ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪಿಯು ಪರೀಕ್ಷೆ; ಸಿಕ್ಕಿಬಿದ್ದ ನಕಲಿ ವಿದ್ಯಾರ್ಥಿ

Mainashree
Updated On : 21 Mar 2013, 10:21 am

ಕ.ಪ್ರ ವಾರ್ತೆ ರಾಮನಗರ ಮಾ.20
ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಬೇರೊಬ್ಬನ ಹೆಸರಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವಾಗ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಬಿಇ ದ್ವಿತೀಯ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಗಿರಿವರ್ಧನ (20) ಸಿಕ್ಕಿಬಿದ್ದ ನಕಲಿ ವಿದ್ಯಾರ್ಥಿ. ಈಗ ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಚ್.ಎಸ್.ಪ್ರವೀಣಕುಮಾರ್ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದನು.
ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ನೀಡಿರುವ ದೂರಿನ ಮೇರೆಗೆ ರಾಮನಗರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ನಕಲಿ ವಿದ್ಯಾರ್ಥಿ ಗಿರಿವರ್ಧನನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಪ್ರವೀಣಕುಮಾರ್‌ಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಘಟನೆ ವಿವರ:  ರಾಮನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಭೌತಶಾಸ್ತ್ರ ಪರೀಕ್ಷೆ ನಡೆಯುತ್ತಿತ್ತು. ಆ ವೇಳೆ ವಿದ್ಯಾರ್ಥಿ ಪ್ರವೀಣಕುಮಾರ್ ಪರೀಕ್ಷಾ ಕೇಂದ್ರದಿಂದ ಹೊರಗಿದ್ದನು. ಪರೀಕ್ಷೆಗೆ ಹೋಗದ ಬಗ್ಗೆ ವಿಚಾರಿಸಿದವರ ಬಳಿ ನಾನು ಪರೀಕ್ಷೆಗೆ ಹೋಗದಿದ್ರೂ ಪಾಸಾಗುತ್ತೇನೆ ಎಂದು ಉಡಾಫೆ ಉತ್ತರ ನೀಡಿದ್ದ ಎನ್ನಲಾಗಿದೆ. ಈ ಮಾತು ಕೇಳಿದವರಿಗೆ ಸಹಜವಾಗಿಯೇ ಅನುಮಾನ ಮೂಡಿತ್ತು. ಪ್ರವೀಣಕುಮಾರ್ ಹೆಸರಿನಲ್ಲಿ ನಕಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯುತ್ತಿರಬಹುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ, ಸಹಾಯವಾಣಿ, ಪರೀಕ್ಷಾ ಕೇಂದ್ರವಾಗಿದ್ದ ಕಾಲೇಜಿನ ಕಚೇರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು.
ಅಧಿಕಾರಿ ತಪಾಸಣೆ:  ಅನಾಮಧೇಯ ಕರೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ತೀವ್ರ ತಪಾಸಣೆ ನಡೆಸಿದ ಮೋಹನ್ ನೇತೃತ್ವದ ವಿಚಕ್ಷಣ ದಳ ತಂಡಕ್ಕೆ ಗಿರಿವರ್ಧನನ ಮೇಲೆ ಶಂಕೆ ಬಂದಿದೆ. ಆತನ ಪ್ರವೇಶ ಪತ್ರ ಮತ್ತು ಗುರುತಿನ ಚೀಟಿಯಲ್ಲಿದ್ದ ಭಾವಚಿತ್ರ ಗಂಭೀರವಾಗಿ ಪರಿಶೀಲಿಸಿದಾಗ ಆತ ನಕಲಿ ವಿದ್ಯಾರ್ಥಿ ಎನ್ನುವುದು ದೃಢಪಟ್ಟಿತು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಈಗಾಗಲೇ 2 ವಿಷಯಗಳ ಪರೀಕ್ಷೆ ಮುಗಿದಿದೆ. ಅವೆರಡನ್ನೂ ಗಿರಿವರ್ಧನನೇ ಬರೆದಿದ್ದಾನೋ ಅಥವಾ ಅಸಲಿ ವಿದ್ಯಾರ್ಥಿ ಪ್ರವೀಣಕುಮಾರ್ ಬರೆದಿರುವನೋ ಎನ್ನುವ ಬಗ್ಗೆ ಅನುಮಾನವಿದೆ. ಪರಿಶೀಲನೆಯಿಂದಷ್ಟೇ ದೃಢವಾಗಬೇಕಿದೆ.
