ಕುಮಾರಸ್ವಾಮಿ ಹಣಿಯಲು ಚಕ್ಯವ್ಯೂಹ
ಕ.ಪ್ರ.ವಾರ್ತೆ ರಾಮನಗರ ಮಾ.26
ಪ್ರತಿಷ್ಠಿತ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ವಿರೋಧಿ ಬಣದ ಧ್ರುವೀಕರಣಕ್ಕೆ ವೇದಿಕೆ ಸಜ್ಜಾಗುತ್ತಿದೆ. ಪ್ರಸಕ್ತ ಚುನಾವಣೆಯಲ್ಲಿ ಶತಾಯ ಗತಾಯ ಕುಮಾರಸ್ವಾಮಿ ಅವರನ್ನು ಹಣಿಯಲು ಪಣತೊಟ್ಟಿರುವ ವಿರೋಧಿಗಳು ಚಕ್ಯವ್ಯೂಹ ರಚಿಸಲು ಹೊರಟಿದ್ದಾರೆ.
ಕಳೆದೊಂದು ದಶಕದಿಂದ ಈಚೆಗೆ ರಾಮನಗರದಲ್ಲಿ ಪ್ರಭುತ್ವ ಸಾಧಿಸಿರುವ ಕುಮಾರಸ್ವಾಮಿ ಅವರೆದುರು ಈಗ ಸಾಕಷ್ಟು ಸವಾಲುಗಳು ಎದುರಾಗಿವೆ. ಒಂದೆಡೆ ವಿರೋಧಿ ಪಾಳಯ ಒಗ್ಗೂಡುತ್ತಿದ್ದರೆ, ಮತ್ತೊಂದೆಡೆ ಸ್ವಪಕ್ಷೀಯ ನಂಬಿಕಸ್ಥ ಮುಖಂಡರ ಅಸಡ್ಡೆಯಿಂದ ಈ ಬಾರಿ ಚುನಾವಣೆ ಸ್ವತಃ ಅವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ.
ಕಾಂಗ್ರೆಸ್ ಕಾರ್ಯತಂತ್ರ: ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಹೊರ ಹೋದವರು ಮತ್ತು ಕುಮಾರಸ್ವಾಮಿ ಅವರಿಂದ ಸಿಡಿದು ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡವರನ್ನು ಸೆಳೆಯಲು ಕಾಂಗ್ರೆಸ್ ಮುಖಂಡರು ಕಾರ್ಯತಂತ್ರ ಹೆಣೆದಿದ್ದಾರೆ. ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಮರಿದೇವರು, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ನೇತೃತ್ವದಲ್ಲಿ ನಡೆಸಲಾದ ಗೌಪ್ಯ ಸಭೆಯಲ್ಲಿ ಹೊರಗಿನವರ ಪಕ್ಷ ಸೇರ್ಪಡೆ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ.
ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶೇಷಾದ್ರಿ ಮತ್ತು ಕೆಎಂಎಫ್ ನಿರ್ದೇಶಕ ಪಿ.ನಾಗರಾಜು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಲಾಗಿದೆ. ಇವರಿಬ್ಬರೂ ಮೂಲತಃ ಕಾಂಗ್ರೆಸ್ನಿಂದ ರಾಜಕಾರಣ ಪ್ರಾರಂಭಿಸಿ ಜೆಡಿಎಸ್ ಗೂಡು ಸೇರಿದ್ದರು. ಅಲ್ಲಿಂದ ಬಿಜೆಪಿಗೆ ಹಾರಿದ್ದರು. ಶೇಷಾದ್ರಿ ಅವರನ್ನು ಜೆಡಿಎಸ್ ಸೇರ್ಪಡೆ ಮಾಡಿಕೊಳ್ಳುವ ವಿಷಯ ಚರ್ಚೆ ಹಂತದಲ್ಲೇ ಮುಂದುವರೆದಿದೆ. ತನ್ಮಧ್ಯೆ, ಕಾಂಗ್ರೆಸ್ ಗಾಳ ಬೀಸಿದೆ.
ಜೋಡಿ ಹಕ್ಕಿಯ ನಡೆ: ಶೇಷಾದ್ರಿ ಮತ್ತು ನಾಗರಾಜು ಅವರಿಬ್ಬರೂ ಕುಮಾರಸ್ವಾಮಿ ಆಪ್ತ ಕೂಟದಲ್ಲಿದ್ದವರು. ಭಿನ್ನಾಭಿಪ್ರಾಯದಿಂದ ತೊರೆದು ಹೋಗಿದ್ದರು. ಈ ಜೋಡಿ ಹಕ್ಕಿ ಈಗ ಬಿಜೆಪಿ ಗೂಡು ತೊರೆದು ಹಾರಲು ಉತ್ಸುಕವಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಕಡೆಯಿಂದ ಮಾತುಕತೆ ಮುಂದುವರೆದಿದೆ. ಜೆಡಿಎಸ್ನಿಂದ ಸಕಾರಾತ್ಮಕ ಸ್ಪಂದನೆ ಬರದಿದ್ದರೆ ಕಾಂಗ್ರೆಸ್ ಸೇರ್ಪಡೆ ಖಚಿತವೆನ್ನಲಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ವಯಂ ನಿವೃತ್ತ ಕಂದಾಯ ನೌಕರ ಮರಿದೇವರು ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಹಣದ ಹೊಳೆ ಹರಿಸುತ್ತಿರುವ ಅವರು ಖರ್ಚು ಎಷ್ಟಾದರೂ ಸರಿಯೇ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ನಾಮಬಲ ಮತ್ತು ಹಣ ಬಲದ ನಡುವೆ ನಡೆದ ನಗರಸಭೆ ಸೆಣೆಸಾಟದಲ್ಲಿ ಮರಿದೇವರು ಅವರ ಮನಿ ಮಹಿಮೆ ಹೆಚ್ಚು ಕೆಲಸ ಮಾಡಿದ್ದು, ಜೆಡಿಎಸ್ಗೆ ಶಾಕ್ ನೀಡಿದ ತಾಜಾ ನಿದರ್ಶನವಿದೆ.
ಎಚ್ಡಿಕೆ ಕ್ಷೇತ್ರ ಪ್ರಾಬಲ್ಯ: ರಾಮನಗರದಲ್ಲಿ ಕುಮಾರಸ್ವಾಮಿ 2004ರಲ್ಲಿ 25 ಸಾವಿರ ಮತಗಳ ಅಂತರ, 2008ರಲ್ಲಿ 47 ಸಾವಿರ ಮತಗಳ ಅಂತರದ ಗೆಲವು ದಾಖಲಿಸಿದ್ದಾರೆ. 2009ರ ಲೋಕಸಭೆ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲಿ ಪ್ರಚಾರಕ್ಕೆ ಕಾಲಿಡದೆಯೂ 60 ಸಾವಿರದಷ್ಟು ಅಧಿಕ ಮತಗಳನ್ನು ಪಡೆದಿದ್ದರು.
ಸಂಸದರಾದ ಬಳಿಕ ಕುಮಾರಸ್ವಾಮಿ ರಾಜಿನಾಮೆಯಿಂದ ತೆರವಾದ ರಾಮನಗರ ಕ್ಷೇತ್ರದ ಮರು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ರಾಜು ಗೆಲವಿನ ಅಂತರ 22 ಸಾವಿರಕ್ಕೆ ಕುಗ್ಗಿತ್ತು. ಆ ಚುನಾವಣೆಯಲ್ಲಿ ಕುಮಾರಸ್ವಾಮಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಇಲ್ಲವೇ ತಮಗೊಂದು ಬಾಟಲಿ ವಿಷ ಕೊಡಿ ಎಂದು ಕಣ್ಣೀರಿಡುವ ಸ್ಥಿತಿ ಬಂದೊದಗಿತ್ತು. ಬಿಜೆಪಿ ಪಾಲುದಾರಿಕೆಯೊಂದಿಗೆ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 2007ರಲ್ಲಿ ರಾಮನಗರವನ್ನು ಜಿಲ್ಲೆಯಾಗಿ ಘೋಷಿಸಿದರು. ಕ್ಷೇತ್ರಾಭಿವೃದ್ಧಿಗೆ ಭರಪೂರ ಕೊಡುಗೆಗಳನ್ನು ನೀಡಿದ್ದಲ್ಲದೆ, ಜಿಲ್ಲಾ ಕೇಂದ್ರದ ಅಭಿವೃದ್ಧಿಗಾಗಿ ರು.1300 ಕೋಟಿ ಅನುದಾನ ಮಂಜೂರು ಮಾಡಿ ಕ್ಷೇತ್ರವನ್ನೇ ಬದಲಿಸಿದರು.
ವಿರೋಧಿಗಳಿಗೆ ಅಸ್ತ್ರ: ರಾಮನಗರವನ್ನು ಕುಡಿಯುವ ನೀರಿನ ಬವಣೆ ಕಾಡುತ್ತಿದೆ. ವಾರಕ್ಕೊಮ್ಮೆಯೂ ಕುಡಿಯುವ ನೀರಿಲ್ಲದ ಸ್ಥಿತಿ ಇಲ್ಲಿದೆ. ಪಡಿತರ ಚೀಟಿ ಹಾಗೂ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ಸೌಲಭ್ಯ ರದ್ದತಿ, ಲಂಗು-ಲಗಾಮಿಲ್ಲದಂತೆ ವರ್ತಿಸುತ್ತಿರುವ ಅಧಿಕಾರಿಗಳ ಸ್ವೇಚ್ಛಾಚಾರದಂತಹ ಪ್ರಕರಣಗಳಿಗೆ ಕುಮಾರಸ್ವಾಮಿಯೇ ಹೊಣೆ ಎಂದು ವಿರೋಧಿಗಳು ಪ್ರಚಾರ ನಡೆಸುತ್ತಿದ್ದಾರೆ. ತಲಾ ರು.5 ಸಾವಿರ ಪಾವತಿಸಿ ಮನೆಯ ಹಕ್ಕುಪತ್ರಕ್ಕೆ ಹಂಬಲಿಸುತ್ತಿರುವ ಫಲಾನುಭವಿಗಳಿಗೆ ಇನ್ನೂ ಸೂರು ಕಲ್ಪಿಸಿಲ್ಲ. ರಾಮನಗರವನ್ನು ಜಿಲ್ಲೆಯಾಗಿ ಮಾಡಿದ್ದೇ ಇಲ್ಲಿನ ಬಡ ಬಗ್ಗರಿಗೆ ಮುಳುವಾಗಿದೆ. ಜಿಲ್ಲೆ ರಚನೆ ಬಳಿಕ ಇಲ್ಲಿನ ಜಮೀನಿನ ಬೆಲೆ ಹೆಚ್ಚಾಗಿದ್ದು, ಸೂರಿಲ್ಲದವರು ನಿವೇಶನವನ್ನು ಖರೀದಿಸಿ ಸ್ವಂತದ್ದೊಂದು ಮನೆ ನಿರ್ಮಿಸಿಕೊಳ್ಳಬೇಕೆನ್ನುವ ಆಸೆ ಈಡೇರುತ್ತಿಲ್ಲ. ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆ ಮಾಡಿದ್ದೇ ತಪ್ಪು ಎನ್ನುವ ಟೀಕಾಸ್ತ್ರ ಹೂಡಲಾಗುತ್ತಿದೆ.
