ಸೂಲಿಬೆಲೆಯಲ್ಲಿ ಧಂ ಮಾರೋ 'ಧಂ'ಗೆ ದಂಡ
ಕ.ಪ್ರ. ವಾರ್ತೆ ಸೂಲಿಬೆಲೆ ಮಾ.16
ಸಾರ್ವಜನಿಕ ಸ್ಥಳಗಳಲ್ಲಿ ಎಗ್ಗಿಲ್ಲದೆ ಧಂ ಎಳೆಯುತ್ತಿದ್ದ ಧೂಮಪಾನಿಗಳಿಗೆ ಸೂಲಿಬೆಲೆ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿಮುಟ್ಟಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡಿ ಸರ್ಕಾರ ಜಾರಿಗೆ ತಂದಿರುವ ಕಾಯ್ದೆ ಅನ್ವಯ ಸೂಲಿಬೆಲೆ ಪೊಲೀಸರು ಪಟ್ಣದ ಪ್ರಮುಖ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಹೊಟೇಲ್ ಇತ್ಯಾದಿ ಕಡೆ ಕಾರ್ಯಚರಣೆ ನಡೆಸಿದರು.
ಈ ವೇಳೆ ರಾಜಾರೋಷವಾಗಿ ಧಂ ಎಳೆಯುತ್ತಿದ್ದ ವ್ಯಕ್ತಿಗಳನ್ನು ಹಿಡಿದ ಪೊಲೀಸರು ರು.200 ದಂಡ ವಿಧಿಸಿ ರಸೀದಿ ನೀಡಿ ಧಂ ಎಳೆಯದಂತೆ ಎಚ್ಚರಿಕೆ ನೀಡಿದರು. ಪೊಲೀಸರ ಈ ದಿಢೀರ್ ಕಾರ್ಯಚರಣಿಯಿಂದ ಧೂಮಪಾನಿಗಳಿಗೆ ಧಂ ಭಂಗ ಉಂಟಾಗಿ ಇದೇನು ಕಾನೂನು ಎಂದು ಪೊಲೀಸರನ್ನು ಪ್ರಶ್ನೆಸುವತ್ತ ಮುಂದಾಗಿ ಪೊಲೀಸರಿಗೆ ಪಾಠ ಹೇಳಲು ಹೋಗಿ ಪೇಚು ಮೋರೆ ಹಾಕಿಕೊಂಡು ದಂಡ ಕಟ್ಟಿದರು. ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು ಸೇದುವುದು ಕಾನೂನು ಬಾಹಿರವಾಗಿದೆ.ಜನ ಕಾನೂನು ತಿಳಿದು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಧಂ ಎಳೆದು ಕಿರಿಕಿರಿ ಉಂಟು ಮಾಡಿದರೆ ಕಾನೂನು ಪ್ರಕಾರ ದಂಡ ಹಾಕಲಾಗುವುದು ಎಂದು ಪಿಎಸ್ಐ ರಾಜಣ್ಣ ತಿಳಿಸಿದ್ದಾರೆ.