ಲೋಡ್ ಶೆಡ್ಡಿಂಗ್ ಹಾವಳಿ ಶುರು
ಕ.ಪ್ರ. ವಾರ್ತೆ ರಾಮನಗರ ಮಾ.25
ಬೇಸಿಗೆಯ ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆಯೇ ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಹಾವಳಿಯೂ ಹೆಚ್ಚಿದೆ. ಹಗಲು ತ್ರೀಫೇಸ್ ವಿದ್ಯುತ್ ಪೂರೈಕೆಯನ್ನು 2 ತಾಸಿಗೆ ಸೀಮಿತಗೊಳಿಸಿ, ರಾತ್ರಿ 3 ತಾಸು ಪೂರೈಕೆಯೊಂದಿಗೆ ಅವಾಂತರ ತಂದೊಡ್ಡಿದೆ. ಗ್ರಾಮೀಣ ಪ್ರದೇಶದಲ್ಲಿ 6 ತಾಸು ತ್ರೀಫೇಸ್ ಮತ್ತು 12 ತಾಸು ಸಿಂಗಲ್ ಫೇಸ್ ವಿದ್ಯುತ್ ಪೂರೈಸುವ ಭರವಸೆ ಜಾರಿಯಾಗಿಲ್ಲ. ತ್ರೀಫೇಸ್ ವಿದ್ಯುತ್ ಪೂರೈಕೆಯನ್ನು 5 ತಾಸಿಗೆ ಇಳಿಸಲಾಗಿದ್ದು, ಸಿಂಗಲ್ ಫೇಸ್ ಪೂರೈಕೆಯಲ್ಲೂ 2-3 ತಾಸಿನಷ್ಟು ಕಡಿತದ ಸಮಸ್ಯೆ ತಲೆದೋರಿದೆ.
ರೈತರಿಗೆ ಗಂಡಾಂತರ: ಬೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ತಂದಿರುವ ಬದಲಾವಣೆಯಿಂದ ಗ್ರಾಮೀಣ ಭಾಗದಲ್ಲಿ ರೈತರಿಗೆ ದೊಡ್ಡ ಗಂಡಾಂತರ ಎದುರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಗಲು 12 ತಾಸಿನ ಪೈಕಿ ವಿದ್ಯುತ್ ಪೂರೈಕೆ 2 ತಾಸು ಮಾತ್ರವೇ ಇರುತ್ತದೆ.
ಇಷ್ಟು ಕಡಿಮೆ ಅವಧಿಯಲ್ಲೂ 2-3 ಬಾರಿ ಟ್ರಿಪ್ ಆಗುವುದು ಇದ್ದೇ ಇದೆ. ಬೇಸಾಯಗಾರರು ರಾತ್ರಿ ಸಿಗುವ 3 ತಾಸಿನ ತ್ರೀಫೇಸ್ ವಿದ್ಯುತ್ ಬಳಸಿಕೊಂಡು, ಕೃಷಿ ಪಂಪ್ಸೆಟ್ಗಳಿಂದ ನೀರು ಹಾಯಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ.
ರೈತರಿಗೆ ಭೀತಿ: ಸಿಂಗಲ್ ಫೇಸ್ನಲ್ಲೂ ಕೃಷಿ ಪಂಪ್ ಸೆಟ್ಗಳನ್ನು ಚಾಲನೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಸಂಜೆ 6 ರಿಂದ ರಾತ್ರಿ 10ರವರೆಗೆ ಓಪನ್ ಡೆಲ್ಟಾ ವ್ಯವಸ್ಥೆ ತಂದು, ಮೋಟಾರ್ ಪಂಪ್ಗಳು ಚಾಲನೆಗೊಳ್ಳದಂತೆ ಮಾಡಲಾಗಿದೆ. ಇದೀಗ ನಡು ರಾತ್ರಿ 3 ತಾಸು ಪಂಪ್ಸೆಟ್ಗಳು ಚಾಲನೆಯಾಗುತ್ತಿವೆ.
