ಮಕ್ಕಳನ್ನು ಶಾಲೆಗೆ ಕಳುಹಿಸಿ
ಕ.ಪ್ರ.ವಾರ್ತೆ, ಚನ್ನಪಟ್ಟಣ, ಮಾ.18
ಮಕ್ಕಳನ್ನು ಇತರೆ ಕೆಲಸ ಕಾರ್ಯಗಳಿಗೆ ತೊಡಗಿಸದೆ ಶಾಲೆಗೆ ಕಳುಹಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಚಿತ್ರನಟ ದಿಗಂತ್ ಕಿವಿ ಮಾತು ಹೇಳಿದರು.
ತಾಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷವಾಗಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಿ ಅವರನ್ನು ಶಿಕ್ಷಿತರನ್ನಾಗಿ ಮಾಡಬೇಕು. ಇದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸದ ಅವರು, ಈ ಶಾಲೆಯು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂದರು.
ಈ ಶಾಲೆಯಲ್ಲಿ ಶಿಕ್ಷಕರು ಉತ್ತಮವಾಗಿ ಬೋಧಿಸುತ್ತಿದ್ದಾರೆ. ಈ ಗ್ರಾಮದ ಜನತೆಗೆ ಮನಸೋತು ಈ ಶಾಲೆಯನ್ನು ದತ್ತು ತೆಗೆದುಕೊಂಡಿರುವುದಾಗಿ ತಿಳಿಸಿದ ದಿಗಂತ್ ಶಾಲೆಯ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹಾಯ ಹಸ್ತ ಚಾಚಿರುವುದು ಪ್ರಶಂಸನೀಯ. ಇಂತಹ ಸಹಕಾರ ನೀಡುವುದು ಅತ್ಯವಶ್ಯಕವಾಗಿದೆ ಎಂದರು.
ಕ್ಷೆತ್ರ ಸಮನ್ವಯಾಧಿಕಾರಿ ಎ.ಎನ್. ಅನಿಲ್ ಮಾತನಾಡಿ ಶಾಲೆಗೆ ಪ್ರತಿಯೊಂದು ಅಗತ್ಯ ಸೌಲಭ್ಯವನ್ನು ಇನ್ನೊಂದು ವರ್ಷದೊಳಗಾಗಿ ಒದಗಿಸುವುದಾಗಿ ತಿಳಿಸಿದರು.
ಕಂಪ್ಯೂಟರ್ ಹಸ್ತಾಂತರ: ಇದೇ ಸಂದರ್ಭದಲ್ಲಿ ಇನ್ಪೋಸಿಸ್ ಕಂಪನಿಯವರು ಶಾಲೆಗೆ ನೀಡಿರುವ ಸುಮಾರು 2ಲಕ್ಷ ರು. ಮೌಲ್ಯದ ಕಂಪ್ಯೂಟರ್ಗಳನ್ನು ಶಾಲಾ ಮುಖ್ಯ ಶಿಕ್ಷಕ ಮಹದೇವ್ಗೆ ಹಸ್ತಾಂತರಿಸಲಾಯಿತು.
ಮುಖಂಡ ಟಿ.ವಿ.ರಂಗಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಕೆ.ವಿ. ರಾಜಶೇಖರ್, ಗೋವಿಂದಹಳ್ಳಿ ನಾಗರಾಜು, ರಾಂಪುರ ರಾಜಣ್ಣ, ಶಿವಲಿಂಗೇಗೌಡ, ಬಾಬು, ಸಂದೀಪ್ ಗೌಡ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಮಹದೇವ್ ಸ್ವಾಗತಿಸಿದರು. ಸಹಶಿಕ್ಷಕ ಲಕ್ಷ್ಮೀಶ್ ನಿರೂಪಿಸಿದರು. ಸಹಶಿಕ್ಷಕ ನಂಜುಂಡ ವಂದಿಸಿದರು.
ಶಾಲಾ ಮಕ್ಕಳು ನೀಡಿದ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.