ಮಹಾಜನಸಭಾ ವತಿಯಿಂದ ಕಾಮನಹಬ್ಬ
ಕನಕಪುರ: ಕನಕಪುರದ ದೇಶಪೇಟೆ ಮಹಾಜನಸಭಾ ವತಿಯಿಂದ ಕಾಮನಹಬ್ಬ ಸಮಾರಂಭ ಇಲ್ಲಿನ ಪೇಟೆ ಕಾಮನಗುಡಿ ಬೀದಿಯಲ್ಲಿ ಪ್ರಾರಂಭವಾಯಿತು. ವಿದ್ಯುಕ್ತವಾದ ಪೂಜೆ ಪುನಸ್ಕಾರಗಳನ್ನು ಪುರೋಹಿತ ರಾಚೂಟಪ್ಪ ನೆರವೇರಿಸಿದರು. ಕಾಮನ ಪ್ರತಿಷ್ಠಾಪನೆ ಅಂಗವಾಗಿ ಗಣಹೋಮ, ನವಗ್ರಹಹೋಮ ಮೊದಲಾದವು ನಡೆದವು. ಹೋಳಿಹುಣ್ಣಿಮೆವರೆಗೆ ಒಂದುವಾರ ಕಾಲ ರತಿ ಮನ್ಮಥರನ್ನು ವಿವಿಧ ಅಲಂಕಾರಗಳಲ್ಲಿ ಸಿಂಗರಿಸಿ, ಭಕ್ಷ್ಯಭೋಜ್ಯಗಳ ನೈವೇದ್ಯ ಸಮರ್ಪಿಸಿ ಪೂಜಿಸಲಾಗುವುದು. ನಗರದ ಮಕ್ಕಳನ್ನು ಕರೆತಂದು ಆಶೀರ್ವಾದ ನೀಡಿಸಲಾಗುವುದು. ಹುಣ್ಣಿಮೆಯಂದು ಕಾಮದಹನ ನಡೆಯಲಿದ್ದು, ಮರುದಿನ ಬೆಳಗ್ಗೆ ಬಣ್ಣದ ಓಕುಳಿಯಾಟ ನಡೆಯಲಿದೆ. ಅಂದು ರಾತ್ರಿ ರತೀದೇವಿ ಮೆರವಣಿಗೆ ನಡೆಯುತ್ತದೆ. ಕಾಮದಹನದಂದು ವಿವಿಧ ವೇಷಧಾರಿಗಳು ಪ್ರದರ್ಶನ ನೀಡಲಿದ್ದಾರೆ. ಗರಡೀಮನೆ ಪೈಲ್ವಾನರುಗಳು ಗರಡಿ ಶಕ್ತಿಪ್ರದರ್ಶನ, ಜಾನಪದ ಕಲಾಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿ ನಿರ್ದೇಶಕ ಶೆಟ್ಟಿಬಾಬು ಕೋರಿದ್ದಾರೆ. ದೇಶಪೇಟೆ ಸಭೆಯ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಚನ್ನಮಲ್ಲಶೆಟ್ಟಿ, ಖಜಾಂಚಿ ಸುರೇಶ್, ನಿರ್ದೇಶಕರಾದ ಧನಂಜಯ, ರಾಮಣ್ಣ, ಶಿವಾನಂದ ರೇಣುಕ, ಪುಟ್ಟಣ್ಣ, ಈಶ್ವರ, ಜಯಕರ್ನಾಟಕ ಆನಂದ್ ಮೊದಲಾದವರು ಪಾಲ್ಗೊಂಡಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.