ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕೃಷಿಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ

Rashmi Kasaragodu
Updated On : 17 Mar 2013, 12:21 pm

ಕ.ಪ್ರ. ವಾರ್ತೆ   ರಾಮನಗರ   ಮಾ.16
ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಅಧಿಕ ಇಳುವರಿ, ಲಾಭ ಪಡೆದುಕೊಳ್ಳುವಂತೆ ರೈತರಿಗೆ ಶಾಸಕ ಎಚ್.ಸಿ. ಬಾಲಕೃಷ್ಣ ಕರೆ ನೀಡಿದರು.
ತಾಲೂಕಿನ ಬಿಡದಿ ಹೋಬಳಿ ಹೊಸೂರು ಗ್ರಾಮದಲ್ಲಿ ರಾಜಣ್ಣರವರ ತೋಟದಲ್ಲಿ ಶನಿವಾರ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಬಾಳೆ ಮಾರಾಟ ಮತ್ತು ಕೊಯ್ಲೋತ್ತರ ತಂತ್ರಜ್ಞಾನದ ಕುರಿತು ವಿಚಾರ ಸಂಕಿರಣ, ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತಕ್ಕೆ ಹೋಲಿಸಿದರೆ ಇಸ್ರೆಲ್ ದೇಶದಲ್ಲಿ ಮಳೆ ಪ್ರಮಾಣ ತೀರಾ ಕಡಿಮೆ ಇದೆ, ಆದರೆ, ಅಲ್ಲಿನ ರೈತರು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಮತ್ತು ತೋಟಗಾರಿಕೆಯಲ್ಲಿ ನಮಗಿಂತ ಹೆಚ್ಚು  ಸಾಧಿಸಿದ್ದಾರೆ ಎಂದು ಹೇಳಿದರು.
ವಿಶೇಷವಾಗಿ ಮಾವು, ಬಾಳೆ ಬೇಸಾಯದಲ್ಲಿ ಇಸ್ರೇಲ್ ರೈತರು ನಮಗೆ ಮಾದರಿಯಾಗಬೇಕು. ಅವರ ಪದ್ಧತಿಯನ್ನು ಇಲ್ಲೂ ಅಳವಡಿಸಿಕೊಂಡಲ್ಲಿ ಕಡಿಮೆ ಪ್ರಮಾಣದ ನೀರಿನಲ್ಲೂ ಉತ್ತಮವಾದ ಬೇಸಾಯ ಕೈಗೊಳ್ಳಬಹುದು ಎಂದು ಅವರು ಸಲಹೆಯಿತ್ತರು.  
ರಫ್ತು ಪ್ರಮಾಣ ಹೆಚ್ಚಲಿ: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳು ಭಾರತದಿಂದಲೂ ವಿದೇಶಗಳಿಗೆ ರಫ್ತು ಆದಾಗ ಇಲ್ಲಿನ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ವೆಂಕಟೇಶ್ ಅಭಿಪ್ರಾಯಪಟ್ಟರು.
ಇಸ್ರೆಲ್ ದೇಶದಲ್ಲಿ ತೋಟಗಾರಿಕೆ ಕ್ರಾಂತಿಯಾಗಿದೆ. ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯುತ್ತಿದ್ಧಾರೆ. ವಿದೇಶಗಳಿಗೆ ತಮ್ಮ ಉತ್ಪನ್ನಗಳನ್ನು ಅಧಿಕ ಪ್ರಮಾಣದಲ್ಲಿ ರಪ್ತು ಮಾಡುತ್ತಿದ್ದಾರೆ. ಭಾರತದಲ್ಲೂ ರೈತರು ವೈಜ್ಞಾನಿಕವಾಗಿ ನಿರೂಪಿತವಾಗಿರುವ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ತೆಗೆಯಬೇಕು ಎಂದರು.
ಸಂಶೋಧನೆಗೆ ಒತ್ತು ಅಗತ್ಯ: ವಿಜ್ಞಾನ ಮತ್ತು ತಂತ್ರಜ್ಞಾನದ ವೇಗಕ್ಕೆ ನಾವೂ ಹೊಂದಿಕೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆಗೆ ಒತ್ತು ನೀಡವುದು ಅಗತ್ಯ ಎಂದು ವೆಂಕಟೇಶ್ ಹೇಳಿದರು.
ರೈತರು ಕೃಷಿ ಮತ್ತು ತೋಟಗಾರಿಕೆ ಇಲಾಖಾಧಿಕಾರಿಗಳ ಜತೆ ನಿರಂತರ ಸಂಪರ್ಕವಿರಿಸಿಕೊಂಡು, ಹೊಸ ಆವಿಷ್ಕಾರ ಮತ್ತು ಪದ್ಧತಿಗಳ ಬಗ್ಗೆ ಮಾಹಿತಿ ಪಡೆದು, ಕಾಲ ಕಾಲಕ್ಕೆ ಅವನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಹನಿ ನೀರಾವರಿ ಸೂಕ್ತ: ಮಳೆ ಪ್ರಮಾಣ ಹಾಗೂ ಅಂತರ್ಜಲ ಮಟ್ಟ ಕುಸಿತದಿಂದ ನೀರಿನ ಸಮಸ್ಯೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಹನಿ ನೀರಾವರಿ ಅಳವಡಿಕೆಗೆ ಮುಂದಾಗುವುದು ಸೂಕ್ತ. ಇದಕ್ಕಾಗಿ ಸರ್ಕಾರದಿಂದ ಶೇಕಡ 80ರಷ್ಟು ಸಬ್ಸಿಡಿ ಸೌಲಭ್ಯವಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವೆಂಕಟೇಶ್ ತಿಳಿಸಿದರು.   
ಸುಧಾರಿತ ಬೇಸಾಯ: ಇಸ್ರೆಲ್ ಮಾದರಿಯ ಬಾಳೆ ತೋಟವನ್ನು ಅಭಿವೃದ್ಧಿ ಪಡಿಸಲು ಹಲವಾರು ರೈತರು ಮುಂದೆ ಬಂದಿದ್ದಾರೆ. ಈ ಪೈಕಿ ರಾಜಣ್ಣ ಸಹ ಒಬ್ಬರಾಗಿದ್ದು, ಈ ಮೊದಲು ಎಕರೆಗೆ 900 ಬಾಳೆ ಗಿಡ ಬೆಳೆಯುತ್ತಿದ್ದ ಜಾಗದಲ್ಲಿ 1400 ಗಿಡಗಳನ್ನು ಬೆಳೆಸಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಬಿ.ಕೃಷ್ಣ ವಿವರಿಸಿದರು.
ಇದೇ ಸಂದರ್ಭದಲ್ಲಿ ಬಾಳೆ ಬೆಳೆಯಲು ಸುಧಾರಿತ ಪದ್ಧತಿಯನ್ನು ಅಳವಡಿಸಿಕೊಂಡಿರುವ ರೈತರಿಗೆ ಸಹಾಯಧನ ಚೆಕ್ ವಿತರಿಸಲಾಯಿತು. ಕಂಚುಗಾರನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಬಾಳೆ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಸಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಉಪ ಕಾರ್ಯದರ್ಶಿ ಡಾ.ಸಿ.ಸಿದ್ದರಾಮಯ್ಯ, ಜಿ.ಪಂ. ಸದಸ್ಯೆ ಶಾಂತಮ್ಮ, ರೈತ ಮುಖಂಡ ರಾಜಣ್ಣ, ತೋಟಗಾರಿಕೆ ವಿಜ್ಞಾನಿ ಮುರುಳಿ ಮೋಹನ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಲತಾ ವೆಂಕಟಪತಿ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement