ಬಿಜೆಪಿ ರಣತಂತ್ರ ಸಮಾಲೋಚನೆ
ಕ.ಪ್ರ.ವಾರ್ತ್ಣೆ ರಾಮನಗರ ಮಾ.21
ಪೌರ ಸಂಸ್ಥೆಗಳ ಸೋಲಿನ ಪರಾಮರ್ಶೆಯೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಲವೃದ್ಧಿಗಾಗಿ ರಣತಂತ್ರ ಹೆಣೆಯುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಸ್ಥಳೀಯ ಮುಖಂಡರೊಟ್ಟಿಗೆ ನಗರದಲ್ಲಿ ಬುಧವಾರ ಸಮಾಲೋಚನೆ ನಡೆಸಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ರಾಮಚಂದ್ರಗೌಡ, ಬಿಜೆಪಿ ರಾಜ್ಯ ವಕ್ತಾರ ಮತ್ತು ಮೇಲ್ಮನೆ ಸದಸ್ಯ ಅಶ್ವಥನಾರಾಯಣ್ ಅವರು ಪಕ್ಷಕ್ಕೆ ಆಗಿರುವ ಧಕ್ಕೆ, ಮುಂದಿರುವ ಸವಾಲುಗಳ ಬಗ್ಗೆ ಸ್ಥಳೀಯ ಕಾರ್ಯಕರ್ತರಿಗೆ ಹಿತೋಪದೇಶ ನೀಡಿದರು.
ಅಭಿವೃದ್ಧಿ ಮಂತ್ರ: ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪಕ್ಷವು ಮುಂಬರುವ ಚುನಾವಣೆಯನ್ನು ಎದುರಿಸಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಅಣಿಗೊಳಿಸುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದು ಸಭೆಗೂ ಮುನ್ನ ಸುದ್ದಿಗಾರರಿಗೆ ಅಶ್ವತ್ಥನಾರಾಯನ್ ತಿಳಿಸಿದರು.
ನೀರಾವರಿ ಭರವಸೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಚನ್ನಪಟ್ಟಣದ ನೀರಾವರಿ ಯೋಜನೆಗಳಿಗೆ ಹೇರಳ ಅನುದಾನ ನೀಡಲಾಗಿದೆ. ಅಂತೆಯೇ ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮಂಚನಬಲೆಗೆ ಶಾಶ್ವತ ನೀರಾವರಿ ಕಲ್ಪಿಸಿ, ಅಲ್ಲಿಂದ ಮಾಗಡಿ ಮತ್ತು ರಾಮನಗರ ಕ್ಷೇತ್ರಗಳಿಗೂ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದರು.
ಅಭ್ಯರ್ಥಿಗಳ ಆಯ್ಕೆ: ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಬಯಸುವ ಆಕಾಂಕ್ಷಿತರು ಪಕ್ಷಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ, ಕೋರ್ ಕಮಿಟಿ ಮುಂದಿಡಲಾಗುತ್ತದೆ. ಅಲ್ಲಿ ಸಮರ್ಥ ಅಭ್ಯರ್ಥಿ ಆಯ್ಕೆಗೊಳಿಸಿ, ಪ್ರಕಟಿಸಲಾಗುತ್ತದೆ ಎಂದು ಅಶ್ವತ್ಥನಾರಾಯಣ್ ತಿಳಿಸಿದರು.
ರಾಮನಗರ ಜನತೆ ವಿಶಾಲ ಹೃದಯ ಹೊಂದಿದವರು. ಬೇರೆಡೆಯಿಂದ ಬಂದವರೂ ಇಲ್ಲಿ ಗೆದ್ದು, ರಾಜ್ಯದ ಗದ್ದುಗೆ ಹಿಡಿದಿದ್ದಾರೆ. ಇಲ್ಲಿ ಗೆದ್ದ 3 ಮಂದಿ ಮುಖ್ಯಮಂತ್ರಿ ಆಗಿದ್ದಾರೆ. ಈ ಬಾರಿ ಬಿಜೆಪಿಗೆ ಮತದಾರರು ಒಲಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ, ನಗರಸಭೆ ಸದಸ್ಯ ಬಿ.ನಾಗೇಶ್, ಮುಖಂಡರಾದ ಬಿ.ನಾಗರಾಜು, ಶಿವಮಾದು, ಪದ್ಮನಾಭ, ಮುರಳಿ, ಚಂದ್ರಪ್ರಭ, ಸಿ.ನಾಗರಾಜು ಹಾಜರಿದ್ದರು.
ನಾಮ್ಕೇ ವಾಸ್ತೆ: ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜವಬ್ದಾರಿಯನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ಎನ್ನುವುದು ಕೇವಲ ನಾಮ್ಕೇ ವಾಸ್ತೆ ಮಾತ್ರ ಎಂದು ಮಾಜಿ ಸಚಿವ ರಾಮಚಂದ್ರಗೌಡ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಹಾರಿಕೆ ಉತ್ತರ ನೀಡಿದರು. ಉಸ್ತುವಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ನಾಲ್ಕು ತಿಂಗಳಾದರೂ ಜಿಲ್ಲೆ ಕಡೆ ತಿರುಗಿ ನೋಡಿಲ್ಲ. ಜನರ ಬವಣೆಗಳನ್ನು ಕೇಳುವವರಿಲ್ಲ ಎನ್ನುವ ಪತ್ರಕರ್ತರ ಗಮನ ಸೆಳೆಯುವ ಪ್ರಶ್ನೆಗೆ ಅವರು, ಹಿಂದಿನ ಸರ್ಕಾರದಲ್ಲೂ ಹೀಗೇ ಆಗಿತ್ತು ಎಂದು ಜಿಲ್ಲೆ ಮರೆತ ರೇಣುಕಾಚಾರ್ಯ ಧೋರಣೆಯನ್ನು ಸಮರ್ಥಿಸಿಕೊಂಡರು. ಒಣ ಮರವಿದ್ದಂತೆ: ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಬಿಜೆಪಿ ಸೇರಿದ್ದವರು ಗುಳೆ ಹೊರಟ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಟ್ಟಡ ಕಟ್ಟುವಾಗ ಆರ್ಸಿಸಿ ಹಾಕಲು ಸೆಂಟ್ರಿಂಗ್ಗಾಗಿ ಸರ್ವೆ ಮರಗಳನ್ನು ತಂದು ನಿಲ್ಲಿಸಲಾಗುತ್ತದೆ. ಕಟ್ಟಡ ನಿರ್ಮಿಸಿದ ಮೇಲೆ ಆ ಒಣಗಿದ ಮರ ನಮಗೆ ಉಪಯೋಗವಿಲ್ಲ ಎಂದು ವ್ಯಾಖ್ಯಾನ ಮಾಡಿದರು.
ಉಪಯೋಗಿಸಿ ಬಿಚ್ಚೆಸೆದ ಸೆಂಟ್ರಿಂಗ್ ಮರಗಳನ್ನು ಹೆಚ್ಚೆಂದರೆ ಇನ್ನೊಂದು ಅಥವಾ ಎರಡು ಮನೆ ಕಟ್ಟಲು ಬಳಸಬಹುದು. ಅಷ್ಟರಲ್ಲಿ ಗೆದ್ದಲು ಹತ್ತಿದ ಮರಗಳು ನಿರುಪಯುಕ್ತವಾಗಲಿದ್ದು, ಬೆಂಕಿಗೆ ಹಾಕಲಷ್ಟೇ ಲಾಯಕ್ಕು ಎಂದು ಛೇಡಿಸಿದರು.
ತಕ್ಕಪಾಠ ಕಲಿಸಿದ್ದಾರೆ: ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದಿಂದ ದೊರಕಿದ ನೀರಾವರಿ ಕೊಡುಗೆಯನ್ನು ತನ್ನ ಸ್ವಂತದ್ದೆಂದು ಬಿಂಬಿಸಿಕೊಳ್ಳುತ್ತಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ನಗರಸಭೆ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಿದ್ದಾರೆ ಎಂದು ಅಶ್ವತ್ಥನಾರಾಯಣ್ ಟೀಕಿಸಿದರು.
ಆ ಕ್ಷೇತ್ರದ ನೀರಾವರಿ ಯೋಜನೆ ಬಿಜೆಪಿಯದ್ದೇ ಹೊರತು ಬೇರೆ ಯಾವ ವ್ಯಕ್ತಿ ಅಥವಾ ಶಕ್ತಿಯದ್ದಲ್ಲ. ಚನ್ನಪಟ್ಟಣದ ಮತದಾರರಿಗೆ ನಿಜ ಸಂಗತಿ ತಿಳಿದಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಪರವಾಗಿ ಅಲ್ಲಿನ ಮತದಾರರು ತೀರ್ಪು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.