ಶ್ರೇಷ್ಠ ಲೇಖಕ ಪ್ರಶಸ್ತಿ ಪ್ರಕಟ
ರಾಮನಗರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2012-13ನೇ ಸಾಲಿನ ಶ್ರೇಷ್ಠ ಲೇಖಕ ಪ್ರಶಸ್ತಿ ಪ್ರಕಟಿಸಿದ್ದು, 6 ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಟಿ.ಆರ್.ಅನಂತರಾಮು ಬರೆದಿರುವ ದೈತ್ಯ ಪ್ರತಿಮೆಗಳ ಹೆಗಲ ಮೇಲೆ ಪುಸ್ತಕ ಹಾಗೂ ಮೈಸೂರಿನ ಎ.ಚಂದ್ರಶೇಖರ ಮುಳೀಯ ರಾಘವಯ್ಯ ಮತ್ತು ಡಿ.ವಿ.ಗೋಪಿನಾಥ್ ಬರೆದಿರುವ ವಿಕಿರಣ ಪರಿಣಾಮ, ಪರಮಾಣು ಶಕ್ತಿ ಮತ್ತು ತುಲನಾತ್ಮಕ ವಿಪತ್ತುಗಳು ಎಂಬ ಪುಸ್ತಕ ಆಯ್ಕೆಯಾಗಿವೆ. ಕೃಷಿ ಕ್ಷೇತ್ರದಲ್ಲಿ ಬೆಂಗಳೂರಿನ ಬೇಳೂರು ಸುದರ್ಶನ ರಚಿತ ಉರಿಯ ಸಿರಿ, ವೈದ್ಯಕೀಯ ಕ್ಷೇತ್ರದಲ್ಲಿ ಬೆಂಗಳೂರಿನ ಡಾ.ನಾ.ಸೋಮೇಶ್ವರ ಬರೆದ ಜ್ಞಾನೇಂದ್ರಿಯಗಳು ಹಾಗೂ ಶಿವಮೊಗ್ಗದ ಡಾ.ಸಿ.ಜಿ.ಕೇಶವಮೂರ್ತಿ ರಚಿಸಿರುವ ಮುಪ್ಪಿನಲ್ಲಿ ಕಾಡುವ ಸಮಸ್ಯೆಗಳು ಎಂಬ ಪುಸ್ತಕಗಳು ಆಯ್ಕೆಯಾಗಿವೆ ಎಂದು ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಎಚ್. ಹೊನ್ನೇಗೌಡ ತಿಳಿಸಿದ್ದಾರೆ.