ಮಾದರಿ ನೀತಿ ಸಂಹಿತೆ ಪಾಲನೆಗೆ ಒತ್ತು ನೀಡಿ
ಕ.ಪ್ರ.ವಾರ್ತೆ ರಾಮನಗರ ಮಾ.21 ಪೌರ ಸಂಸ್ಥೆಗಳ ಚುನಾವಣೆ ನಿಭಾಯಿಸುವಲ್ಲಿ ವೈಫಲ್ಯ ಕಂಡಿದ್ದ ಜಿಲ್ಲಾಡಳಿತವು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಎಚ್ಚೆತ್ತುಕೊಂಡಿದೆ. ಚುನಾವಣೆ ಘೋಷಣೆ ಬೆನ್ನಲ್ಲೇ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಮಾದರಿ ನೀತಿ ಸಂಹಿತೆ ಪಾಲನೆಗೆ ಒತ್ತು ನೀಡುವಂತೆ ತಾಕೀತು ಮಾಡಿದ್ದಾರೆ.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಕಂದಾಯ, ಪೊಲೀಸ್ ಮತ್ತು ಚುನಾವಣೆ ಶಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಪಾಲನೆಯಲ್ಲಿ ವಿಫಲರಾಗುವ ಮತ್ತು ಮಾರ್ಗಸೂಚಿ ಪಾಲಿಸದ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ಮಾ.20ರಂದೇ ಚುನಾವಣೆ ಘೋಷಿಸಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿರುವ ಮಾದರಿ ನೀತಿ ಸಂಹಿತೆ ಮೇ. 11ರವರೆಗೂ ಇರುತ್ತದೆ. ಅಧಿಕಾರಿ ಮತ್ತು ಸಿಬ್ಬಂದಿ ಕಟ್ಟುನಿಟ್ಟಿನ ಸದಾಚಾರ ಸಂಹಿತೆಯನ್ನು ಪಾಲಿಸಬೇಕಿರುತ್ತದೆ. ಉಲ್ಲಂಘಿಸುವವರ ವಿರುದ್ಧ ಪ್ರಜಾಪ್ರತಿನಿಧಿ ನಿಯಮ 1950 ಪ್ರಕರಣ 134ರಂತೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಎಚ್ಚರಿಕೆಯ ಸಂದೇಶ: ಜಿಲ್ಲೆಯ ಎಲ್ಲ ಅಧಿಕಾರಿ, ನೌಕರರು ನೀತಿ ಸಂಹಿತಿ ಅವಧಿಯಲ್ಲಿ ಯಾವುದೇ ರಜೆ ಪಡೆಯುವಂತಿಲ್ಲ. ಅನಿವಾಯಎ ಪರಿಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯ ಅನುಮತಿ ಅಗತ್ಯ. ಯಾವುದೇ ಕಾರಣಕ್ಕೂ ಮೊಬೈಲ್ ದೂರವಾಣಿಯನ್ನು ಸ್ವಿಚ್ ಆಫ್ ಮಾಡಕೂಡದು ಎಂದು ಶ್ರೀರಾಮರೆಡ್ಡಿ ನಿರ್ದೇಶನ ನೀಡಿದರು.
ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಇಟ್ಟುಕೊಳ್ಳಕೂಡದು. ರಾಜಕೀಯ ಪಕ್ಷಗಳು ಏರ್ಪಡಿಸುವ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ. ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಅಧಿಕಾರಿ, ನೌಕರರು ಚುನಾವಣಾ ಕರ್ತವ್ಯದಿಂದ ಬಿಡುಗಡೆಗೆ ಒತ್ತಾಯಿಸಕೂಡದು ಎಂದು ಅವರು ಆದೇಶಿಸಿದರು.
ಸಬೂಬು ಬೇಡ: ಸರ್ಕಾರಿ ವಾಹನಗಳನ್ನು ಹೊಂದಿರುವ ಅಧಿಕಾರಿಗಳು ಇಲಾಖೆಯ ವಾಹನಗಳನ್ನು
ಸುಸ್ಥಿತಿಯಲ್ಲಿಟ್ಟುಕೊಂಡು, ಚುನಾವಣಾ ಕೆಲಸಕ್ಕೆ ನಿಯೋಜಿಸಿದಾಗ ಸಬೂಬು ಹೇಳದೆ ಹಾಜರಾಗಬೇಕು ಎಂದು ಅವರು ತಿಳಿಸಿದರು.
ಮತದಾನ ಕೇಂದ್ರಗಳನ್ನು ಸ್ಥಾಪಿಸುವ ಕಟ್ಟಡಗಳಲ್ಲಿ ಅಗತ್ಯವಾದ ರ್ಯಾಂಪ್, ಕಿಟಕಿ, ಬಾಗಿಲು, ಚಾವಣಿ ಸೇರಿದಂತೆ ಇತರೆ ದುರಸ್ಥಿ ಕಾರ್ಯಗಳನ್ನು ಕೂಡಲೆ ಇಲಾಖೆಯ ಅನುದಾನದಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.
ನೀತಿ ಸಂಹಿತೆ ವ್ಯಾಪ್ತಿಗೆ ಒಳಪಡುವ ಅಧಿಕಾರೇತರ ಸದಸ್ಯರು ತಾವು ಬಳಸುತ್ತಿರುವ ಸರ್ಕಾರಿ ವಾಹನಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ವಶಕ್ಕೂ, ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ಗಳ ವಶಕ್ಕೂ ಕೂಡಲೇ ಒಪ್ಪಿಸಬೇಕು. ಸರ್ಕಾರಿ ವಸತಿ ಗೃಹ, ಪ್ರವಾಸಿ ಮಂದಿರ ಇತ್ಯಾದಿಗಳನ್ನು ಆಯಾ ವ್ಯಾಪ್ತಿಯ ತಹಸೀಲ್ದಾರ್ಗಳು ವಶಕ್ಕೆ ಪಡೆಯಬೇಕು ಎಂದರು.
ಸಭೆಗೆ ಆಹ್ವಾನ ಸಲ್ಲದು: ಯಾವುದೇ ಸರ್ಕಾರಿ ಸಭೆ, ಸಮಾರಂಭಗಳಿಗೆ ರಾಜಕೀಯ ವ್ಯಕ್ತಿ, ಮುಖಂಡರು, ಪ್ರತಿನಿಧಿಗಳು, ಮಂತ್ರಿಗಳು, ಶಾಸಕರನ್ನು ಆಹ್ವಾನಿಸುವಂತಿಲ್ಲ. ಯಾವುದೇ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ, ಕಾಮಗಾರಿ ಹಾಗೂ ಟೆಂಡರ್ಗಳನ್ನು ಪ್ರಾರಂಭಿಸುವುದಕ್ಕೆ ಆಸ್ಪದವಿಲ್ಲ ಎಂದು ಶ್ರೀರಾಮರೆಡ್ಡಿ ಸೂಚಿಸಿದರು.
ನಗರ ಮತ್ತು ಗ್ರಾಮಾಂತರ ಸಂಸ್ಥೆಗಳ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ವಿರೂಪಗೊಳಿಸಬಾರದು. ಭಿತ್ತಿಪತ್ರ, ಬ್ಯಾನರ್, ಕಟೌಟ್, ಬಂಟಿಂಗ್ಸ್, ಗೋಡೆ ಬರಹಗಳನ್ನು ಕೂಡಲೇ ತೆರವುಗೊಳಿಸಬೇಕು.
ದೇವಾಲಯ, ಚರ್ಚ್, ಮಸೀದಿಗಳಲ್ಲಿ ಚುನಾವಣಾ ಸಂಬಂಧಿತ ಪ್ರಚಾರ ನಡೆಸಲು ಬಿಡಬಾರದು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಉಪ ವಿಭಾಗಾಧಿಕಾರಿ ಡಾ.ಸ್ನೇಹಾ, ಡಿವೈಎಸ್ಪಿ ರಾಮಕೃಷ್ಣಪ್ಪ ಇತರರು ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.