಾಮಸ್ಥರ ಆಕ್ರೋಶ: ನಿನಗೆ ಮದುವೆಯಾಗಿದೆ. ಇದೆಲ್ಲಾ ಮಾಡುವುದು ಸರಿಯಲ್ಲ ಎಂದು ಎಷ್ಟೇ ಬುದ್ದಿವಾದ ಹೇಳಿದರೂ ತನ್ನ ಚಾಳಿ ಬಿಡದೆ ನಂದಿನಿಯ ಸಾವಿಗೆ ಕಾರಣನಾದ ಆರೋಪಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಆರೋಪಿಗೆ ಈ ಸಂಬಂಧ ತಕ್ಕ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.