ಕಟ್ಟಡ ಧ್ವಂಸ: 'ಕೈ' ವಿರುದ್ಧ ಆರೋಪ
ಮಾಗಡಿ: ಚುನಾವಣಾ ಪ್ರತೀಕಾರಕ್ಕೆ ಟಿಎಪಿಸಿಎಂಎಸ್‌ನ ಈ-ಸ್ಟಾಂಪಿಂಗ್ ಕಟ್ಟಡವನ್ನು ಧ್ವಂಸಗೊಂಡಿದೆ ಎಂದು ಜೆಡಿಎಸ್ ಮುಖಂಡರು, ಕಾಂಗ್ರೆಸ್ಸಿಗರ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಟಿಎಪಿಸಿಎಂಎಸ್‌ನ ಸಹಕಾರ ಸಂಸ್ಥೆಗೆ ಈ ಸ್ಟಾಂಪಿಂಗ್ ಮಳಿಗೆ ನಿರ್ಮಿಸಿಕೊಳ್ಳಲು ಪುರಸಭೆ ನಿವೇಶನ ನೀಡಲು ಹಿಂದಿನ ಜೆಡಿಎಸ್ ಆಡಳಿತದ ಸದಸ್ಯರ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡು ಅವರಿಗೆ ಅನುಮತಿ ನೀಡಲಾಗಿತ್ತು. ನಿವೇಶನವನ್ನು 11 ತಿಂಗಳ ವಾಯಿದೆಯಂತೆ ತಾತ್ಕಾಲಿಕವಾಗಿ ಬಾಡಿಗೆ ಆಧಾರದ ಮೇಲೆ ನಿವೇಶನ ಪಡೆದಿದ್ದ ಟಿಎಪಿಸಿಎಂಎಸ್ ಸಹಕಾರ ಸಂಸ್ಥೆಯು ಈ-ಸ್ಟಾಂಪಿಂಗ್ ತೆರೆಯಲು ಮಳಿಗೆ ಕಟ್ಟಿಕೊಳ್ಳಲು ಕಟ್ಟಡ ಕಾಮಗಾರಿಯೂ ನಡೆದಿತ್ತು. ಇತ್ತೀಚಿನ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಬಹುಮತ ಸಾಧಿಸಿದ್ದು, ಚುನಾವಣಾ ಪ್ರತೀಕಾರದಿಂದಾಗಿ ಈ-ಸ್ಟಾಂಪಿಂಗ್ ಕಟ್ಟಡ ಪಾಯವನ್ನು ರಾತ್ರೋ ರಾತ್ರಿ ದ್ವಂಸಗೊಳಿಸಲಾಗಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ. ಟಿಎಪಿಸಿಎಂಎಸ್ ರೈತರ ಪರವಾಗಿ ಸೇವೆ ಸಲ್ಲಿಸುತ್ತಿದೆ. ಸಾರ್ವಜನಿಕರ ಅನುಕೂಲಕವಾದ ಸೇವೆ ಸಲ್ಲಿಸಲು ಈ-ಸ್ಟಾಂಪಿಂಗ್ ತೆರೆಯಲು ಅನುಮತಿ ಪುರಸಭೆಗೆ ಅನುಮತಿ ಕೋರಿದ್ದು, ಸಭಾ ನಡವಳಿಕೆ ತೀರ್ಮಾನದಂತೆ ಅನುಮತಿ ಪಡೆಯಲಾಗಿತ್ತು. ಆದರೆ ಕಾಂಗ್ರೆಸ್ ಮುಖಂಡರಾದ ಡಿ.ಸಿ.ಶಿವಣ್ಣ, ರಂಗಹನುಮಯ್ಯ, ವೆಂಕಟೇಶ್ ಬಾಬು ಅವರು ಧ್ವಂಸ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿ ಟಿಎಪಿಸಿಎಂಎಸ್ ಕಾರ್ಯದರ್ಶಿ ವೆಂಕಟಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಎಚ್.ಎನ್. ಅಶೋಕ್ ತಿಳಿಸಿದ್ದಾರೆ.
ಟ್ಯಾಂಕರ್ ಡಿಕ್ಕಿ: ಆಟೋ ಚಾಲಕ ಸಾವು
ಆನೇಕಲ್ಲು: ರಸ್ತೆಗೆ ಅಡ್ಡ ಬಂದ ನೀರಿನ ಟ್ಯಾಂಕರ್‌ಗೆ ಆಟೋ ಡಿಕ್ಕಿ ಹೊಡೆದ ಕಾರಣ ಚಾಲಕ ಸ್ಥಳದಲ್ಲೇ ಸತ್ತ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯ ವಿಜಯ ಬ್ಯಾಂಕ್ ಲೇಔಟ್ ಅಯ್ಯಪ್ಪ ದೇವಸ್ಥಾನ ಬಳಿ ನಡೆದಿದೆ. ಮಲ್ಲೇಶ್ ನಾಯಕ್(35) ಮೃತ ಪಟ್ಟ ಚಾಲಕ. ನೀರನ್ನು ತುಂಬಿಕೊಂಡು ವೇಗವಾಗಿ ಬಂದ ಟ್ಯಾಂಕರ್ ಮುಖ್ಯ ರಸ್ತೆಯಲ್ಲಿ ನಿಧಾನವಾಗಿ ಚಲಿಸದೇ ಬಂದದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರಾದ ಮುನಿರೆಡ್ಡಿ ತಿಳಿಸಿದರು. ಟ್ಯಾಂಕರ್ ಚಾಲಕ ಪರಾರಿಯಾಗಿದ್ದು ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿಎಸ್ಸೈ ತಿಳಿಸಿದ್ದಾರೆ. ಮೂಲತಃ ತಮಿಳುನಾಡಿನ ಡೆಂಕಣಿಕೋಟೆಯ ಮಲ್ಲೇಶ್ ಕಳೆದ 20 ವರ್ಷಗಳಿಂದ ಅರಕೆರೆಯ ಬಳಿ ವಾಸವಿದ್ದು ಆಟೋ ಚಾಲಕನಾಗಿದ.್ದ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.