'ಸ್ತೋತ್ರ ಪಠಣದಿಂದ ಮಾನಸಿಕ ನೆಮ್ಮದಿ'
ನೆಲಮಂಗಲ: ದೇವರ ಸ್ತೋತ್ರ ಪಠಿಸುವುದರಿಂದ ಮಾನವನಿಗೆ ತಗುಲಿರುವ ಅನೇಕ ರೋಗಗಳು ನಿವೃತ್ತಿಯಾಗುತ್ತದೆ ಮಾತ್ರವಲ್ಲ, ಮಾನಸಿಕ ನೆಮ್ಮದಿ ಲಭಿಸಲಿದೆ ಎಂದು ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ ಶಂಕರಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಪಟ್ಟಣದ ಸುಭಾಷ್ನಗರದ ವಿನಾಯಕ ದೇವಸ್ಥಾನದ ಆವರಣದಲ್ಲಿ ವೇದಾಂತ ಭಾರತೀ ಸಂಸ್ಥೆಯು ಹಮ್ಮಿಕೊಂಡಿದ್ದ ಆನಂದ ಸಿಂಧು ಸ್ತೋತ್ರ ಪಠಣ ಮಹಾಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಪಂಚದ ಸಮಸ್ತ ಜನರ ಸಕಲ ಚಟುವಟಿಕೆಗಳ ಕೊನೆಯ ಗುರಿ ಪರಮಾನಂದ ಮಾತ್ರ ಎಂಬುದು ತತ್ವಜ್ಞಾನಿಗಳ ಯುಕ್ತಿ ಮತ್ತು ಅನುಭವಗಳಿಂದ ಕಂಡುಕೊಂಡ ಸತ್ಯ ಎಂದರು. ಪ್ರತಿಯೊಂದು ಮನೆಯಲ್ಲಿ ತಾಯಂದಿರು ತಮ್ಮ ಕುಟುಂಬದ ಸದಸ್ಯರು, ದೇವರ ಸ್ತೋತ್ರಗಳನ್ನು ಪಠಿಸುವುದರಿಂದ ಉತ್ತಮ ಆರೋಗ್ಯ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ನುಡಿದರು.ವೇದಾಂತ ಭಾರತೀ ನಿರ್ದೇಶಕ ಡಾ.ಪಿ.ಸದಾನಂದಮಯ್ಯ, ಅಧ್ಯಕ್ಷೆ ವನಜಾಕ್ಷಿ, ಕಾರ್ಯದರ್ಶಿ ಲಲಿತ ಎನ್.ಸ್ವಾಮಿ, ಜ್ಯೋತಿ ಇದ್ದರು.