ಮಕ್ಕಳಲ್ಲಿ ಸೇವಾ ಮನೋಭಾವ, ಭ್ರಾತೃತ್ವ, ದೇಶಭಕ್ತಿ ಬೆಳೆಸಿ
ಕ.ಪ್ರ. ವಾರ್ತೆ ಕನಕಪುರ ಮಾ.17
ಸಂಘಜೀವಿಯಾದ ಮಾನವ ಅನೇಕ ಋಣಗಳನ್ನು ಹೊತ್ತು ಬಂದಿರುತ್ತಾನೆ. ಅವುಗಳಲ್ಲಿ ಪ್ರಮುಖವಾದ ಸಮಾಜದ ಋಣವನ್ನು ಸೇವಾಕಾರ್ಯಗಳ ಮೂಲಕ ತೀರಿಸುವ ಅವಕಾಶವಿದೆ. ಶಾಲಾ ದಿನಗಳಿಂದಲೇ ಮಕ್ಕಳಲ್ಲಿ ಸೇವಾಮನೋ ಭಾವನೆ, ಭ್ರಾತೃತ್ವ, ದೇಶಭಕ್ತಿಗಳನ್ನು ಬೆಳೆಸುವ ಎನ್ಎಸ್ಎಸ್ ಶಿಬಿರಗಳು ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಟ್ಟು ಅಪಾರ ಅನುಭವವನ್ನು ತಂದುಕೊಡುತ್ತವೆ ಎಂದು ಭವಾನಿ ಟ್ರಸ್ಟ್ ಅಧ್ಯಕ್ಷ, ದಾನಿಗಳಾದ ಲಕ್ಷ್ಮಣ್ ಹೇಳಿದ್ದಾರೆ.
ಅವರು ಕನಕಪುರ ಹೊರವಲಯದ ಹೌಸಿಂಗ್ ಬೋರ್ಡ್ ಕಾಲೊನಿಯ ಜೆಇಟಿ ಶಾಲಾ ಆವರಣದಲ್ಲಿ ಕನಕಪುರದ ರೂರಲ್ ಪ್ರಥಮದರ್ಜೆ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಸೇವಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಗ್ರಾಮ ವಿದ್ಯಾಪ್ರಚಾರಕ ಸಂಘದ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ 50 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡು ಶ್ರಮದಾನದ ಮೂಲಕ
ಅನೇಕ ಸೇವಾಕಾರ್ಯಗಳಿಗೆ ಚಾಲನೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಂಶುಪಾಲ ಎಸ್.ಎಲ್. ವೆಂಕಟನಾಯಕ್ ಅವರು ವಿಶ್ವವಿದ್ಯಾಲಯಗಳಲ್ಲಿ ಎನ್ಎಸ್ಎಸ್ ಶಿಬಿರಗಳು ಪ್ರಾರಂಭಗೊಳ್ಳುವ ಹಲವಾರು ದಶಕಗಳ ಮೊದಲೇ ರೂರಲ್ ಕಾಲೇಜು
ಸಂಸ್ಥಾಪಕರಾದ ದಿ.ಕರಿಯಪ್ಪನವರು ಗ್ರಾಮೀಣ ಪ್ರದೇಶಗಳಲ್ಲಿ ಶ್ರಮದಾನದ ಮೂಲಕ ಸಮಾಜಸೇವಾ ಚಟುವಟಿಕೆಗಳನ್ನು ನಡೆಸಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿದ್ದರು. ಅನೇಕ ಶಿಬಿರಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಹೇಳಿದದರು.
ಶಿಬಿರಾಧಿಕಾರಿ ವಾಡೇದೊಡ್ಡಿ ಕಬ್ಬಾಳೇಗೌಡ ಮಾತನಾಡಿ, ಏಳು ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಗ್ರಾಮದ ಸ್ವಚ್ಛತೆ, ರಸ್ತೆ ನಿರ್ಮಾಣ, ಜಲಸಂವರ್ಧನಾ ಚಟುವಟಿಕೆಗಳನ್ನು ನಡೆಸುತ್ತಾರೆ. ಇವುಗಳೊಂದಿಗೆ ಪ್ರತಿದಿನವೂ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕಾನೂನು ಅರಿವು ಶಿಬಿರ, ಸ್ವಯಂ ಉದ್ಯೋಗ ತರಬೇತಿ, ಪಶು ಆರೋಗ್ಯ ತಪಾಸಣೆ, ನಾಗರಿಕರಿಗೆ ಆರೋಗ್ಯ ತಪಾಸಣೆ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಹಶಿಬಿರಾಧಿಕಾರಿ ಅರುಣಕುಮಾರ್ ಸ್ವಾಗತಿಸಿದರು. ಎಂ.ಜಿ. ವಿಜಯೇಂದ್ರ ವಂದಿಸಿದ ರು.