ಜೆಡಿಎಸ್ಗೆ ಮಾನ ಮರ್ಯಾದೆ ಇಲ್ಲ: ಕಾಂಗ್ರೆಸ್ ಆಕ್ರೋಶ
ರಾಮನಗರ: ಜನಾದೇಶಕ್ಕೆ ವಿರುದ್ಧವಾಗಿ ರಾಮನಗರ ನಗರಸಭೆ ಆಡಳಿತ ಹಿಡಿಯಲು ಒಳಸಂಚು ನಡೆಸುತ್ತಿರುವ ಜೆಡಿಎಸ್ ಮುಖಂಡರಿಗೆ ಮಾನ ಮರ್ಯಾದೆ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ ಟೀಕಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಗರಸಭೆ ಚುನಾವಣೆ ವಿಜೇತ ಮತ್ತು ಪರಾಜಿತ ಅಭ್ಯರ್ಥಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಪಕ್ಷದ ಸದಸ್ಯರನ್ನು ಸೆಳೆಯಲು ಜೆಡಿಎಸ್ ಮುಖಂಡರು ನಡೆಸುತ್ತಿರುವ ಪ್ರಯತ್ನ ಯಾವ ಕಾರಣಕ್ಕೂ ಫಲಿಸುವುದಿಲ್ಲ ಎಂದರು.
ಜೆಡಿಎಸ್ ತನ್ನ ಕುತಂತ್ರ ರಾಜಕಾರಣ ಮುಂದುವರೆಸಿದ್ದೇ ಆದಲ್ಲಿ ನಗರಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 17 ರಿಂದ 20ಕ್ಕೆ ಏರಿಕೆಯಾಗಲಿದೆ. ಅದು ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದರು.
ಕಾಂಗ್ರೆಸ್ ಪಕ್ಷದ ಪುರಪಿತೃಗಳಿಗೆ ಅಭಿನಂದನಾ ಸಮಾರಂಭ ಮಾ.19ರಂದು ನಡೆಯಲಿದೆ. ಅಂದು ಕೃಷ್ಣಸ್ಮೃತಿ ಕಲ್ಯಾಣ ಮಂಟಪದಿಂದ ಚನ್ನೇನಹಳ್ಳಿವರೆಗೆ ಅದ್ಧೂರಿ ಮೆರವಣಿಗೆ ನಡೆಸಲಾಗುವುದು ಎಂದು ಜಿಯಾವುಲ್ಲಾ ತಿಳಿಸಿದರು.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕಾಂಗ್ರೆಸ್ ಮುಖಂಡ ಮರಿದೇವರು ಮಾತನಾಡಿದರು. ತಮ್ಮ ನಿಷ್ಠೆ ಕಾಂಗ್ರೆಸ್ಗೆ ಅಚಲ ಎಂದು 22ನೇ ವಾರ್ಡ್ನ ಪಕ್ಷೇತರ ಸದಸ್ಯ ಮಹಮದ್ ರಫೀಕ್ ಸ್ಪಷ್ಟಪಡಿಸಿದರು. ಸಿ.ಎನ್.ಆರ್. ವೆಂಕಟೇಶ್, ಕಾಂತರಾಜ್ ಪಟೇಲ್, ಬಾಬು ಶೇಠ್ ಇತರರು ಭಾಗವಹಿಸಿದ್ದರು.