ಹೇಗೂ ರೈತರು ರಾತ್ರಿಯಲ್ಲಿ ಗುದ್ದಲಿ ಹಿಡಿದು, ಬೆಳೆಗಳಿಗೆ ನೀರು ಹಾಯಿಸಲಾಗದು. ಟ್ಯಾಂಕ್ಗಳನ್ನು ನಿರ್ಮಿಸಿಕೊಂಡ ರೈತರು ಮಾತ್ರವೇ ರಾತ್ರಿ ನೀರನ್ನು ತುಂಬಿಸಿಕೊಂಡು, ಬೆಳಗ್ಗೆಯಾಗುತ್ತಲೇ ಬೆಳೆಗಳಿಗೆ ಹಾಯಿಸಿಕೊಳ್ಳಬಹುದು. ಆದರೆ, ಟ್ಯಾಂಕ್ ಕಟ್ಟಿಕೊಳ್ಳದವರ ನೀರು ಪೋಲಾಗುತ್ತಿದೆ.
ನಡುರಾತ್ರಿ ಕೊಡ : ಅಲ್ಪನಿಗೆ ಐಶ್ವರ್ಯ ಬಂದ್ರೆ ನಡುರಾತ್ರಿ ಕೊಡೆ ಹಿಡಿದ ಎನ್ನುವ ಗಾದೆ ಮಾತಿದೆ. ಆದರೆ, ಈಗ ಭೀಕರ ಬರದಿಂದ ಕುಡಿಯುವ ನೀರಿಗೆ ಪಡಬಾರದು ಪಾಡುಪಡುತ್ತಿರುವ ಗ್ರಾಮೀಣ ಜನರು ನಡುರಾತ್ರಿ ಕೊಡ ಹಿಡಿದು ತೋಟ-ತುಡಿಕೆಗಳಲ್ಲಿರುವ ಕೊಳವೆ ಬಾವಿಗಳತ್ತ ಹೋಗುತ್ತಿದ್ದಾರೆ.
ಸಾಗುವ ಹಾದಿಯಲ್ಲಿ ಕಲ್ಲು, ಮುಳ್ಳು, ಹಾವು, ಚೇಳುಗಳ ಕಾಟವಿದೆ. ಬೆಟ್ಟ-ಗುಡ್ಡ, ಕಾಡಿನಿಂದ ಆವರಿಸಿರುವ ಈ ಜಿಲ್ಲೆಯ ಬಹುತೇಕ ಕಡೆ ಕರಡಿ, ಚಿರತೆ, ಆನೆ, ಕಾಡು ಹಂದಿಗಳ ಹಾವಳಿಯೂ ಉಂಟು. ಕೊಡ ನೀರಿಗಾಗಿ ಹೋದವರು ಪ್ರಾಣವನ್ನು ಮುಷ್ಟಿಯಲ್ಲಿಟ್ಟುಕೊಳ್ಳುವ ಸ್ಥಿತಿ ಇದೆ.
ಗಂಭೀರ ಸಮಸ್ಯೆ: ರಾತ್ರಿ ನೀರು ತರಲು ಕೊಡ ಹಿಡಿದು ಕೆಲವರು ಆಯತಪ್ಪಿ ಬಿದ್ದು, ಗಾಯಗೊಂಡಿದ್ದಾರೆ. ಈ ಪೈಕಿ ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿಯ ಸರೋಜಮ್ಮ ಪ್ರಕರಣ ತಾಜಾ ನಿದರ್ಶನ. ನೀರು ತರಲು ಹೋಗಿ ಬಾವಿಗೆ ಬಿದ್ದ ಆಕೆ ಗಂಭೀರ ಗಾಯಗಳೊಂದಿಗೆ ನರಳುತ್ತಿದ್ದಾರೆ.
ಬೆಸ್ಕಾಂ ಧೋರಣೆಯಿಂದ ಅದೆಷ್ಟೋ ಗ್ರಾ.ಪಂ.ಗಳು ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲಾಗದೆ ಜನರ ಶಾಪಕ್ಕೆ ಗುರಿಯಾಗಿವೆ. ಗ್ರಾಮೀಣ ಭಾಗಕ್ಕೆ ಈ ಹಿಂದೆ ನೀಡುತ್ತಿದ್ದಂತೆ ಹಗಲು 4 ಮತ್ತು ರಾತ್ರಿ 2 ತಾಸು ತ್ರೀಫೇಸ್ ವಿದ್ಯುತ್ ಪೂರೈಸಬೇಕೆನ್ನುವ ಒತ್ತಡ ಹೆಚ್ಚಿದೆ. ಈ ನಿಟ್ಟಿನಲ್ಲಿ ಮತ್ತೊಂದು ಹೋರಾಟಕ್ಕೆ ರೈತರು ಸಜ್ಜಾಗುವ ಸಾಧ್ಯತೆ ಇದೆ.
- ಮತ್ತೀಕೆರೆ ಜಯರಾಮ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.