ಸುದ್ದಿ ಸಂಕ್ಷೇಪ
ಇಂದು ನೇತ್ರ ಚಿಕಿತ್ಸಾ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹಾಗೂ ಲಯನ್ಸ್ ಸೇವಾ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ 136ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರ ಗುರುವಾರ ಲಯನ್ಸ್ ಸೇವಾ ಭವನದಲ್ಲಿ ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ಕಣ್ಣಿನ ಯಾವುದೇ ತೊಂದರೆ ಇರತಕ್ಕವರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಕಿರ್ಲೋಸ್ಕರ್ ನಾಗರಾಜ್ ತಿಳಿಸಿದ್ದಾರೆ.
ಲಕ್ಷ್ಮೀನರಸಿಂಹ ಜಾತ್ರೋತ್ಸವ
ಮಾಗಡಿ: ತಾಲೂಕಿನ ಕುದೂರು ಹೋಬಳಿಯಲ್ಲಿನ ಪುರಾಣ ಪ್ರಸಿದ್ಧವಾದ ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಮಾ.21 ರಿಂದ 31 ರವೆರೆಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ಮಾಜಿ ಧರ್ಮದರ್ಶಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಪಾಪಣ್ಣ ತಿಳಿಸಿದ್ದಾರೆ.
ಭಾವೈಕ್ಯತಾ ಪ್ರಶಸ್ತಿಗೆ ಆಯ್ಕೆ
ರಾಮನಗರ: ವಿಜಾಪುರದ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯಿಂದ ನೀಡಲಾಗುವ ರಾಜ್ಯ ಮಟ್ಟದ ಭಾವೈಕ್ಯತಾ ಪ್ರಶಸ್ತಿಗೆ ತಾಲೂಕಿನ ಯರೇಹಳ್ಳಿ ಗ್ರಾಮದ ರಂಗಭೂಮಿ ಕಲಾವಿದ ವೈ.ಎಸ್. ಸಿದ್ದರಾಮೇಗೌಡ ಆಯ್ಕೆಯಾಗಿದ್ದಾರೆ. ವಿಜಾಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮಾ.22 ಮತ್ತು ಮಾ.23 ರಂದು ನಡೆಯುವ ಸಂತ ಕನಕದಾಸ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಡಳಿಯ ಅಧ್ಯಕ್ಷ ಹಾಸಿಂಪೀರ ವಾಲಿಕಾರ ತಿಳಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಯಾಗಿರುವ ಸಿದ್ದರಾಮೇಗೌಡ ಅವರನ್ನು ಕಸಾಪ ಅಧ್ಯಕ್ಷ ಸಿದ್ದಲಿಂಗೇಗೌಡ ಅಭಿನಂದಿಸಿದ್ದಾರೆ.
ಇಂದು ಕವಿ ಕಾವ್ಯ ಸಮ್ಮೇಳನ
ನೆಲಮಂಗಲ: ವನಕಲ್ಲು ಮಲ್ಲೇಶ್ವರ ಮಠ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಗುರುವಾರ ಬೆಳಗ್ಗೆ 10-30ಕ್ಕೆ ವನಕಲ್ಲು ಮಠದಲ್ಲಿ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮೇಳನ-2013 ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ವನಕಲ್ಲು ಮಲ್ಲೇಶ್ವರ ಕ್ಷೇತ್ರದ ಕಾರ್ಯಾಧ್ಯಕ್ಷ ಬಸವರಮಾನಂದ ಸ್ವಾಮಿ, ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬೆಂ.ಗ್ರಾ.ಜಿ.ಕ.ಸಾ.ಪ ಅಧ್ಯಕ್ಷ ಹುಲಿಕಲ್ ನಟರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತತಿ ಡಾ.ಚಂದ್ರಶೇಖರ ಕಂಬಾರ ಉದ್ಘಾಟನೆ ನೆರವೇರಿಸಲಿದ್ದಾರೆ. ಕೇಂದ್ರ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.