ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರು. 18.55 ಲಕ್ಷ ವಿದ್ಯಾರ್ಥಿ ವೇತನ
ಕ.ಪ್ರ. ವಾರ್ತೆ ದೇವನಹಳ್ಳಿ ಮಾ.17
ತಾಲೂಕಿನ ಸರ್ಕಾರಿ ಮತ್ತು ಖಾಸಗೀ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಸುಮಾರು 1500 ವಿದ್ಯಾರ್ಥಿಗಳಿಗೆ 18.55 ಲಕ್ಷ ರು. ವಿದ್ಯಾರ್ಥಿ ವೇತನ ಸರ್ಕಾರದಿಂದ ಮಂಜೂರಾಗಿದೆ ಎಂದು ತಾಲೂಕು ದೇವರಾಜ ಅರಸು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಸಿ.ಮುನಿರಾಜು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದಿಂದ ಬರುವ ಅನೇಕ ಯೋಜನೆಗಳು ಅಗತ್ಯ ಉಳ್ಳವರಿಗೆ ತಲುಪದೆ ಸಾಕಷ್ಟು ಹಣ ಸರ್ಕಾರಕ್ಕೆ ವಾಪಸಾಗುತ್ತಿತ್ತು. ಆದರೆ ನಮ್ಮ ಒಕ್ಕೂಟದ ಸಂಘಟನೆಯಿಂದಾಗಿ ಸರ್ಕಾರದ ಯೋಜನೆಗಳ ಬಗ್ಗೆ ತಾಲೂಕಿನ ಎಲ್ಲ ಶಾಲೆಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದ ಕಾರಣ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಅದೇ ರೀತಿಯಲ್ಲಿ 2013-14 ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಹಿಂದುಳಿದ ವರ್ಗಗಳ ಸುಮಾರು 525 ಮಕ್ಕಳಿಗೆ ಖಾಸಗೀ ಶಾಲೆಗಳಲ್ಲಿ ಪ್ರವೇಶ ಪಡೆಯಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ದೇವನಹಳ್ಳಿ ತಾಲೂಕಿಲ್ಲಿ ಹಿಂದುಳಿದ ವರ್ಗಗಳ ಕುಟುಂಬಗಳ ಅಂಕಿ ಅಂಶ ಶೇಖರಿಸುವುದಲ್ಲದೆ 60 ವರ್ಷ ತುಂಬಿರುವ ಎಲ್ಲ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಗುರುತಿನ ಚೀಟಿ ಕೊಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಹಿರಿಯ ಸಲಹೆಗಾರರಾದ ಬೂದಿಗೆರೆಯ ಖಾದಿ ಕೃಷ್ಣಪ್ಪ, ರಂಗಸ್ವಾಮಿ, ಆಂಜಿನಪ್ಪ, ನಿವೃತ್ತ ಶಿಕ್ಷಕರಾದ ದಾಸಪ್ಪ, ರಾಮಕೃಷ್ಣಪ್ಪ ಉಪಸ್ಥಿತರಿದ್ದರು.