ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮನೆಮಗಳನ್ನು ಬೆಂಬಲಿಸಿ: ಅನಿತಾ ಮನವಿ

Parashurama
Updated On : 26 Mar 2013, 12:36 pm

ಕಪ್ರ ವಾರ್ತೆ ಚನ್ನಪಟ್ಟಣ ಮಾ. 25 ನಮ್ಮ ಕುಟುಂಬಕ್ಕೆ ರಾಜಕೀಯ ಶಕ್ತಿ ತುಂಬಿರುವ ಈ ಕರ್ಮಭೂಮಿಯ  ಪಕ್ಷದ ಕಾರ್ಯಕರ್ತರು ಅನುಭವಿಸುತ್ತಾ ಬಂದಿರುವ ನೋವನ್ನು ಕೊನೆಗಾಣಿಸುವ ಉದ್ದೇಶದಿಂದ ವರಿಷ್ಠರು ನನನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಅನಿತಾಕುಮಾರಸ್ವಾಮಿ ತಿಳಿಸಿದರು.
ಸೋಮವಾರ ತಾಲೂಕಿನ ಬಿ.ವಿ.ಹಳ್ಳಿ, ಭೂಹಳ್ಳಿ, ಸಿಂಗರಾಜಿಪುರ, ದ್ಯಾವಾಪಟ್ಟಣ ಸೇರಿದಂತೆ ವಿವಿಧ ಹಳ್ಳಿಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆ ನಡೆಸಿದ ಅವರು, ಕಳೆದ 12 ವರ್ಷಗಳಿಂದ ಇಲ್ಲಿನ ಕಾರ್ಯಕರ್ತರ ಸಮಸ್ಯೆ ನನಗೆ ಗೊತ್ತಿದೆ. ಜೆಡಿಎಸ್‌ಗೆ 1994ರ ದಿನಗಳು ಮರುಕಳಿಸಲಿದ್ದು ನೀವೆಲ್ಲ ಉತ್ಸಾಹದಿಂದ ಚುನಾವಣೆಗೆ ಸಿದ್ಧರಾಗಿ ಎಂದು ಕರೆ ನೀಡಿದರು.
ನಾನು ಮನೆಮಗಳು: ನನ್ನ ತಂದೆ ವೈದ್ಯರಾಗಿ ಈ ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದಾರೆ, ನನ್ನ ಬಾಲ್ಯ, ಶಾಲಾದಿನಗಳನ್ನು ನಾನು ಈ  ನೆಲದಲ್ಲೇ ಕಳೆದಿದ್ದೇನೆ, ನಾನು ನಿಮ್ಮವಳು ನಿಮ್ಮ ಮನೆಮಗಳು ಎಂದ ಅವರು, ಈ ತಾಲೂಕಿನ ಜನತೆಯ ಸೇವೆ ಮಾಡುವ ಆಕಾಂಕ್ಷೆಯೊಂದಿಗೆ ಸ್ಪರ್ಧಿಸುತ್ತಿದ್ದೇನೆ ಎಂದರು.
ಕ್ಷೇತ್ರದ ಜನತೆ ಕೂಡ ನನ್ನನ್ನ ಮನೆಮಗಳಂತೆ ಭಾವಿಸಿ ಪ್ರೀತಿ ತೋರಿಸುತ್ತಿದ್ದಾರೆ. ದೇವೇಗೌಡರಿಗೆ  ಈ ಕ್ಷೇತ್ರದ ಬಗ್ಗೆ ಅಪಾರವಾದ ಕಾಳಜಿ ಇದ್ದು, ಅವರು ಲೋಕೋಪಯೋಗಿ ಸಚಿವರಾಗಿದ್ದ ಸಮಯದಲ್ಲೇ ಇಲ್ಲಿನ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇಗ್ಗಲೂರು ಬ್ಯಾರೇಜ್ ನಿರ್ಮಾಣ ಮಾಡಿದರು. ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಪಕ್ಷ ಅಪಾರ ಕೊಡುಗೆ ನೀಡಿದ್ದು ಇದನ್ನೇ ಮುಂದುವರೆಸುವ  ಹೆಗ್ಗುರಿಯೊಂದಿಗೆ ಈ ಕ್ಷೇತ್ರವನ್ನು ಆಯ್ದುಕೊಂಡಿರುವುದಾಗಿ ಅವರು ತಿಳಿಸಿದರು.
ದೇವೇಗೌಡರ ಮಾರ್ಗದರ್ಶನದಲ್ಲಿ ಈಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸುತ್ತೇನೆ. ಇದಕ್ಕೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಕ್ಷೇತ್ರದ ಮತದಾರರು ಮನಸ್ಸು ಮಾಡಬೇಕೆಂದು ಮನವಿ ಮಾಡಿದರು.
ಶಾಶ್ವತ ನೀರಾವರಿ ನಮ್ಮಿಂದ ಮಾತ್ರ ಸಾಧ್ಯ: ಈಕ್ಷೇತ್ರದ ಮಾಜಿ ಶಾಸಕರು ಖಾಲಿ ಕೆರೆಗಳಿಗೆ ಭೂಮಿ ಪೂಜೆ ಮಾಡಿ ನೀರು ಹರಿಸುವ ಪೊಳ್ಳು ಭರವಸೆಯನ್ನ ನೀಡುತ್ತಿದ್ದಾರೆ. ಬರದಿಂದ ಬಸವಳಿದಿರುವ ರೈತರ ಬದುಕನ್ನ ಹಸನುಗೊಳಿಸುವ ಸಲುವಾಗಿ ದೇವೇಗೌಡರು ಮಾಡಿದ ನೀರಾವರಿ ಯೋಜನೆಯನ್ನ ಮುಂದುವರೆಸಿದ್ದೇನೆಂದು ಸುಳ್ಳಿನ ಕಂತೆ ಕಟ್ಟಿದ್ದಾರೆ. ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕಾದರೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರಿಂದ ಮಾತ್ರ ಸಾಧ್ಯ ಎಂದರು.
ಬಯಲು ಸೀಮೆ ಪ್ರದೇಶವಾದ ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಹಲವಾರು ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ಈಗಾಗಲೇ ಯೋಜನೆಯನ್ನ ರೂಪಿಸಲಾಗಿದೆ. ಆದ್ದರಿಂದ ಜನತೆ ಅಭಿವೃದ್ಧಿಗಾಗಿ ಜೆಡಿಎಸ್‌ಗೆ ಆಶೀರ್ವಾದ ಮಾಡಿ ಅಧಿಕಾರಕ್ಕೆ ತರಬೇಕೆಂದು  ಮನವಿ ಮಾಡಿದರು.
ಪಕ್ಷಾಂತರ : ಅನಿತಾಕುಮಾರಸ್ವಾಮಿ ಸಮ್ಮುಖದಲ್ಲಿ ಹಲವಾರು ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಂಗಸ್ವಾಮಿ, ಸಿಂಗರಾಜಿಪುರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುಲಿಂಗೇಗೌಡ, ಮುರಾರಿ ಮತ್ತು ಶಂಕರಣ್ಣ ವಿಟ್ಲೇನಹಳ್ಳಿ ನಾಗೇಶ್, ಮಹೇಶ್ ದ್ಯಾವಾಪಟ್ಟಣ, ಯತಿರಾಜ್ ಸೇರಿದಂತೆ ಹಲವಾರು ಮುಖಂಡರು ಜೆಡೆಎಸ್‌ಗೆ ಸೇರ್ಪಡೆಗೊಂಡರು. ಬಿ.ವಿ.ಹಳ್ಳಿ, ಭೂಹಳ್ಳಿ, ಸಿಂಗರಾಜಿಪುರ ಗ್ರಾಮಗಳಲ್ಲಿ ಸೇರಿದ್ದ ಕಾರ್ಯಕರ್ತರು, ಮುಖಂಡರು ಮತ್ತು ಜನತೆ ಜೆಡಿಎಸ್‌ಗೆ ಮತನೀಡಿ ಜಯಶೀಲರನ್ನಾಗಿಸುತ್ತೇವೆಂದು ವಾಗ್ದಾನ ವಿತ್ತರು.
ಈ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್,  ಜಿ.ಪಂ. ಸದಸ್ಯೆ ಸುಧಾರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ರಳ್ಳಿ ರಾಜಣ್ಣ, ಸಿಂ.ಲಿಂ.ನಾಗರಾಜ್,  ಎಂ.ಜಿ.ಕೆ.ಪ್ರಕಾಶ್, ತಾ.ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶಿಷ್, ತಾ.ಪಂ.ಸದಸ್ಯರಾದ ಭಾನುಪ್ರಕಾಶ್, ಮಾರೇಗೌಡ, ಡಿ.ಕೆ.ಕಾಂತರಾಜ್, ಮಾಸ್ತಿಚಂದ್ರು, ಮುದಿಗೆರೆ ಜೆ.ಕೆ, ಶಿವಪ್ಪ, ಗಿರೀಶ್ ಬಾಬು, ಜೆಸಿಬಿ ಲೋಕೇಶ್, ರೇಖಾ ಉಮಾಶಂಕರ್, ಇಂದಿರಮ್ಮ, ಶಿವಮಲ್ಲಯ್ಯ, ಈಶ್ವರಪ್ಪ, ಮಹೇಶ್, ಸಿ.ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments