ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ: ಮಂಜುನಾಥ್ ವಿಶ್ವಾಸ
ವಿಜಯಪುರ: ಪಟ್ಟಣದ 16 ವಾರ್ಡುಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು ಸುಮಾರು ಶೇ. 52ರಷ್ಟು ಮತದಾರರು ಕಾಂಗ್ರೆಸ್ಗೆ ಆಶೀರ್ವದಿಸಿದ್ದಾರೆ. ಪ್ರತಿಯೊಬ್ಬ ಪುರಸಭಾ ಸದಸ್ಯರು ಪಕ್ಷವನ್ನು ಬೇರು ಮಟ್ಟದಿಂದ ಬಲಗೊಳಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಬರುವಂತೆ ಮಾಡಬೇಕು. ಇದು ಎಲ್ಲರ ಕರ್ತವ್ಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲವು ಸಾಧಿಸಿದ ಪುರಸಭಾ ಸದಸ್ಯರನ್ನು ಅಭಿನಂದಿಸುವ ಕಾರ್ಯಕ್ರಮ ಹಾಗೂ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಪಟ್ಟಣದಲ್ಲಿ ಚಲಾವಣೆಯಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಬಚ್ಚೇಗೌಡ ಮಾತನಾಡಿ ಇಂದಿನ ಬಿಜೆಪಿ ಸರ್ಕಾರದ ಅಡಳಿತ ವೈಖರಿ ಎಲ್ಲಾ ಜನ ಸಮಾನ್ಯರಿಗೆ ತಿಳಿದ ವಿಚಾರ, ಜೆಡಿಎಸ್ ಬಗ್ಗೆ ನಾವು ಹೇಳುವ ಹಾಗೆ ಇಲ್ಲ, ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ದೇವನಹಳ್ಳಿ ಕ್ಷೇತ್ರ ಶಾಸಕ ಕೆ.ವೆಂಕಟಸ್ವಾಮಿ ಇನ್ನು ಆರರಿಂದ ಏಳು ತಿಂಗಳಲ್ಲಿ ವಿಜಯಪುರ ಪಟ್ಟಣದಲ್ಲಿ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಆಗುವುದರಿಂದ ಇನ್ನೂ ಹೆಚ್ಚಿನ ಸಾರಿಗೆ ಸೌಕರ್ಯ ಸಿಗುವುದು. ರಾಜ್ಯ ಸರ್ಕಾರದ ವತಿಯಿಂದ ನಿವೇಶನಕ್ಕೆಂದು 15 ಎಕರೆ ಜಾಗ ದೊರೆತಿದ್ದು 1200 ಉಚಿತ ನಿವೇಶನಗಳು ದೊರೆಯಲಿವೆ. ಈಗಾಗಲೇ ಯುಐಡಿಎಸ್ಎಸ್ ಎಂಟಿ ಮೂಲಕ 11ಕೋಟಿ ರು.ಗಳ ಯೋಜನೆಯಡಿ ಪಟ್ಟಣದಲ್ಲಿ 68ಕೊಳವೆ ಬಾವಿಗಳನ್ನು ಕೊರೆದಿದ್ದು, ಅವುಗಳಿಗೆ ಪೈಪ್ ಲೈನ್ ಹಾಗೂ ಟ್ಯಾಂಕ್ಗಳನ್ನು ನಿರ್ಮಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಸತೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಮುನಿನರಸಿಂಹಯ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರಾಜಣ್ಣ, ಎಸ್ಸಿ ಘಟಕದ ಅಧ್ಯಕ್ಷ ಚಿನ್ನಪ್ಪ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಖಲಂದರ್ ಖಾನ್ ಅವರು ಪಕ್ಷದಿಂದ ಗೆದ್ದ ಪುರಸಭಾ ಸದಸ್ಯರನ್ನು ಅಭಿನಂದಿಸಿ ವಿಧಾನ ಸಭಾ ಚುನಾವಣೆಯ ಬಗ್ಗೆ ತಿಳಿಸಿದರು. ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ, ಪಟ್ಟಣ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಮುಬಾರಕ್ ಗೌಸ್ಖಾನ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಟರಾಜ್, ಮುನಿತಕೃಷ್ಣಪ್ಪ, ಟೌನ್ ಯುವ ಕಾಂಗ್ರೆಸ್ ಅಧ್ಯಕ್ಷ ಹರೀಶ್, ಕಾಂಗ್ರೆಸ್ ಹಿರಿಯ ಮುಖಂಡ ಚಿಕ್ಕರುದ್ರಪ್ಪ ಹಾಗೂ ಪಕ್ಷದಿಂದ ಗೆದ್ದ ಎಲ್ಲಾ ನೂತನ ಪುರಸಭಾ ಸದಸ್ಯರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಪುರಸಭೆ ನೂತನವಾಗಿ ಆಯ್ಕೆಯಾದ 16ಮಂದಿ ಸದಸ್ಯರು ಹಾಗೂ ಗೆಲವು ಸಾಧಿಸಲಾಗದಿದ್ದರೂ ಉತ್ತಮ ಪೈಪೋಟಿ ನೀಡಿದ 7ಪರಾಜಿತ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.