ಭಾವಚಿತ್ರ ಬದಲು:  ಇಲ್ಲಿವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಬಹಿರಂಗದ್ದೇ ಸುದ್ದಿಯಾಗಿತ್ತು. ಅಲ್ಲಲ್ಲಿ ನಕಲಿ ವಿದ್ಯಾರ್ಥಿಗಳ ಹಾವಳಿ ಇರುವ ಬಗ್ಗೆ ಗುಮಾನಿ ಇದ್ದಾಗ್ಯೂ ಎಚ್ಚರ ವಹಿಸಿರಲಿಲ್ಲ. ಈ ಪ್ರಕರಣ ಪತ್ತೆಗೆ ಅನಾಮಧೇಯ ಕರೆಯ ಮಾಹಿತಿ ಕಾರಣವೇ ಹೊರತು ಪರೀಕ್ಷಾ ಅಧಿಕಾರಿಗಳ ತಂಡದ ಸಾಧನೆಯೇನಿಲ್ಲ. ಸಿಕ್ಕಿ ಬಿದ್ದಿರುವ ಗುರುತಿನ ಚೀಟಿಯಲ್ಲಿ ಹೆಸರು, ವಿಳಾಸ ಮತ್ತು ವಿವರವೆಲ್ಲವೂ ಪ್ರವೀಣಕುಮಾರನದ್ದೇ ಆಗಿದೆ. ಆದರೆ, ಭಾವಚಿತ್ರ ಗಿರಿವರ್ಧನನದು. ಗುರುತಿನ ಚೀಟಿಯಲ್ಲಿ ಶಾಂತಿನಿಕೇತನ ಕಾಲೇಜಿನ ಮೊಹರು ಇದೆಯಾದರೂ ಪ್ರಾಂಶುಪಾಲರ ಸಹಿ ಇರಲಿಲ್ಲ. ಈ ವಿಷಯದಲ್ಲೂ ತನಿಖೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕಾಲೇಜುಗಳ ನೆರವು:  ಪರೀಕ್ಷೆಗೆ ಹಾಜರಾಗಲು ನಕಲಿ ವಿದ್ಯಾರ್ಥಿಗಳಿಗೆ ಕೆಲ ಕಾಲೇಜುಗಳೇ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಕಳೆದ ವರ್ಷ ಇದೇ ರೀತಿ ಸಿಕ್ಕಿ ಬಿದ್ದಿದ್ದ ವಿದ್ಯಾರ್ಥಿಯೊಬ್ಬನನ್ನು ಅಧಿಕಾರಿಗಳು ಜಾತಿ ಪ್ರೀತಿ ಕಾರಣಕ್ಕೆ ಬಿಟ್ಟು ಕಳುಹಿಸಿ, ಏನೂ ನಡೆದೇ ಇಲ್ಲವೆನ್ನುವಂತೆ ಪ್ರಕರಣ ಮುಚ್ಚಿ ಹಾಕಿದ್ದರು.
ನಕಲಿ ವಿದ್ಯಾರ್ಥಿಯ ಗುರುತಿನ ಚೀಟಿ ಮೇಲೆ ಇರುವ ಮೊಹರು ಯಾವುದು ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಸದರಿ ಮೊಹರು ಕಾಲೇಜಿನ ಅಸಲಿಯೇ ಆಗಿದ್ದರೆ ಸಿಬ್ಬಂದಿ ಶಾಮೀಲು ಇದ್ದೇ ಇರುತ್ತದೆ. ಒಂದೊಮ್ಮೆ ಅದೂ ನಕಲಿಯಾಗಿದ್ದರೆ, ವಿದ್ಯಾರ್ಥಿಗಳ ಮೇಲೆ ಮತ್ತೊಂದು ಕ್ರಿಮಿನಲ್ ಮೊಕದ್ದಮೆ ಕಟ್ಟಿಟ್ಟ ಬುತ್ತಿ. ಇದೆಲ್ಲವೂ ತನಿಖೆಯಿಂದಷ್ಟೇ ಹೊರ ಬೀಳಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement