ಪಕ್ಷ ಕಟ್ಟಿದವರ ಕಡೆಗಣನೆಗೆ ಬಿ.ಮುನೇಗೌಡ ಆಕ್ರೋಶ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮಾ.17
ಜೆಡಿಎಸ್ನಿಂದ ಹಿರಿಯ ಮುಖಂಡರಾದ ಎಲ್. ವೆಂಕಟೇಶಯ್ಯ ಮತ್ತು ಎಚ್.ಸಿ.ಕೃಷ್ಣಪ್ಪ ಅವರನ್ನು ಉಚ್ಚಾಟಿಸಲಾಗಿದೆ ಎಂದು ಹೇಳಿಕೆ ಕೊಟ್ಟಿರುವ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಗೋವಿಂದರಾಜು ವಿರುದ್ಧ ಜೆಡಿಎಸ್ ಜಿಲ್ಲಾ ಖಜಾಂಚಿ ಬಿ.ಮುನೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ಮತ್ತು ಏಕಪಕ್ಷೀಯ ಹೇಳಿಕೆ ಇದಾಗಿದೆ ಎಂದಿರುವ ಅವರು, ಯಾವುದೋ ಒಂದು ಗುಂಪಿನ ನಾಯಕರಾಗಿ ಗುರುತಿಸಿಕೊಳ್ಳುತ್ತಿರುವ ಅವರಿಗೆ ನಿಷ್ಠ ಕಾರ್ಯಕರ್ತರನ್ನು ಉಚ್ಚಾಟಿಸುವ ಅಧಿಕಾರವಿಲ್ಲ. ಸ್ವತಃ ಅವರೂ ಪಕ್ಷದ ನಿಷ್ಠರನ್ನು ಕಡೆಗಣಿಸಿ ಪಿತೂರಿ ನಡೆಸುತ್ತಿರುವ ಬಗ್ಗೆ ಉತ್ತರ ನೀಡಬೇಕು. ವಿಧಾನಸಭೆ ಮರುಚುನಾವಣೆ, ಆರೂಢಿ ಗ್ರಾ.ಪಂ ಉಪಚುನಾವಣೆ, ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಪಿತೂರಿ ನಡೆಸಿದವರು ಯಾರು ಎಂಬುದನ್ನು ಕಾರ್ಯಕರ್ತರಿಗೆ ಸ್ಪಷ್ಟಪಡಿಸಲಿ ಎಂದಿದ್ದಾರೆ.
ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಲು ಮುನೇಗೌಡ ಮಾಡಿದ ಜನಪರ ಯೋಜನೆಗಳೇ ಮುಖ್ಯ ಕಾರಣವೇ ಹೊರತು ಯಾವೊಬ್ಬ ವ್ಯಕ್ತಿಯ ಬಲ ಅಲ್ಲ. ಎಲ್.ವೆಂಕಟೇಶಯ್ಯ ಮತ್ತು ಎಚ್.ಸಿ.ಕೃಷ್ಣಪ್ಪ ಎಂಬತ್ತರ ದಶಕದಿಂದಲೂ ಪಕ್ಷದ ನಿಷ್ಠ ಕಾರ್ಯಕರ್ತರಾಗಿದ್ದಾರೆ. ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಅಪಾರ. ಇನ್ನು ಮುಂದೆ ಪಕ್ಷದ ಹಿರಿಯ ಮುಖಂಡರ ಬಗ್ಗೆ ಹೇಳಿಕೆ ಕೊಡುವಾಗ ಲಘುವಾಗಿ ಮಾತನಾಡದೆ, ಸಂಘಟನೆಗೆ ಮಾರಕವಾಗುವ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಹೈಕಮಾಂಡ್ ಮುಂದೆ 25 ನಗರಸಭಾ ಸ್ಥಾನ ಗೆಲ್ಲುತ್ತೇವೆಂದು ಹೇಳಿ ಬಿ ಫಾರಂ ಪಡೆದು ಬಂದಿದ್ದವರು ಗೆದ್ದಿರುವುದು 14 ಸ್ಥಾನ ಮಾತ್ರ. ನೈತಿಕತೆ ಇದ್ದರೆ ಅವರು ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ ಎಂದು ಅವರು ಹೇಳಿದ್ದಾರೆ.