ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತಾ ಸಭೆ
ಕ.ಪ್ರ.ವಾರ್ತೆ, ರಾಮನಗರ, ಮಾ.21
ಏಪ್ರಿಲ್ 1ರಿಂದ 10ರವರೆಗೆ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅಧ್ಯಕ್ಷತೆಯಲ್ಲಿ ಬುಧವಾರ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಜರುಗಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅರ್ಚನಾ, ಪರೀಕ್ಷೆ ವಿಷಯದಲ್ಲಿ ಯಾವುದೇ ರೀತಿ ಲೋಪಕ್ಕೆ ಅವಕಾಶ ನೀಡಕೂಡದು. ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರಶ್ನೆ ಪತ್ರಿಕೆ ಬಹಿರಂಗ, ಸಾಮೂಹಿಕ ನಕಲು, ನಕಲಿ ವಿದ್ಯಾರ್ಥಿಗಳ ಹಾವಳಿ ಕುರಿತಂತೆ ಎಚ್ಚರ ವಹಿಸುವ ಮೂಲಕ ಜಿಲ್ಲೆಗೆ ಕೆಟ್ಟ ಹೆಸರು ಬರುವುದನ್ನು ತಡೆಯಬೇಕು. ಇಂತಹ ವಿಷಯದಲ್ಲಿ ವಿಫಲರಾಗುವ ಅಧಿಕಾರಿಗಳನ್ನೂ ಹೊಣೆಯಾಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
14 ಸಾವಿರ ಮಕ್ಕಳು: ಪ್ರಸಕ್ತ ಸಾಲಿನಲ್ಲಿ 4090 ಗಂಡು ಮಕ್ಕಳು ಮತ್ತು 7051 ಹೆಣ್ಣು ಮಕ್ಕಳು ಸೇರಿದಂತೆ 14141 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಅರ್ಚನಾ ತಿಳಿಸಿದರು. ಪರೀಕ್ಷೆ ತೆಗೆದುಕೊಂಡವರಲ್ಲಿ ಮಾಗಡಿ ತಾಲೂಕಿನಲ್ಲಿ 3080, ಕನಕಪುರದಲ್ಲಿ 4476, ರಾಮನಗರದಲ್ಲಿ 3454, ಚನ್ನಪಟ್ಟಣದಲ್ಲಿ 3131 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ ವಿದ್ಯಾರ್ಥಿಗಳಲ್ಲಿ ಪರಿಶಿಷ್ಟ ಜಾತಿಯ 2896, ಪರಿಶಿಷ್ಟ ಪಂಗಡದ 221 ವಿದ್ಯಾರ್ಥಿಗಳು ಸೇರಿದ್ದಾರೆ ಎಂದರು.
39 ಪರೀಕ್ಷಾ ಕೇಂದ್ರ: ಜಿಲ್ಲೆಯಲ್ಲಿ ಒಟ್ಟಾರೆ 39 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚನ್ನಪಟ್ಟಣ ಹಾಗೂ ಕನಕಪುರ ತಾಲೂಕುಗಳಲ್ಲಿ ತಲಾ 10, ರಾಮನಗರದಲ್ಲಿ 8, ಮಾಗಡಿಯಲ್ಲಿ 11 ಪರೀಕ್ಷಾ ಕೇಂದ್ರಗಳಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಹ್ಲಾದಗೌಡ ಹೇಳಿದರು. ಸೂಕ್ಷ್ಮ ಕೇಂದ್ರಗಳು: ರಾಮನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಉರ್ದು ಪ್ರೌಢಶಾಲೆ, ನೆಹರೂ ಹಿರಿಯ ಪ್ರಾಥಮಿಕ ಶಾಲೆ, ಕನಕಪುರ ತಾಲೂಕಿನ ಹಾರೋಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಮರಳವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಾತನೂರಿನ ಗ್ರಾಮಾಂತರ ಪ್ರೌಢಶಾಲೆ, ಮಾಗಡಿ ತಾಲೂಕು ಸೋಲುರಿನ ಬಸವೇಶ್ವರ ಪ್ರೌಢಶಾಲೆ ಹಾಗೂ ಭಗಿನಗೆರೆ ಗ್ರಾಮ ಸೇವಾ ನಿವಾಸಿತ ಪ್ರೌಢಶಾಲೆ ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ ಎಂದರು.
ಜಾಗೃತ ದಳ ರಚನೆ: ಜಿಲ್ಲೆಯಲ್ಲಿ ಅತಿಸೂಕ್ಷ್ಮ ಕೇಂದ್ರ ಒಂದೂ ಇಲ್ಲ. ಜಿಲ್ಲಾ ಮಟ್ಟದಲ್ಲಿ 2 ಜಾಗೃತದಳ, ತಾಲೂಕು ಮಟ್ಟದಲ್ಲಿ ತಲಾ ಒಂದು ಜಾಗೃತದಳ ರಚಿಸಲಾಗಿದೆ. ತಹಸೀಲ್ದಾರ್ ಮತ್ತು ತಾ.ಪಂ. ಇಒ ಕೂಡ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವರು. ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದವಿಲ್ಲ ಎಂದು ಪ್ರಹ್ಲಾದಗೌಡ ತಿಳಿಸಿದರು. ಕರ್ತವ್ಯಕ್ಕೆ ನಿಯುಕ್ತಿಗೊಂಡಿರುವ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು. ಗೈರಾಗುವುದು ಅಪರಾಧವಾಗುತ್ತದೆ. ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ ಸಿಬ್ಬಂದಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.