ನಂಬಿಕಸ್ಥರ ವೈಫಲ್ಯ: ದಳಪತಿ ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ನಂಬಿಕಸ್ಥ ಪಡೆಯಿಂದಲೂ ದೊಡ್ಡ ಪೆಟ್ಟು ತಿನ್ನುವಂತಾಗಿದೆ. ಕುಮಾರಸ್ವಾಮಿ ಬಂದಾಗ ನೂಕು ನುಗ್ಗಲಿನಲ್ಲಿ ವೇದಿಕೆ ಏರುವ ಮುಖಂಡರು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಪಕ್ಷ ಕಟ್ಟುವ ಕೆಲಸಕ್ಕೆ ಎಂದೂ ಕೈ ಹಾಕಿಲ್ಲ. ಪಕ್ಷ ಮತ್ತು ಕುಮಾರಸ್ವಾಮಿ ಹೆಸರೇಳಿಕೊಂಡು ರಿಯಲ್ ಎಸ್ಟೇಟ್, ಗುತ್ತಿಗೆ, ಲಾಬಿ ನಡೆಸಿ ಹೊಟ್ಟೆ ಹೊರೆದುಕೊಳ್ಳುವವರೇ ಇಲ್ಲಿ ಹೆಚ್ಚಾಗಿದ್ದಾರೆ. ನಾಯಕರ ಬಳಿ ಒಬ್ಬರ ಮೇಲೊಬ್ಬರು ಚಾಡಿ ಹೇಳಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್, ಕುಮಾರಸ್ವಾಮಿ ವಿರುದ್ಧ ಪ್ರತಿಪಕ್ಷಗಳ ಮುಖಂಡರ ಟೀಕೆ, ಆರೋಪಗಳಿಗೆ ಒಮ್ಮೆಯೂ ಸ್ಪಷ್ಟನೆ, ಪ್ರತ್ಯಾರೋಪ, ವಾಗ್ದಾಳಿ ನಡೆಸುವ ಗೋಜಿಗೆ ನಂಬಿಕಸ್ಥ ಪಡೆ ಮುಂದಾಗಿಲ್ಲ. ಬಡವರಿಗೆ ನಿವೇಶನ ಹಂಚಲು ಜಮೀನು ಖರೀದಿ, ಮನೆಗಳು ನಿರ್ಮಾಣ ಹಂತದಲ್ಲಿರುವುದನ್ನು ಜೆಡಿಎಸ್ ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಿಕೊಡುತ್ತಿಲ್ಲ. ಇದೆಲ್ಲಕ್ಕೂ ಎದುರಾಳಿ ಪಕ್ಷಗಳ ಮುಖಂಡರೊಂದಿಗೆ ರಿಯಲ್ ಎಸ್ಟೇಟ್, ಇತರೆ ವ್ಯಾವಹಾರಿಕ ಸಂಬಂಧ ಅಡ್ಡಿ ಕಾರಣ.
ಫಲಿಸದ ಪ್ರಯೋಗ: ಅಲ್ಪ ಸಂಖ್ಯಾತರ ಮತಗಳ ಓಲೈಕೆಗಾಗಿ ಅಪ್ಸರ್ ಆಗಾ ಅವರಿಗೆ ಜೆಡಿಎಸ್ನಿಂದ ಮೇಲ್ಮನೆ ಪ್ರವೇಶಾವಕಾಶ ಕಲ್ಪಿಸಲಾಯಿತು. ಆದರೆ, ಕುಮಾರಸ್ವಾಮಿ ಅವರ ಆ ಪ್ರಯತ್ನ ನಗರಸಭೆ ಚುನಾವಣೆಯಲ್ಲಿ ಫಲಿಸಲಿಲ್ಲ. ರಾಮನಗರ ಕ್ಷೇತ್ರದ ಚಾಡಿಕೋರ ಮುಖಂಡರೇ ಜೆಡಿಎಸ್ ಪಾಲಿನ ನಿಜವಾದ ವಿಲನ್ಗಳಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ಸುತ್ತುವ ಭರದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಕುಮಾರಸ್ವಾಮಿ ಕ್ಷೇತ್ರದ ಕಡೆ ನಿಗಾ ವಹಿಸಲಿಲ್ಲ. ಈ ಅವಾಂತರಗಳಿಂದ ಪ್ರಸಕ್ತ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 3-4 ದಿನದ ಮಟ್ಟಿಗಾದರೂ ಠಿಕಾಣಿ ಹೂಡಲೇಬೇಕಾದ ಸ್ಥಿತಿ ಎದುರಾಗಿದೆ.
-ಮತ್ತೀಕೆರೆ ಜಯರಾಮ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.