ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿಡದಿ ಬಳಿ ಕಸ ವಿಲೇವಾರಿ ಘಟಕಕ್ಕೆ ಆಕ್ರೋಶ

Parashurama
Updated On : 20 Mar 2013, 12:00 pm

ಕ.ಪ್ರ.ವಾರ್ತೆ ರಾಮನಗರ ಮಾ.19
ಬಿಡದಿ ಬಳಿಯ ಕೊಡಿಯಾಲ ಕರೇನಹಳ್ಳಿ ಬಳಿ ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆ ಒಳಸಂಚು ರೂಪಿಸಿರುವ ಸರ್ಕಾರದ ಕ್ರಮ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನ ಸುತ್ತಮುತ್ತ ಘಟಕ ಸ್ಥಾಪನೆಗೆ ಎದುರಾದ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರವು ರಾಮನಗರದ ಮೇಲೆ ವಕ್ರದೃಷ್ಟಿ ಬೀರಿದೆ. ಸದ್ದಿಲ್ಲದೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿದ್ದು, ಈ ಜಿಲ್ಲೆ ಜನತೆ ಪಾಲಿಗೆ ಸರ್ಕಾರ ಶಾಪವಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಕೊಡಿಯಾಲ ಕರೇನಹಳ್ಳಿ ಬಳಿ ಕಸ ವಿಲೇವಾರಿ ಘಟಕ ಸ್ಥಾಪನೆ ಬಗ್ಗೆ ಮೊದಲೇ ಇದ್ದ ಸಂಶಯ ಈಗ ನಿಜವಾಗಿದೆ. ಈಗಾಗಲೇ ವೃಷಭಾವತಿ ತ್ಯಾಜ್ಯದಿಂದ ರೋಗಪೀಡಿತವಾಗಿರುವ ಬಿಡದಿ ಭಾಗಕ್ಕೆ ಜಿಲ್ಲಾಡಳಿತ, ಜಿಲ್ಲೆಯ ಜನಪ್ರತಿನಿಧಿಗಳ ವೈಫಲ್ಯ ಮತ್ತು ಸರ್ಕಾರದ ಸಂಚಿನಿಂದ ಮತ್ತೊಂದು ಗಂಡಾಂತರ ಎದುರಾಗಿದೆ ಎಂದರು.
ಟಿಡಿಆರ್ ಅನ್ವಯಿಸದು: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಭೂ ಮಾಲೀಕ ಕಾಶಿನಾಥ್, ಕಸ ವಿಲೇವಾರಿ ಘಟಕಕ್ಕೆ 40 ಎಕರೆ 9 ಗುಂಟೆ ಜಮೀನು ಸ್ವಾಧೀನವಾಗಿದೆ. ಸುತ್ತಮುತ್ತಲ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಹುನ್ನಾರ ನಡೆಸಿದೆ. ಬಿಎಂಐಸಿಎಪಿಎ ವ್ಯಾಪ್ತಿಯ ಈ ಜಮೀನಿಗೆ ಬಿಬಿಎಂಪಿ ಟಿಡಿಆರ್ ನೀಡಲು ಅವಕಾಶವಿಲ್ಲ ಎಂದು ತಿಳಿಸಿದರು.
ಪರಿತ್ಯಜಿಸಲ್ಪಟ್ಟ ಜಮೀನಿನ ಒಂದೂವರೆ ಪಟ್ಟು ಮೌಲ್ಯದ ಟಿಡಿಆರ್ ವಿತರಣೆ ಮಾಡುತ್ತಿರುವ ಪರಿಣಾಮ ಇಲ್ಲಿ ದೊಡ್ಡ ಮಟ್ಟದ ಮಾಫಿಯಾ ತಲೆ ಎತ್ತಿದೆ. ಸ್ವಾಧೀನವಾಗಿರುವ ಜಾಗದ ಸುತ್ತಮುತ್ತಲ ಭೂ ಕಬಳಿಕೆ, ಬಲವಂತದ ಖರೀದಿ ವ್ಯವಹಾರ ಕುದುರಿಸಲಾಗುತ್ತಿದೆ. ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದರು.
ಉದ್ದೇಶಿತ ಜಾಗದಲ್ಲೇ ಕಸ ವಿಲೇವಾರಿ ಘಟಕ ತಲೆ ಎತ್ತಿದಲ್ಲಿ ಈ ಭಾಗದ ಜನತೆಯ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ವೃಷಭಾವತಿ ಹರಿವಿನಿಂದ ಈಗಾಗಲೇ ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದು, ಮತ್ತಷ್ಟು ಉಲ್ಬಣಿಸಲಿದೆ ಎಂದು ಎಚ್ಚರಿಸಿದರು.
ನಿರಂತರ ಹೋರಾಟ: ಚಳವಳಿ ನೇತೃತ್ವ ವಹಿಸಿದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶಗೌಡ, ಕಸ ವಿಲೇವಾರಿ ಘಟಕ ಸ್ಥಾಪನೆ ಆಗುತ್ತಿರುವ ಬಗ್ಗೆ ಗುಟ್ಟು ಗುಮಾನಿ ಬಿಡದೆ, ಷಡ್ಯಂತ್ರದಲ್ಲಿ ಶಾಮೀಲಾಗಿರುವ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಮುಖಕ್ಕೆ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಿದರು.
ಕಸ ವಿಲೇವಾರಿ ಘಟಕ ಸ್ಥಾಪನೆ ವಿರೋಧಿಸಿ ದೊಡ್ಡ ಮಟ್ಟದ ಚಳವಳಿ ನಡೆಸಿದ್ದಾಗ್ಯೂ ಸರ್ಕಾರ ಸೊಪ್ಪು ಹಾಕಿಲ್ಲ. ಬೇರೆ ಭಾಗದಲ್ಲಿ ಚಳವಳಿಗೆ ಹೆದರಿದ ಸರ್ಕಾರ, ರಾಮನಗರದ ಜನತೆಯನ್ನು ಲಘುವಾಗಿ ಪರಿಗಣಿಸಿದೆ. ಕಸವನ್ನು ಇಲ್ಲಿಗೆ ತಂದು ಹಾಕಲು ಯಾವ ಕಾರಣಕ್ಕೂ ಬಿಡೆವು. ನಿರಂತರ ಹೋರಾಟ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ನೀಲೇಶ್‌ಗೌಡ, ದಿನೇಶ್, ಗೋವಿಂದಪ್ಪ, ಜಯರಾಮರೆಡ್ಡಿ, ನಾಗಲಕ್ಷ್ಮಿಗೌಡ, ಯೋಗೇಶ್, ನಾಗರತ್ನ, ರಾಜಮ್ಮ, ರಂಜಿತ್ ಗೌಡ, ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments