ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೈಸರ್ಗಿಕ ಅಸಮತೋಲನಕ್ಕೆ ಧನದಾಹಿಗಳು ಕಾರಣ

Rashmi Kasaragodu
Updated On : 17 Mar 2013, 12:22 pm

ಕ.ಪ್ರ. ವಾರ್ತೆ   ರಾಮನಗರ   ಮಾ.16
ಈ ಜಿಲ್ಲೆಯಲ್ಲಿರುವ ಶಿಲೆಗಳು ಪ್ರಪಂಚದಲ್ಲೇ ಶ್ರೇಷ್ಠವಾದವು. ಅವುಗಳನ್ನು ಧನದಾಹಿಗಳು ಸ್ಫೋಟಕ ಬಳಸಿ ಪುಡಿ ಪುಡಿ ಮಾಡುತ್ತಾ ನೈಸರ್ಗಿಕ ಅಸಮತೋಲನಕ್ಕೆ ಕಾರಣರಾಗುತ್ತಿದ್ದಾರೆ ಎಂದು ನಿವೃತ್ತ ಅರಣ್ಯಾಧಿಕಾರಿ ಯಲ್ಲಪ್ಪರೆಡ್ಡಿ ಆರೋಪಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸಮರ್ಪಣಾ ಯುವ ಸ್ನೇಹ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಿಂದಾಗಿ  ಅತಿ ವಿರಳವೂ, ಶ್ರೇಷ್ಠವೂ ಆದ ಜೈವಿಕ ವ್ಯವಸ್ಥೆ ಸರ್ವನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಲೆ ಮಹದೇಶ್ವರ ಬೆಟ್ಟದಿಂದ ಬಳ್ಳಾರಿವರೆಗೆ ಗಣಿ ಸಂಪತ್ತಿನ ಲೂಟಿ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದಾಗಿ ಪ್ರಕೃತಿ ವಿಕೋಪ ಎದುರಾಗಿದೆ. ಮಳೆ ಪ್ರಮಾಣ ಕ್ಷೀಣಕ್ಕೂ ಮರಳು, ಕಲ್ಲು ಗಣಿಗಾರಿಕೆಯೇ ಮೂಲ ಕಾರಣ ಎಂದು ಅವರು ಆರೋಪಿಸಿದರು.  
ಭವಿಷ್ಯದ ಚಿಂತೆಯಿಲ್ಲ: ಪ್ರಾಕೃತಿಕ ಸಂಪತ್ತಿನ ಮೇಲೆ ದಾಳಿ ನಡೆಸುತ್ತಿರುವ ಮನುಷ್ಯನಿಗೆ ಮುಂದೆ ಏನಾಗಬಹುದೆಂಬ ಅರಿವಿಲ್ಲ. ನಮ್ಮ ಜೀವನಕ್ಕೆ ಅಗತ್ಯವಾದುದನ್ನು ಮಾತ್ರ ಬಳಸಿಕೊಳ್ಳಬೇಕು. ಇಂತಹ ಅಮೂಲ್ಯವಾದ ಸಂಪತ್ತನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಯುವಕರು ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡಬೇಕು ಎಂದು ಯಲ್ಲಪ್ಪರೆಡ್ಡಿ ಕರೆ ನೀಡಿದರು.
ರಕ್ತದಾನಕ್ಕೆ ಮುಂದಾಗಿ: ಮನುಷ್ಯ ರಕ್ತವನ್ನು ಕೃತಕವಾಗಿ ಉತ್ಪಾದಿಸುವ ತಂತ್ರಜ್ಞಾನವನ್ನು ಇನ್ನೂ ಕಂಡು ಹಿಡಿದಿಲ್ಲ. ರಕ್ತ ದಾನವು ಶ್ರೇಷ್ಠವಾದುದಾಗಿದ್ದು, ಇದರಿಂದ ಮತ್ತೊಬ್ಬರ ಜೀವ ಉಳಿಸಿದ ತಣಪ್ತಿ ನಮಗೆ ಸಿಗುತ್ತದೆ. ಪ್ರತಿ ಆರೋಗ್ಯವಂತ ವ್ಯಕ್ತಿಯೂ ಕೂಡ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದು ಕಾಂಗ್ರೆಸ್ ಮುಖಂಡ ಮರಿದೇವರು ತಿಳಿಸಿದರು.
ಬದ್ಧತೆ ದೂರಾಗಿದೆ: ಅಭಿವೃದ್ಧಿಯ ವೇಗವು ಸಾಮಾಜಿಕ ಜವಾಬ್ದಾರಿಯನ್ನು ಮರೆಯುವಂತೆ ಮಾಡಿದೆ. ಸಮಾಜದಿಂದ ಎಲ್ಲವನ್ನೂ ಪಡೆಯುವ ನಾವು ಪ್ರತಿಯಾಗಿ ಏನನ್ನೂ ನೀಡುವುದಿಲ್ಲ. ಯುವಕರು ಹೆಚ್ಚು ಹೆಚ್ಚಾಗಿ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅರಣ್ಯಾಧಿಕಾರಿ ಸುರೇಶ್ ತಿಳಿಸಿದರು.
228 ಯೂನಿಟ್ ರಕ್ತದಾನ: ರಕ್ತದಾನ ಶಿಬಿರದಲ್ಲಿ ಯುವಕರು ಅತ್ಯುತ್ಸಾಹದಿಂದ ಪಾಲ್ಗೊಂಡರು. ಸರತಿಯಲ್ಲಿ ನಿಂತು ರಕ್ತ ದಾನ ಮಾಡಿದರು. ಶಿಬಿರದಲ್ಲಿ 228 ಯೂನಿಟ್ ರಕ್ತವನ್ನು ದಾನಮಾಡಲಾಗಿದ್ದು, ಶೇಖರಣೆಯಾದ ರಕ್ತವನ್ನು  ವಿಕ್ಟೋರಿಯಾ ಆಸ್ಪತ್ರೆಯ ರಕ್ತನಿಧಿಗೆ ಕಳುಹಿಸಿಕೊಡಲಾಯಿತು.
 ಪರಿಸರವಾದಿ ಸಾಲುಮರದ ತಿಮ್ಮಕ್ಕ, ಪ್ರಗತಿಪರ ಉದ್ಯಮಿ ಕೆ.ಎಂ.ಶ್ರೀನಿವಾಸಮೂರ್ತಿ, ಪತ್ರಿಕೋದ್ಯಮಿ ಅ.ನಾ.ರಾವ್ ಜಾದವ್, ಸಾಹಿತಿ ನಾಗರಾಜ ವಸ್ತಾರೆ ಅವರನ್ನು ಸನ್ಮಾನಿಸಲಾಯಿತು. ಸಮರ್ಪಣಾ ಟ್ರಸ್ಟ್‌ನ ಅಧ್ಯಕ್ಷ ಎಸ್.ಸತೀಶ್, ಪದಾಧಿಕಾರಿಗಳಾದ ಶ್ರೀಕಂಠಮೂರ್ತಿ, ಕೆ.ರಘು, ಕಾಂತರಾಜ, ನರೇಂದ್ರ ಬಾಬು, ನಿರಂಜನ, ರೇಣುಕಾ ಪ್ರಸಾದ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement