ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾಗಡಿ ಪುರಸಭೆ ಚುನಾವಣೆ ಫಲಿತಾಂಶ ಪರಿಣಾಮ ಬೀರದು

Rashmi Kasaragodu
Updated On : 17 Mar 2013, 12:24 pm

ಕ.ಪ್ರ.ವಾರ್ತೆ, ರಾಮನಗರ ಮಾ.16 ಮಾಗಡಿ ಪುರಸಭೆ ಚುನಾವಣೆ ಫಲಿತಾಂಶವು ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದು. ಜೆಡಿಎಸ್ ತನ್ನ ವೈಫಲ್ಯವನ್ನು ಸರಿಪಡಿಸಿಕೊಂಡು, ವಿಧಾನಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಲಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ರಾಮನಗರ ತಾಲೂಕಿನ ಲಕ್ಷ್ಮೀಪುರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ರು.2.50 ಕೋಟಿ ವೆಚ್ಚದ ಸುವರ್ಣ ಗ್ರಾಮ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.  
ಕಾಂಗ್ರೆಸ್ ಮುಖಂಡರ ಒಗ್ಗಟ್ಟಿನ ಹೋರಾಟದಿಂದ ಆ ಪಕ್ಷ ಗೆಲವು ಸಾಧಿಸಿದೆ ಎನ್ನುವ ತರ್ಕವನ್ನು ತಾವು ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಅಧಿಕಾರದಲ್ಲಿದ್ದ ಜೆಡಿಎಸ್ ಸದಸ್ಯರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಪರಿಣಾಮ ಜನರು ನಮ್ಮ ಪಕ್ಷಕ್ಕೆ ವ್ಯತಿರಿಕ್ತ ಫಲಿತಾಂಶ ನೀಡಿದ್ದಾರೆ ಎಂದು ವಿಶ್ಲೇಷಿಸಿದರು.  
ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜತೆಗೆ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಬೇಕಾದುದು ಜನಪ್ರತಿನಿಧಿಯ ಕೆಲಸವಾಗಿದೆ. ಪುರಸಭೆ ಚುನಾವಣೆ ಫಲಿತಾಂಶವು ನಮ್ಮ ಲೋಪಗಳನ್ನು ತಿದ್ದಿಕೊಳ್ಳಲು ದೊರೆತ ಒಂದು ಅವಕಾಶವಾಗಿದೆ ಎಂದು ಅವರು ತಿಳಿಸಿದರು.    
ಲಕ್ಷ್ಮೀಪುರ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆ ಮಂಜೂರಾಗಿದೆ. ಈ ಗ್ರಾಮದ ವಿದ್ಯಾರ್ಥಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಹೊಳೆ ದಾಟಿ ಹೋಗಬೇಕಿತ್ತು. ಅವರ ಬವಣೆಯನ್ನಿರಿತು ನಬಾರ್ಡ್ ಯೋಜನೆಯಡಿ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರಕಿಸಿಕೊಟ್ಟಿರುವುದಾಗಿ ವಿವರಿಸಿದರು.  
ಜಿ.ಪಂ. ಅಧ್ಯಕ್ಷ ಮುದ್ದುರಾಜ್ ಯಾದವ್, ರಾಮನಗರ ತಾ.ಪಂ. ಅಧ್ಯಕ್ಷೆ ಬಾನುಮತಿ, ಸದಸ್ಯ ವೆಂಕಟರಂಗಯ್ಯ, ಶಿವಪ್ರಸಾದ್, ಇಓ ನಾರಾಯಣಸ್ವಾಮಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ದೀಪಶ್ರೀ, ಲಕ್ಷ್ಮೀಪುರ ಗ್ರಾ.ಪಂ. ಸದಸ್ಯ ಚನ್ನೇಗೌಡ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement