ಮಹಿಳಾ ಪ್ರತಿನಿಧಿಗಳನ್ನು ಅವಾಚ್ಯ ಪದದಿಂದ ನಿಂದಿಸಿ ಕೊಲೆ ಬೆದರಿಕೆ
ಚನ್ನಪಟ್ಟಣ: ಬ್ಯಾಂಕ್ನಿಂದ ಸಾಲ ಪಡೆದು ಮರುಪಾವತಿ ಮಾಡದ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಗೆ ಸಾಲ ಮರುಪಾವತಿ ಮಾಡುವಂತೆ ತಿಳಿಸಿದ ಸ್ವಯಂಸೇವಾಸಂಘದ ಮಹಿಳಾ ಪ್ರತಿನಿಧಿಗಳನ್ನು ಅವಾಚ್ಯ ಪದದಿಂದ ನಿಂದಿಸಿ ಕೊಲೆಬೆದರಿಕೆ ಹಾಕಿದ ಘಟನೆ ಇಲ್ಲಿನ ಕೋಟೆಯಲ್ಲಿ ಸೋಮುವಾರ ನಡೆದಿದೆ.
ಕೋಟೆಯಲ್ಲಿನ ಮೂಕಾಂಬಿಕಾ ಮತ್ತು ಇನ್ನಿತರ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು ಎಸ್ಬಿಎಂನಿಂದ ಸಾಲಪಡೆದಿದ್ದ ಹಲವು ತಿಂಗಳುಗಳಾದರೂ ಸಾಲ ಮರುಪಾವತಿ ಮಾಡಿರಲಿಲ್ಲ.
ಬ್ಯಾಂಕ್ನ ಸೇವಾನಿರತ ಸಂಸ್ಥೆಯಾಗಿರುವ ವಿಕಾಸ ಸಂಸ್ಥೆಯ ಮಹಿಳಾ ಪ್ರತಿನಿಧಿಗಳು ಸಂಘದ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟು ಮರುಪಾವತಿ ಮಾಡಿಸಲು ಸಂಘದ ಸದಸ್ಯರನ್ನು ಭೇಟಿಯಾಗಿದ್ದಾರೆ.
ಹಣಕಾಸುವರ್ಷದ ಕೊನೆಯ ತಿಂಗಳಾಗಿರುವ ಕಾರಣ ಯಾವುದೇ ಸುಸ್ತಿ ಇಟ್ಟು ಕೊಳ್ಳುವಂತಿಲ್ಲ, ನೀವು ಸಾಲವಾಗಿ ಪಡೆದಿರುವ ಹಣವನ್ನು ಬ್ಯಾಂಕ್ಗೆ ಮರುಪಾವತಿ ಮಾಡಿ, ಇಲ್ಲದಿದ್ದರೆ ನಿಮಗೆ ತೊಂದರೆಯಾಗುತ್ತದೆ ಎಂದು ತಿಳಿಸುತ್ತಿದ್ದಂತೆ ಕುಪಿತಗೊಂಡ ಸಂಘದ ಸದಸ್ಯರು ವಾಗ್ವಾದಕ್ಕಿಳಿದು ಕೊಲೆ ಬೆದರಿಕೆಯೊಡ್ಡಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಮನಗಂಡ ಸಂಸ್ಥೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಧ್ಯಸ್ಥಿಕೆ ವಹಿಸಿದ ಪೊಲೀಸರು ಸಾಲದ ಹಣವನ್ನು ಮರುಪಾವತಿ ಮಾಡುವಂತೆ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು. ನಂತರ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.