ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಲೋಡ್ ಶೆಡ್ಡಿಂಗ್ ಶುರು

Parashurama
Updated On : 26 Mar 2013, 1:06 am

ಕ.ಪ್ರ. ವಾರ್ತೆ ರಾಮನಗರ ಮಾ.25
ಬೇಸಿಗೆಯ ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆಯೇ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಹಾವಳಿಯೂ ಹೆಚ್ಚಿದೆ. ಹಗಲು ತ್ರೀಫೇಸ್ ವಿದ್ಯುತ್ ಪೂರೈಕೆಯನ್ನು 2 ತಾಸಿಗೆ ಸೀಮಿತಗೊಳಿಸಿ, ರಾತ್ರಿ 3 ತಾಸು ಪೂರೈಕೆಯೊಂದಿಗೆ ಅವಾಂತರ ತಂದೊಡ್ಡಿದೆ. ಗ್ರಾಮೀಣ ಪ್ರದೇಶದಲ್ಲಿ 6 ತಾಸು ತ್ರೀಫೇಸ್ ಮತ್ತು 12 ತಾಸು ಸಿಂಗಲ್ ಫೇಸ್ ವಿದ್ಯುತ್ ಪೂರೈಸುವ ಭರವಸೆ ಜಾರಿಯಾಗಿಲ್ಲ. ತ್ರೀಫೇಸ್ ವಿದ್ಯುತ್ ಪೂರೈಕೆಯನ್ನು 5 ತಾಸಿಗೆ ಇಳಿಸಲಾಗಿದ್ದು, ಸಿಂಗಲ್ ಫೇಸ್ ಪೂರೈಕೆಯಲ್ಲೂ 2-3 ತಾಸಿನಷ್ಟು ಕಡಿತದ ಸಮಸ್ಯೆ ತಲೆದೋರಿದೆ.
ರೈತರಿಗೆ ಗಂಡಾಂತರ: ಬೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ತಂದಿರುವ ಬದಲಾವಣೆಯಿಂದ ಗ್ರಾಮೀಣ ಭಾಗದಲ್ಲಿ ರೈತರಿಗೆ ದೊಡ್ಡ ಗಂಡಾಂತರ ಎದುರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಗಲು 12 ತಾಸಿನ ಪೈಕಿ ವಿದ್ಯುತ್ ಪೂರೈಕೆ 2 ತಾಸು ಮಾತ್ರವೇ ಇರುತ್ತದೆ.
ಇಷ್ಟು ಕಡಿಮೆ ಅವಧಿಯಲ್ಲೂ 2-3 ಬಾರಿ ಟ್ರಿಪ್ ಆಗುವುದು ಇದ್ದೇ ಇದೆ. ಬೇಸಾಯಗಾರರು ರಾತ್ರಿ ಸಿಗುವ 3 ತಾಸಿನ ತ್ರೀಫೇಸ್ ವಿದ್ಯುತ್ ಬಳಸಿಕೊಂಡು, ಕೃಷಿ ಪಂಪ್‌ಸೆಟ್‌ಗಳಿಂದ ನೀರು ಹಾಯಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ.
ರೈತರಿಗೆ ಭೀತಿ: ಸಿಂಗಲ್ ಫೇಸ್‌ನಲ್ಲೂ ಕೃಷಿ ಪಂಪ್ ಸೆಟ್‌ಗಳನ್ನು ಚಾಲನೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಸಂಜೆ 6 ರಿಂದ ರಾತ್ರಿ 10ರವರೆಗೆ ಓಪನ್ ಡೆಲ್ಟಾ ವ್ಯವಸ್ಥೆ ತಂದು, ಮೋಟಾರ್ ಪಂಪ್‌ಗಳು ಚಾಲನೆಗೊಳ್ಳದಂತೆ ಮಾಡಲಾಗಿದೆ. ಇದೀಗ ನಡು ರಾತ್ರಿ 3 ತಾಸು ಪಂಪ್‌ಸೆಟ್‌ಗಳು ಚಾಲನೆಯಾಗುತ್ತಿವೆ.
ಹೇಗೂ ರೈತರು ರಾತ್ರಿಯಲ್ಲಿ ಗುದ್ದಲಿ ಹಿಡಿದು, ಬೆಳೆಗಳಿಗೆ ನೀರು ಹಾಯಿಸಲಾಗದು. ಟ್ಯಾಂಕ್‌ಗಳನ್ನು ನಿರ್ಮಿಸಿಕೊಂಡ ರೈತರು ಮಾತ್ರವೇ ರಾತ್ರಿ ನೀರನ್ನು ತುಂಬಿಸಿಕೊಂಡು, ಬೆಳಗ್ಗೆಯಾಗುತ್ತಲೇ ಬೆಳೆಗಳಿಗೆ ಹಾಯಿಸಿಕೊಳ್ಳಬಹುದು. ಆದರೆ, ಟ್ಯಾಂಕ್ ಕಟ್ಟಿಕೊಳ್ಳದವರ  ನೀರು ಪೋಲಾಗುತ್ತಿದೆ.
ನಡುರಾತ್ರಿ ಕೊಡ : ಅಲ್ಪನಿಗೆ ಐಶ್ವರ್ಯ ಬಂದ್ರೆ ನಡುರಾತ್ರಿ ಕೊಡೆ ಹಿಡಿದ ಎನ್ನುವ ಗಾದೆ ಮಾತಿದೆ. ಆದರೆ, ಈಗ ಭೀಕರ ಬರದಿಂದ ಕುಡಿಯುವ ನೀರಿಗೆ ಪಡಬಾರದು ಪಾಡುಪಡುತ್ತಿರುವ ಗ್ರಾಮೀಣ ಜನರು ನಡುರಾತ್ರಿ ಕೊಡ ಹಿಡಿದು ತೋಟ-ತುಡಿಕೆಗಳಲ್ಲಿರುವ ಕೊಳವೆ ಬಾವಿಗಳತ್ತ ಹೋಗುತ್ತಿದ್ದಾರೆ.
ಸಾಗುವ ಹಾದಿಯಲ್ಲಿ ಕಲ್ಲು, ಮುಳ್ಳು, ಹಾವು, ಚೇಳುಗಳ ಕಾಟವಿದೆ. ಬೆಟ್ಟ-ಗುಡ್ಡ, ಕಾಡಿನಿಂದ ಆವರಿಸಿರುವ ಈ ಜಿಲ್ಲೆಯ ಬಹುತೇಕ ಕಡೆ ಕರಡಿ, ಚಿರತೆ, ಆನೆ, ಕಾಡು ಹಂದಿಗಳ ಹಾವಳಿಯೂ ಉಂಟು. ಕೊಡ ನೀರಿಗಾಗಿ ಹೋದವರು ಪ್ರಾಣವನ್ನು ಮುಷ್ಟಿಯಲ್ಲಿಟ್ಟುಕೊಳ್ಳುವ ಸ್ಥಿತಿ ಇದೆ.
ಗಂಭೀರ ಸಮಸ್ಯೆ: ರಾತ್ರಿ ನೀರು ತರಲು ಕೊಡ ಹಿಡಿದು ಕೆಲವರು ಆಯತಪ್ಪಿ ಬಿದ್ದು, ಗಾಯಗೊಂಡಿದ್ದಾರೆ. ಈ ಪೈಕಿ ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿಯ ಸರೋಜಮ್ಮ ಪ್ರಕರಣ ತಾಜಾ ನಿದರ್ಶನ. ನೀರು ತರಲು ಹೋಗಿ ಬಾವಿಗೆ ಬಿದ್ದ ಆಕೆ ಗಂಭೀರ ಗಾಯಗಳೊಂದಿಗೆ ನರಳುತ್ತಿದ್ದಾರೆ.  ಬೆಸ್ಕಾಂ ಧೋರಣೆಯಿಂದ ಅದೆಷ್ಟೋ ಗ್ರಾ.ಪಂ.ಗಳು ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲಾಗದೆ ಜನರ ಶಾಪಕ್ಕೆ ಗುರಿಯಾಗಿವೆ. ಗ್ರಾಮೀಣ ಭಾಗಕ್ಕೆ ಈ ಹಿಂದೆ ನೀಡುತ್ತಿದ್ದಂತೆ ಹಗಲು 4 ಮತ್ತು ರಾತ್ರಿ 2 ತಾಸು ತ್ರೀಫೇಸ್ ವಿದ್ಯುತ್ ಪೂರೈಸಬೇಕೆನ್ನುವ ಒತ್ತಡ ಹೆಚ್ಚಿದೆ. ಈ ನಿಟ್ಟಿನಲ್ಲಿ  ಮತ್ತೊಂದು ಹೋರಾಟಕ್ಕೆ ರೈತರು ಸಜ್ಜಾಗುವ ಸಾಧ್ಯತೆ ಇದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments