ದೇವಾಂಗ ಮಂಡಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಜಿ. ಶ್ರೀನಿವಾಸ್ ರಾಜಿನಾಮೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮಾ.16
ಇಲ್ಲಿನ ನಗರಸಭೆ ಚುನಾವಣೆಯಲ್ಲಿ ನೇಯ್ಗೆಬೀದಿ 14ನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರಿಂದ ಇಲ್ಲಿನ ದೇವಾಂಗಮಂಡಲಿ ಅಧ್ಯಕ್ಷ, ರಾಜಕಾರಣಿ ಎಂ.ಜಿ. ಶ್ರೀನಿವಾಸ್ ದೇವಾಂಗ ಮಂಡಲಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಚುನಾವಣೆ ಫಲಿತಾಂಶ ಪ್ರಕಟವಾದ ದಿನದಂದೇ ಮಂಡಲಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಪತ್ರ ರವಾನಿಸಿದ್ದಾರೆ ಎನ್ನಲಾಗಿದ್ದು, ದೇವಾಂಗ ಸಮುದಾಯದ ಜನರೇ ಹೆಚ್ಚಿರುವ 14ನೇ ವಾರ್ಡ್ನಲ್ಲಿ ಸತತ ಸೋಲು ಕಂಡಿರುವ ಹಿನ್ನಲೆಯಲ್ಲಿ ಮಂಡಲಿಯ ಅಧ್ಯಕ್ಷನಾಗಿ ಮುಂದುವರೆಯುವ ನೈತಿಕತೆ ನನಗಿಲ್ಲ. ಜನಾಂಗವನ್ನು ಸಂಘಟಿಸುವ ಹೊಣೆಗಾರಿಕೆ ನಿಭಾಯಿಸಲು ಚುನಾವಣೆಯಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ಸ್ಥಾನಕ್ಕೆ ಗೌರವ ಕೊಟ್ಟು ರಾಜಿನಾಮೆ ನೀಡಿದ್ದೇನೆ ಎಂದು ಅವರು ವಿವರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿನ್ನೆಡೆಗೆ ಪಕ್ಷ ತೆಗೆದುಕೊಂಡ ಕಟ್ಟುನಿಟ್ಟಿನ ನಿರ್ಧಾರ ಕೂಡ ಕಾರಣ. ಪಕ್ಷಾಂತರಿ 12 ಮಂದಿಗೆ ಟಿಕೆಟ್ ಕೊಡದೆ ಪಕ್ಷ ಇತರರಿಗೆ ಮಾದರಿಯಾಗಿದೆ. ಈ ಹಂತದಲ್ಲಿ ಪಕ್ಷದ ಹಿನ್ನಡೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡು ಮುಂದಿನ ಹಂತದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಲು ಆಸಕ್ತಿ ವಹಿಸಲಾಗುವುದು ಎಂದಿದ್ದಾರೆ.
ರಾಜಿನಾಮೆ ವಾಪಸ್ ಪಡೆಯಲಿ: ಮಂಡಲಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಎಂ.ಜಿ.ಶ್ರೀನಿವಾಸ್ ಕ್ರಮ ಸರಿಯಲ್ಲ. ನಗರಸಭೆ ಸದಸ್ಯ ಸ್ಥಾನ ಮತ್ತು ಮಂಡಲಿ ಅಧ್ಯಕ್ಷ ಸ್ಥಾನಗಳೆರಡರ ಕಾರ್ಯಸ್ವರೂಪ ತೀರಾ ಭಿನ್ನವಾಗಿರುವ ಹಿನ್ನೆಲೆಯಲ್ಲಿ ಎರಡಕ್ಕೂ ಯಾವ ವಿಧದ ಹೋಲಿಕೆಯೂ ಕಲ್ಪಿಸಬಾರದು. ಜನಾಂಗದ ಜನ ತಮ್ಮ ಮಂಡಲಿಯ ಅಧ್ಯಕ್ಷರಾಗಿರಬೇಕು, ಅವರು ಅದಕ್ಕೆ ಸಮರ್ಥರು ಎಂದು ಚುನಾಯಿಸಿದ್ದಾರೆ. ಜನ ವಹಿಸಿರುವ ಜವಾಬ್ದಾರಿಯನ್ನು ಅವರು ಪೂರ್ಣಕಾಲ ನಿಭಾಯಿಸಬೇಕು ಎಂದು ಲೇಖಕ ಡಾ.ಎ.ಓ.ಆವಲಮೂರ್ತಿ, ಗಾಯತ್ರಿಪೀಠ ಮಿತ್ರ ಬಳಗದ ಅಧ್ಯಕ್ಷ ಶಿವಾನಂದ್ ಹೇಳಿದ್ದಾರೆ.